ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಶಿಕ್ಷಣ ಕೋರ್ಸ್: ಆರ್ಥಿಕ ಹಿಂದುಳಿದವರಿಗೂ ಮೀಸಲಾತಿ

‘ಜ್ಞಾನದೇಗುಲ’ದಲ್ಲಿ ಸಿಇಟಿ ಗೊಂದಲಗಳಿಗೆ ಪರಿಹಾರ
Last Updated 25 ಮೇ 2019, 17:40 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಈ ಬಾರಿಯಿಂದಲೇ ಶೇ 10ರಷ್ಟು ಸೀಟು ಲಭಿಸುವ ಸಾಧ್ಯತೆ ಇರುವುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬಹಿರಂಗಪಡಿಸಿದೆ.

ನಗರದ ಜಯಮಹಲ್‌ ಅರಮನೆ ಮೈದಾನದಲ್ಲಿ ಶನಿವಾರದಿಂದ ಆರಂಭವಾದ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿರುವ 11ನೇ ವರ್ಷದ ‘ಎಡ್ಯುವರ್ಸ್‌: ಜ್ಞಾನದೇಗುಲ’ ಶೈಕ್ಷಣಿಕ ಮೇಳದಲ್ಲಿ ಸಿಇಟಿ ಬಗ್ಗೆ ಮಾಹಿತಿ ನೀಡಿದ ಕೆಇಎ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್‌.ರವಿ ಅವರು ಈ ಮಾಹಿತಿ ನೀಡಿದರು.

‘ಜೂನ್‌ ಮೊದಲ ವಾರದಿಂದಲೇ ಕೌನ್ಸೆಲಿಂಗ್‌ ಆರಂಭವಾಗಲಿದೆ. ಅಷ್ಟರೊಳಗೆ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ10ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಆದೇಶ ಹೊರಡಿಸಿದರೆ ಹಾಗೂ ಅದಕ್ಕಾಗಿ ಶೇ 10ರಷ್ಟು ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಸಮ್ಮತಿಸಿದರೆ ಹಲವಾರು ಮಂದಿಗೆ ಈ ಶೈಕ್ಷಣಿಕ ವರ್ಷದಿಂದಲೇ ಪ್ರಯೋಜನ ಸಿಗಲಿದೆ. ಇದು ಜಾರಿಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕುಟುಂಬದ ವಾರ್ಷಿಕ ವರಮಾನ ₹ 8 ಲಕ್ಷದ ಮಿತಿ ಹಾಕಲಾಗಿದೆ. ಹೀಗಾಗಿಪೋಷಕರು ತಕ್ಷಣ ತಹಶೀಲ್ದಾರ್‌ ಅವರಿಂದ ಆದಾಯ ಪ್ರಮಾಣಪತ್ರ ಮಾಡಿಸಿಟ್ಟುಕೊಳ್ಳಬೇಕು. ಈಗಲೇ ಮಾಡಿಸಿದರೆ ಕೊನೆ ಕ್ಷಣದ ಗೊಂದಲ ನಿವಾರಿಸಿಕೊಳ್ಳಬಹುದು’ ಎಂದರು.

‘ಗ್ರಾಮೀಣ ಪ್ರದೇಶ, ಕನ್ನಡ ಮಾಧ್ಯಮದಲ್ಲಿ ಓದಿರುವ ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಾತಿ ದೊರೆಯಲಿದೆ. ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿವರೆಗೆ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ಪಡೆಯುವ ಅವಕಾಶವಿದೆ’ ಎಂದ ಅವರು,‘ವೃತ್ತಿಶಿಕ್ಷಣ ಕೋರ್ಸ್‌ಗಳಾದ ವೈದ್ಯಕೀಯ, ದಂತ ವೈದ್ಯಕೀಯ, ‌‌ ಹೋಮಿಯೋಪತಿ, ಎಂಜಿನಿಯರಿಂಗ್, ವಾಸ್ತುಶಿಲ್ಪ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ಕಾಲೇಜು ಆಯ್ಕೆಯಲ್ಲಿ ಕೂಡ ಮೆರಿಟ್‌ಗೆ ಆದ್ಯತೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಕಾಲೇಜು ಮತ್ತು ಕೋರ್ಸ್‌ ಆಯ್ಕೆಯ ವಿಚಾರವಾಗಿ ಆತುರದ ನಿರ್ಧಾರ ತೆಗೆದುಕೊಳ್ಳಬಾರದು’ ಎಂದರು.

‘ನಾಲ್ಕು ಹಂತದಲ್ಲಿ ಕೌನ್ಸೆಲಿಂಗ್ ನಡೆಯುತ್ತದೆ. ಮೂರನೇ ಹಂತದವರೆಗೆ ಕಾಲೇಜಿಗೆ ಪಾವತಿಸಿದಪ್ರವೇಶ ಶುಲ್ಕದಲ್ಲಿ ₹5 ಸಾವಿರ ಹೊರತುಪಡಿಸಿ, ಉಳಿದ ಹಣವನ್ನು ಹಿಂದಿರುಗಿಸಲಾಗುತ್ತದೆ. ಆದರೆ, ನಾಲ್ಕನೇ ಹಂತದ ಕೌನ್ಸೆಲಿಂಗ್‌ನಲ್ಲಿ ಕೂಡಸೀಟನ್ನು ಕೈಚೆಲ್ಲಿದರೆ ಯಾವುದೇ ಹಣ ವಾಪಸಾಗುವುದಿಲ್ಲ’ ಎಂದು ಮಾಹಿತಿ ನೀಡಿದರು.

ಮೇಳ ಉದ್ಘಾಟಿಸಿದ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಎನ್‌.ವಿದ್ಯಾಶಂಕರ್‌ ಅವರು ಹಲವು ಕಲಿಕಾ ಅವಕಾಶಗಳನ್ನು ತೆರೆದಿಟ್ಟರು. ಕಾಮೆಡ್‌–ಕೆ ಬಗ್ಗೆ ವಿಶೇಷಾಧಿಕಾರಿ ಡಾ.ಶಾಂತಾರಾಂ ನಾಯಕ್ ಮಾಹಿತಿ ನೀಡಿದರು. 65ಕ್ಕೂ ಅಧಿಕ ಶೈಕ್ಷಣಿಕ ಸಂಸ್ಥೆಗಳು ತಮ್ಮಲ್ಲಿರುವ ವಿಶೇಷ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದವು.

ಭಾನುವಾರವೂ ಈ ಶೈಕ್ಷಣಿಕ ಮೇಳ ನಡೆಯಲಿದ್ದು, ಸಿಇಟಿ, ಕಾಮೆಡ್‌–ಕೆ ಬಗ್ಗೆ ಮಾಹಿತಿ ನೀಡಲಾಗುವುದು.

ಇನ್ನೊಬ್ಬರಿಗೆ ಅನ್ಯಾಯ ಆಗದಿರಲಿ

ಸಿಇಟಿ ಮತ್ತು ಕಾಮೆಡ್‌–ಕೆ ಪ್ರತ್ಯೇಕವಾಗಿ ನಡೆಯುವ ಆಯ್ಕೆ ಪ್ರಕ್ರಿಯೆಗಳು. ಆದರೆ ಒಂದು ಕಾಲೇಜಿನ ಸೀಟು ಆಯ್ಕೆ ಮಾಡಿಕೊಂಡ ಬಳಿಕ ಕಾಲೇಜಿನ ಸೀಟನ್ನು ತಕ್ಷಣ ಬಿಡುವ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಇನ್ನೊಬ್ಬರಿಗೆ ಅನ್ಯಾಯ ಆಗುತ್ತದೆ. ದಾಖಲೆಗಳನ್ನು ಸಮರ್ಪಕವಾಗಿ ಪೂರೈಸಿದರೆ ಕೇವಲ ಒಂದು ಗಂಟೆಯಲ್ಲಿ ಕಾಮೆಡ್‌–ಕೆ ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿಯುತ್ತದೆ. ಇಲ್ಲಿ ಮೀಸಲಾತಿ ಎಂಬುದಿಲ್ಲ. ಮೆರಿಟ್ ಆಧಾರದಲ್ಲಷ್ಟೇ ಸೀಟುಗಳ ಆಯ್ಕೆ ನಡೆಯುತ್ತದೆ ಎಂದು ಕಾಮೆಡ್‌–ಕೆ ವಿಶೇಷಾಧಿಕಾರಿ ಡಾ.ಶಾಂತಾರಾಂ ನಾಯಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT