ಭಾನುವಾರ, ಆಗಸ್ಟ್ 25, 2019
28 °C
ಹರಪನಳ್ಳಿ, ಹಡಗಲಿ, ಹಗರಿಬೊಮ್ಮನಳ್ಳಿ ಯಲ್ಲಿ ನೆರೆಹಾವಳಿ ಭೀತಿ: ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ

ತುಂಗಾ-ಭದ್ರಾದಿಂದ ಹೊರಹರಿವಿನ ಪ್ರಮಾಣ ಹೆಚ್ಚಳ

Published:
Updated:

ಬಳ್ಳಾರಿ: ತುಂಗಾ ಮತ್ತು ಭದ್ರಾದಿಂದ ಹೊರಹರಿಯುವ ನೀರಿನ ಪ್ರಮಾಣದಲ್ಲಿ ತೀವ್ರ ಹೆಚ್ಚಳವಾಗಿದ್ದು ಅಪಾರ ಪ್ರಮಾಣದಲ್ಲಿ ತುಂಗಾಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ಹರಪನಳ್ಳಿ, ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ನೆರೆಹಾವಳಿ ಭೀತಿ ಉಂಟಾಗಿರುವುದರಿಂದ ಗುರುವಾರ ರಾತ್ರಿ ಅಧಿಕಾರಿಗಳ ತುರ್ತು ಸಭೆ ನಡೆಸಿದ  ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

‘ಪ್ರತಿನಿತ್ಯ 10 ಟಿಎಂಸಿಅಡಿಯಷ್ಟು ನೀರು ತುಂಗಾಭದ್ರಾ ಜಲಾಶಯಕ್ಕೆ ನೀರು ಹರಿದುಬರುತ್ತಿದೆ. ಹರಪನಹಳ್ಳಿ, ಹಗರಿಬೊಮ್ಮನಳ್ಳಿ ಮತ್ತು ಹಡಗಲಿ ತಾಲೂಕಿನ ನದಿಪಾತ್ರದ ಗ್ರಾಮಗಳಿಗೆ ಕೂಡಲೇ ಅಧಿಕಾರಿಗಳು ತೆರಳಿ ಸಭೆ ನಡೆಸಿ ತುರ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ಅಲ್ಲಿನ ಗ್ರಾಮ ಪಂಚಾಯ್ತಿಯೊಂದಿಗೆ ಸಭೆ ನಡೆಸಬೇಕು. ನದಿಪಾತ್ರದಲ್ಲಿರುವ ಮನೆಗಳು ಹಾಗೂ ಮಣ್ಣಿನಗೋಡೆಯ ಮನೆಗಳಲ್ಲಿರುವ ಮಂದಿಯನ್ನು ಸ್ಥಳಾಂತರಿಸಬೇಕು. ಅಧಿಕಾರಿಗಳು ತಮ್ಮ ಮೊಬೈಲ್‌ಫೋನ್‌ ಸಂಖ್ಯೆಗಳನ್ನು ನೀಡಬೇಕು’ ಎಂದರು.

ರಕ್ಷಣಾ ತಂಡಗಳು: ತುರ್ತು ಸಂದರ್ಭದಲ್ಲಿ ಜನ-ಜಾನುವಾರುಗಳನ್ನು ರಕ್ಷಣೆ ಮಾಡಲು ಹಗರಿಬೊಮ್ಮನಹಳ್ಳಿ ಮತ್ತು ಹರಪನಹಳ್ಳಿಯಲ್ಲಿ ಎರಡು ಬೋಟ್‌ಗಳಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಆರೋಗ್ಯ ಸಿಬ್ಬಂದಿಯೂ ಇರಬೇಕು’ ಎಂದರು.

ಪ್ರತಿನಿತ್ಯ ವರದಿ ನೀಡಿ: ‘ಜನ-ಜಾನುವಾರು ಹಾಗೂ ಮನೆಗಳ ಹಾನಿ ಕುರಿತಂತೆ ನಿಗದಿತ ನಮೂನೆಯಲ್ಲಿ ಪ್ರತಿದಿನವೂ ವಿವರಗಳನ್ನು ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರು ಸಲ್ಲಿಸಬೇಕು. ಹಾನಿಗಿಡಾದವರ ಕುಟುಂಬಕ್ಕೆ ವಿಪತ್ತು ನಿಧಿ ಅಡಿ ಮೂರು ದಿನದೊಳಗೆ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಯಾವುದೇ ಸಬೂಬು ಹೇಳಬಾರದು. ಅಗತ್ಯಬಿದ್ದರೆ ಶಿಷ್ಟಾಚಾರವನ್ನೂ ಬದಿಗೊತ್ತಬಹುದು’ ಎಂದು ಸ್ಪಷ್ಟಪಡಿಸಿದರು.

‘ಕುರವತ್ತಿಯಲ್ಲಿ ಹಾನಿಯಾಗಿದೆ ಎಂಬ ಮಾಹಿತಿಯಿದ್ದು ಕೂಡಲೇ ಪರಿಹಾರ ಒದಗಿಸಬೇಕು. ಅವಶ್ಯವಿದ್ದರೆ ಗಂಜಿಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಅಂಥ ಸ್ಥಳಗಳನ್ನು ಗುರುತಿಸಿ ಪಟ್ಟಿ ಮಾಡಿಟ್ಟುಕೊಳ್ಳಿ. ನೆರೆಹಾವಳಿಯಿಂದ ರಸ್ತೆ ಮತ್ತು ಸೇತುವೆಗಳಿಗೆ ಹಾನಿ ವಿವರವನ್ನು ಒದಗಿಸಬೇಕು’ ಎಂದರು.

‘ಜಲಾಶಯದಿಂದ ನೀರು ಬಿಡುವಾಗ ನದಿಪಾತ್ರದೂದ್ದಕ್ಕೂ ಹಂಪಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಾನಿಯುಂಟಾಗದಂತೆ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ವಿವರ ಒದಗಿಸಬೇಕು’ ಎಂದರು.

ಸಹಾಯವಾಣಿ: ನೆರೆಹಾನಿಯಾದ ಸಂದರ್ಭದಲ್ಲಿ ಜನರಿಗೆ ತುರ್ತು ನೆರವಿಗೆ ಧಾವಿಸಬೇಕೆಂಬ ದೃಷ್ಟಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿ ಮತ್ತು ನಿರಂತರ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು. ದೂರು ಬಂದ ತಕ್ಷಣ ಸ್ಪಂದಿಸಬೇಕು’ ಎಂದರು.

‘ಮಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ನಿಯಂತ್ರಣಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಆರೋಗ್ಯಾಧಿಕಾರಿಗಳು ಸಂಭ್ಯಾವ ನೆರೆಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಆ ವ್ಯಾಪ್ತಿಯ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ಔಷಧಿಗಳಿರುವಂತೆ ನೋಡಿಕೊಳ್ಳಬೇಕು’ ಎಂದರು.

‘ಕೃಷಿ ಚಟುವಟಿಕೆಗಳಿಗಾಗಿ ಕಾಲುವೆಗಳಿಗೆ ಶುಕ್ರವಾರ ಬೆಳಿಗ್ಗೆಯಿಂದ ನೀರು ಹರಿಸಲಾಗುತ್ತದೆ. ಈಗಾಗಲೇ 50 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿದೆ’ಎಂದು ತುಂಗಾಭದ್ರಾ ಮಂಡಳಿ ಅಧೀಕ್ಷಕ ವೆಂಕಟರಮಣ ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಉಪಸ್ಥಿತರಿದ್ದರು.

Post Comments (+)