ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಸಹಭಾಗಿತ್ವದಲ್ಲಿ ‘ಗೋಬರ್‌ಧನ್’ ಜಾರಿಗೆ ಮುಂದಾದ ಉತ್ತರ ಕನ್ನಡ ಜಿ.ಪಂ

ಗೋಶಾಲೆ ಇರುವಲ್ಲಿ ಘಟಕ ಸ್ಥಾಪನೆಗೆ ಸಿದ್ಧತೆ
Last Updated 1 ಜೂನ್ 2020, 1:49 IST
ಅಕ್ಷರ ಗಾತ್ರ

ಶಿರಸಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಗೋಬರ್‌ಧನ್’ ಯೋಜನೆಯನ್ನು ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಷಿಪ್) ಮೂಲಕ ಅನುಷ್ಠಾನಗೊಳಿಸಲು ಉತ್ತರ ಕನ್ನಡ ಜಿಲ್ಲಾ ಪಂಚಾಯ್ತಿ ಮುಂದಾಗಿದೆ.

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಪ್ರಾಯೋಗಿಕವಾಗಿ ಶಿರಸಿ ತಾಲ್ಲೂಕಿನ ವಾದಿರಾಜ ಮಠ ಹಾಗೂ ಸಿದ್ದಾಪುರ ತಾಲ್ಲೂಕಿನ ಭಾನ್ಕುಳಿ ಮಠದಲ್ಲಿ ಈ ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ.

‘ಸಮುದಾಯಕ್ಕೆ ನೆರವಾಗುವ ಉದ್ದೇಶದಿಂದ ಜಾನುವಾರು ಸೆಗಣಿ, ಹಸಿ ಕಸ ಹೆಚ್ಚು ಉತ್ಪತ್ತಿಯಾಗುವ ಗೋಶಾಲೆ, ಮಠ, ಅನ್ನಛತ್ರ ಇಂತಹ ಸ್ಥಳಗಳಿಗೆ ಆದ್ಯತೆ ನೀಡಲಾಗಿದೆ. ಅಲ್ಲಿ ಲಭ್ಯವಾಗುವ ತ್ಯಾಜ್ಯ ಆಧರಿಸಿ, 60 ಕ್ಯೂಬಿಕ್ ಮೀಟರ್ ಗಾತ್ರದ ₹ 14.5 ಲಕ್ಷ ವೆಚ್ಚದ ಗೋಬರ್ ಗ್ಯಾಸ್ ಘಟಕಕ್ಕೆ ಯೋಜನೆ ರೂಪಿಸಲಾಗಿದೆ. ಶೇ 50:50 ಅನುಪಾತದಲ್ಲಿ ಯೋಜನಾ ವೆಚ್ಚ ಭರಿಸಲಾಗುತ್ತದೆ’ ಎಂದು ಸ್ವಚ್ಛ ಭಾರತ ಮಿಷನ್‌ನ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕ ಸೂರ್ಯನಾರಾಯಣ ಭಟ್ಟ ತಿಳಿಸಿದರು.

‘ಜಿಲ್ಲೆಯಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒತ್ತು ನೀಡಲು ಜಿಲ್ಲಾ ಪಂಚಾಯ್ತಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ಗೋಬರ್ ಗ್ಯಾಸ್‌ ಅನ್ನು ಹೆಚ್ಚು ಪ್ರಚಲಿತಕ್ಕೆ ತರುವ ಪ್ರಯತ್ನ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ ರೂಪಿಸಿದ ಈ ಕಾರ್ಯಕ್ರಮವನ್ನು, ರಾಜ್ಯ ಮಟ್ಟದಲ್ಲಿ ಗುರುತಿಸಿದ್ದು, ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ 10 ಘಟಕ ನಿರ್ಮಿಸಲು ಸ್ವಚ್ಛ ಭಾರತ್ ಮಿಷನ್ ಯೋಜನೆಯ ಆಯುಕ್ತರು ಸಲಹೆ ಮಾಡಿದ್ದಾರೆ. 15ನೇ ಹಣಕಾಸಿನ ಯೋಜನೆಯಡಿ ಅನುದಾನ ಬಳಕೆಗೂ ಅವಕಾಶ ಕಲ್ಪಿಸಲಾಗಿದೆ’ ಎಂದು ಯೋಜನೆಯ ಅನುಷ್ಠಾನಕ್ಕೆ ಮುತುವರ್ಜಿವಹಿಸಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಪ್ರತಿಕ್ರಿಯಿಸಿದರು.

‘ಪಶು ಸಂಗೋಪನೆಗೆ ಹೆಚ್ಚು ಪ್ರೇರಣೆ ನೀಡುತ್ತಿರುವ ಜತೆಗೆ ಅದರ ಉಪ ಉತ್ಪನ್ನಗಳ ಸದ್ಬಳಕೆಗೆ ಮುಂದಾಗಬೇಕಾಗಿದೆ. ಸೆಗಣಿಯಿಂದ ಗೋಬರ್ ಗ್ಯಾಸ್ ಉತ್ಪಾದನೆ ಮಾಡಿ, ಅಡುಗೆಗೆ ಬಳಕೆ ಮಾಡಿದರೆ ಎಲ್‌ಪಿಜಿ ಗ್ಯಾಸ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಅಡುಗೆ ಸಿದ್ಧವಾಗುವ ಅನ್ನಛತ್ರಗಳಲ್ಲಿ ಈ ಪುನರುತ್ಪಾದಿತ ಇಂಧನ ಬಳಕೆ ಹೆಚ್ಚಬೇಕು. ಪಿಪಿಪಿ ಮಾದರಿ ಮೂಲಕ ಇದನ್ನು ಯಶಸ್ವಿಗೊಳಿಸಬಹುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಿಪಿಪಿ ಮಾದರಿಯಲ್ಲಿ ಗೋಬರ್‌ಧನ್ ಯೋಜನೆಯನ್ನು ರಾಜ್ಯದಲ್ಲೇ ಪ್ರಥಮವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ
– ಮೊಹಮ್ಮದ್ ರೋಶನ್,
ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT