ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಜನಜಾಗೃತಿ ಸಮಾವೇಶ ಮುಂದೂಡಲಿ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಗ್ರಹ
Last Updated 31 ಡಿಸೆಂಬರ್ 2019, 15:28 IST
ಅಕ್ಷರ ಗಾತ್ರ

ಮಂಗಳೂರು: ‘ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದ ಪ್ರತಿಭಟನೆ ವೇಳೆ ಗಲಭೆ, ಗೋಲಿಬಾರ್‌ ನಡೆದು ನಗರದಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಜನಜಾಗೃತಿ ಸಮಾವೇಶ ಆಯೋಜಿಸಬಾರದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಗ್ರಹಿಸಿದೆ.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌, ಶಾಸಕ ಯು.ಟಿ.ಖಾದರ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ, ‘ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಮಾವೇಶದ ಹೆಸರಿನಲ್ಲಿ ಜಿಲ್ಲೆಯಲ್ಲಿ ಮತ್ತೆ ಗೊಂದಲ ಮೂಡಿಸಲು ಯತ್ನಿಸಬಾರದು’ ಎಂದು ಒತ್ತಾಯಿಸಿದರು.

‘ಈಗ ರಾಜಕೀಯ ಸಮಾವೇಶಕ್ಕೆ ಸೂಕ್ತವಾದ ಸಮಯವಲ್ಲ. ಅನೇಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಪ್ರತಿಭಟನೆ, ಸಭೆಗಳಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಕಾಂಗ್ರೆಸ್‌ ಸಂಸ್ಥಾಪನಾ ದಿನದಂದು ನಡೆಯಬೇಕಿದ್ದ ಪಥಸಂಚಲನವನ್ನೇ ನಾವು ರದ್ದು ಮಾಡಿದ್ದೇವೆ. ಬಿಜೆಪಿ ಸಮಾವೇಶವನ್ನು ಮುಂದೂಡಬೇಕು’ ಎಂದು ಹರೀಶ್‌ ಕುಮಾರ್‌ ಆಗ್ರಹಿಸಿದರು.

ಕಾಂಗ್ರೆಸ್‌ ಪಕ್ಷ ಭಾರತ್‌ ಬಚಾವವೋ ಹೆಸರಿನಡಿ ನೆಹರೂ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ಪ್ರಕ್ಷುಬ್ಧ ಪರಿಸ್ಥಿತಿಯ ಕಾರಣದಿಂದ ಅದನ್ನೂ ಕೈಬಿಟ್ಟಿತು. ಈಗ ಬಿಜೆಪಿ ರಾಜಕೀಯಕ್ಕಾಗಿ ಸಮಾವೇಶ ಆಯೋಜಿಸುವುದು ಸರಿಯಲ್ಲ ಎಂದರು.

ನ್ಯಾಯಾಂಗ ತನಿಖೆಗೆ ಆಗ್ರಹ

ಯು.ಟಿ.ಖಾದರ್‌ ಮಾತನಾಡಿ, ‘ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮಾರ್ಗಸೂಚಿಯಂತೆ ಗೋಲಿಬಾರ್ ಪ್ರಕರಣದ ಕುರಿತು ಮ್ಯಾಜಿಸ್ಟೀರಿಯಲ್‌ ವಿಚಾರಣೆ ಮತ್ತು ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವೆರಡರ ಜೊತೆ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂಬ ನಮ್ಮ ಬೇಡಿಕೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ’ ಎಂದರು.

ಪೊಲೀಸರ ರಕ್ಷಣೆಗಾಗಿ ಎಫ್‌ಐಆರ್‌ನಲ್ಲಿ ಮೃತರ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ನ್ಯಾಯಯುತ ನಿರ್ಧಾರ ಅಲ್ಲ. ಪರಿಹಾರ ವಿತರಣೆ ಕುರಿತು ಸರ್ಕಾರ ಶೀಘ್ರ ತೀರ್ಮಾನಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಪೊಲೀಸ್‌ ಹಿಂತೆಗೆತಕ್ಕೆ ಒತ್ತಾಯ

ಐವನ್‌ ಡಿಸೋಜ ಮಾತನಾಡಿ, ‘ನಗರದಲ್ಲಿ ದೇವಸ್ಥಾನ, ಸಮೀದಿ, ಚರ್ಚ್‌ ಎಲ್ಲ ಕಡೆಗಳಲ್ಲೂ ಪೊಲೀಸರೇ ಕಾಣುತ್ತಿದ್ದಾರೆ. ಇದರಿಂದ ಭಯದ ವಾತಾವರಣ ಉಂಟಾಗಿದೆ. ತಕ್ಷಣವೇ ಪೊಲೀಸ್‌ ನಿಯೋಜನೆಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT