ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗ್ಳೂರ್‌ ಐ’ ಸಮಸ್ಯೆ ನಿಮಗೆ ಗೊತ್ತೆ?– ಡಾ.ಕೆ.ಭುಜಂಗಶೆಟ್ಟಿ

Last Updated 31 ಅಕ್ಟೋಬರ್ 2018, 20:26 IST
ಅಕ್ಷರ ಗಾತ್ರ

ಬೆಂಗಳೂರು: ‘ಮದ್ರಾಸ್‌ ಐ’ ಸಮಸ್ಯೆ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ, ‘ಬೆಂಗ್ಳೂರ್‌ ಐ’ ಸಮಸ್ಯೆ ಕುರಿತು ನಿಮಗೆ ಗೊತ್ತೆ? ಮುಂಜಾನೆ ವಾಯುವಿಹಾರಕ್ಕೆ ಹೋದಾಗ ಕಣ್ಣುರಿಯುವುದು, ಕಂಗಳಲ್ಲಿ ಗಳಗಳನೇ ನೀರು ಸುರಿಯುವುದು, ಕಣ್ಣು ಕೆಂಪಗಾಗುವುದು ಏಕೆಂಬುದು ನಿಮಗೆ ತಿಳಿದಿದೆಯೇ?

‘ನಗರದಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ವಿಶಿಷ್ಟ ಸಮಸ್ಯೆ ಇದು. ಹೆಚ್ಚುತ್ತಿರುವ ವಾಯುಮಾಲಿನ್ಯವೇ ಇದಕ್ಕೆ ಕಾರಣ. ಇಂತಹ ಸಮಸ್ಯೆಯಿಂದ ದೂರವಿರಬೇಕಾದರೆ ಮುಂಜಾನೆ ವಾಯುವಿಹಾರವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು’ ಎಂದು ಸಲಹೆ ನೀಡುತ್ತಾರೆ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗಶೆಟ್ಟಿ.

‘ಪ್ರಜಾವಾಣಿ’ ಬುಧವಾರ ಏರ್ಪಡಿಸಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಅವರು ಕಣ್ಣಿನ ಆರೈಕೆ ಕುರಿತ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಚಿಕಿತ್ಸೆ ಬಗ್ಗೆ ಜನರಲ್ಲಿ ಮನೆ ಮಾಡಿರುವ ಗೊಂದಲಗಳಿಗೆ ಪರಿಹಾರ ಸೂಚಿಸಿದರು.

‘ವಾತಾವರಣದಲ್ಲಿ ಮುಂಜಾನೆ ಮಾಲಿನ್ಯ ಪ್ರಮಾಣ ಕಡಿಮೆ ಇರುತ್ತದೆ ಎಂಬ ಕಲ್ಪನೆ ಹೆಚ್ಚಿನವರಲ್ಲಿದೆ. ಜನ ಭಾವಿಸಿರುವಂತೆ ಈ ನಗರದಲ್ಲಿ ಬೆಳಗಿನ ಜಾವದಲ್ಲಿ ಗಾಳಿ ಶುದ್ಧವಾಗಿರುವುದಿಲ್ಲ. ಮಾಲಿನ್ಯಕಾರಕ ಸೂಕ್ಷ್ಮಕಣಗಳ ಸಂಖ್ಯೆ ಹೆಚ್ಚಿರುತ್ತದೆ. ಇದು ಕಣ್ಣಿಗೆ ಅಪಾಯಕಾರಿ. ಕೆಲವರಲ್ಲಿ ಇದು ಉರಿ, ಅಲರ್ಜಿ ಉಂಟುಮಾಡುತ್ತದೆ. ಮುಂಜಾನೆಯೇ ವಾಯುವಿಹಾರಕ್ಕೆ ಹೋಗಬೇಕೆಂದಿದ್ದರೆ ಕನ್ನಡಕ ಧರಿಸುವುದು ಒಳ್ಳೆಯದು’ ಎಂದು ಅವರು ಸಲಹೆ ನೀಡಿದರು.

ದೇಶದ ‘ಸಿಲಿಕಾನ್‌ ವ್ಯಾಲಿ’ ಎಂದೇ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಕಂಪ್ಯೂಟರ್‌, ಐಪಾಡ್‌, ಮೊಬೈಲ್‌ನಂತಹ ಡಿಜಿಟಲ್‌ ಸಾಧನಗಳ ಬಳಕೆಯಿಂದ ಕಣ್ಣಿನ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆಯೂ ಡಾ.ಶೆಟ್ಟಿ ಎಚ್ಚರಿಸಿದರು.

ಕಣ್ಣಿನ ಕಾಳಜಿ: ಕಳವಳಗಳ ದೂರಮಾಡಿದ ‘ಕರೆ’

ಬೆಂಗಳೂರು: ಕಣ್ಣಿಗೆ ಶಾಶ್ವತ ಲೆನ್ಸ್‌ ಹಾಕಿಸಿದ್ದೇನೆ. ಇದರಿಂದ ಸಮಸ್ಯೆ ಆಗುತ್ತದೆಯೇ. ಕಣ್ಣಿನ ಪೊರೆಗೆ ಶಸ್ತ್ರಚಿಕಿತ್ಸೆ ಮಾಡಿಸಲೇ ಬೇಕಾ.

ಕಣ್ಣಿನ ಕಾಳಜಿ ಕುರಿತ ಹತ್ತು ಹಲವು ಸಮಸ್ಯೆಗಳಿಗೆ, ತಮ್ಮಲ್ಲಿರುವ ಗೊಂದಲಗಳಿಗೆ ಸಾರ್ವಜನಿಕರು ಬುಧವಾರ ಪರಿಹಾರ ಕಂಡುಕೊಂಡರು. ಜನರ ದುಗುಡಗಳನ್ನು ದೂರ ಮಾಡಲು ’ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮ ವೇದಿಕೆಯಾಯಿತು. ‘ನಾರಾಯಣ ನೇತ್ರಾಲಯ’ದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗ ಶೆಟ್ಟಿ ಜನರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು.

* ನನ್ನ ಮೊಮ್ಮಗಳಿಗೆ ಕೋಸು ಕಣ್ಣಿನ ಸಮಸ್ಯೆ (ಮೆಳ್ಳೆಗಣ್ಣು) ಸರಿ ಮಾಡಲು ಆಗುತ್ತದೆಯೇ?

– ವಸಂತಿ, ಕೋರಮಂಗಲ

ಡಾ.ಶೆಟ್ಟಿ: ಚಿಕ್ಕಂದಿನಲ್ಲೇ ಇದನ್ನು ಸರಿಪಡಿಸಬಹುದು. ನಿರ್ಲಕ್ಷ್ಯ ಮಾಡಿದರೆ ಮುಂದಕ್ಕೆ ತೊಂದರೆ ಆಗಬಹುದು. ತಕ್ಷಣವೇ ನೇತ್ರ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

* ಕ್ಯಾಟರ್‍ಯಾಕ್ಟ್‌ ಸರ್ಜರಿ ಆದ ಮೇಲೆ ಕಣ್ಣು ಭಾರ ಎನಿಸುತ್ತದೆ. ತಲೆ ಮೇಲೆ ಎತ್ತಿ ನೋಡುವುದೂ ಕಷ್ಟ?

– ಸಂಪತ್‌, ಜಯನಗರ

ಡಾ.ಶೆಟ್ಟಿ: ರೆಪ್ಪೆ ಸಮಸ್ಯೆ, ಕಣ್ಣಿನ ಗುಡ್ಡೆ ಅಥವಾ ನರಗಳು ದುರ್ಬಲಗೊಂಡಿರಬಹುದು. ಸಕ್ಕರೆ ಕಾಯಿಲೆ ಇದ್ದರೂ ಒಮ್ಮೊಮ್ಮೆ ಈ ರೀತಿ ಆಗುತ್ತದೆ. ನೇತ್ರವೈದ್ಯರನ್ನು ಕಾಣುವುದು ಒಳ್ಳೆಯದು

*ಮಗಳ ಕಣ್ಣಿಗೆ ಕಾಯಂ ಲೆನ್ಸ್‌ ಹಾಕಿಸಿದ್ದೇವೆ. ಮುಂದೆ ಸಮಸ್ಯೆ ಆಗುತ್ತದೆಯೇ. ಕನ್ನಡಕ ಬಳಸಬಹುದೇ?

– ಪ್ರೇಮಾ, ಕೊಪ್ಪ

ಡಾ.ಶೆಟ್ಟಿ: ತೊಂದರೆ ಆಗುವುದಿಲ್ಲ. ಪ್ರತಿ ವರ್ಷ ಕಣ್ಣಿನ ವೈದ್ಯರ ಬಳಿ ರೆಟಿನಾ ಪರೀಕ್ಷೆ ಮಾಡಿಸಿಕೊಳ್ಳಿ. ಯಾವುದೇ ಸಮಸ್ಯೆ ಆದರೂ ಪತ್ತೆ ಹಚ್ಚುವುದು ಸುಲಭವಾಗುತ್ತದೆ.

* ನನಗೆ ಸಮೀಪ ದೃಷ್ಟಿದೋಷ ಇದೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅಗತ್ಯ ಇದೆಯೆ?

ಹಂಸ, ಚೆನ್ನೇನಹಳ್ಳಿ, ದಾವಣಗೆರೆ

ಡಾ.ಶೆಟ್ಟಿ: 40 ವರ್ಷ ವಯಸ್ಸು ಆದ ಮೇಲೆ ಇಂತಹ ಸಮಸ್ಯೆ ಮಾಮೂಲಿ. ಇದಕ್ಕೆ ಚಾಳೀಸು, ಚಾಳೇಶ್ವರ ಇತ್ಯಾದಿಯಾಗಿ ಹೇಳುತ್ತಾರೆ. ಸರ್ಜರಿ ಅಗತ್ಯ ಇರುವುದಿಲ್ಲ.

* ಎಡ ಕಣ್ಣಿನ ಬಳಿ ಕಪ್ಪು ಕೂದಲಿನಂತಹ ವಸ್ತು ಓಡಾಡಿದ ಹಾಗೆ ಆಗುತ್ತದೆ?

– ಚಂದ್ರಶೇಖರ ಹಂದೆ, ಜೆಪಿ.ನಗರ

ಡಾ.ಶೆಟ್ಟಿ: ಇದರಿಂದ ತೊಂದರೆ ಸರಿಯಾಗಿರುವವರಿಗೂ ಹಾಗೆ ಆಗುತ್ತದೆ. ಶುಗರ್‌, ಬಿಪಿ ಇದ್ದವರಿಗೆ ಹೆಚ್ಚು.

*ಬೆಳಿಗ್ಗೆ ಕಣ್ಣಲ್ಲಿ ನೀರು ಬರುತ್ತದೆ. ಮಧ್ಯಾಹ್ನ ಕೆಂಪಾಗುತ್ತದೆ, ಎಣ್ಣೆ ಹಾಕಿದವರ ತರ ಕಾಣುತ್ತೆ?

– ರಾಜು, ಅಗ್ರಹಾರ ದಾಸರಹಳ್ಳಿ

ಡಾ.ಶೆಟ್ಟಿ: ಅಲರ್ಜಿಯಿಂದ ಆ ರೀತಿ ಆಗುತ್ತದೆ. ಕಣ್ಣಿಗೆ 15 ದಿನಗಳು ಬಿಸಿ ನೀರಿನ ಶಾಖ ಕೊಟ್ಟು ನೋಡಿ.

* ಕಣ್ಣಿಗೆ ಪೊರೆ ಬಂದಿದೆ. ಸರ್ಜರಿ ಮಾಡಿ ಲೆನ್ಸ್‌ ಹಾಕಬೇಕು ಎಂದು ವೈದ್ಯರು ಹೇಳಿದ್ದಾರೆ. ಇದರ ಅಗತ್ಯವಿದೆಯೇ?

– ಚಂದ್ರಶೇಖರ್‌, ಬೆಂಗಳೂರು ವಿಶ್ವವಿದ್ಯಾಲಯ

ಡಾ.ಶೆಟ್ಟಿ: ಸರ್ಜರಿ ಮೂಲಕ ಪೊರೆ ತೆಗೆದರೆ ದೃಷ್ಟಿ ಬರುತ್ತದೆ. ಪೊರೆ ತೆಗೆದ ಬಳಿಕ ಲೆನ್ಸ್‌ ಹಾಕಲಾಗುತ್ತದೆ.

* ಕಣ್ಣು ಉರಿ, ತಲೆನೋವು ಎಂದು ಕನ್ನಡಕ ಮಾಡಿಸಿದೆ. ಆದರೆ ತಲೆ ನೋವು ಕಡಿಮೆಯೇ ಆಗಿಲ್ಲ?

– ರೇಣುಕಾಪ್ರಸಾದ್‌, ಕನಕಪುರ

ಡಾ.ಶೆಟ್ಟಿ: ಕನ್ನಡಕದ ತೊಂದರೆ ಇದ್ದರೂ ಈ ಸಮಸ್ಯೆ ಆಗುತ್ತದೆ. ಅಲರ್ಜಿ ಆದರೂ ಆಗುತ್ತದೆ. ವೈದ್ಯರ ಸಲಹೆ ಪಡೆಯಬೇಕು.

* ಬಲಗಣ್ಣು ಪೊರೆ ಆಪರೇಷನ್‌ ಆಗಿದೆ. ಈಗ ಎಡಗಣ್ಣು ಮಸುಕಾಗಿದೆ. ಓದಲು ಬಹಳ ಸಮಸ್ಯೆಯಾಗುತ್ತಿದೆ. ಏನು ಮಾಡುವುದು?

– ಪ್ರೊ. ತಿಪ್ಪಾನಾಯಕ್, ಬೆಂಗಳೂರು

ಡಾ.ಶೆಟ್ಟಿ: ವಯೋ ಸಹಜವಾಗಿ ಆಗಿರಬಹುದು. ರೆಟಿನಾ ಸಮಸ್ಯೆಯೂ ಇರಬಹುದು.

ಊಟನಾದ್ರೂ ಬಿಡಿ, ಡ್ರಾಪ್ಸ್ ಹಾಕೋದು ಮರೀಬೇಡಿ!

‘ದಿನಕ್ಕೆ ಎರಡೂ ಹೊತ್ತಿನ ಊಟನಾದ್ರೂ ಬಿಡಿ, ಆದ್ರೆ ಕಣ್ಣಿಗೆ ಒಂದು ಡ್ರಾಪ್‌ ಹಾಕೋದು ಮರೀಬೇಡಿ’!

– ಇದು ಗ್ಲುಕೋಮಾ ಪೀಡಿತರಿಗೆ ಡಾ.ಭುಜಂಗ ಶೆಟ್ಟಿಯವರು ಹೇಳಿಕೊಟ್ಟ ‘ಮಂತ್ರ’.

‘ಚಾಚೂ ತಪ್ಪದೆ ಡ್ರಾಪ್ಸ್‌ ಹಾಕಿಕೊಳ್ಳಬೇಕು. ಡಾಕ್ಟ್ರು ಹೇಳಿದಾಗ ಉದಾಸೀನ ಮಾಡದೇ ಹೋಗಬೇಕು. ಆಗಮಾತ್ರ ಶಾಶ್ವತ ಅಂಧತ್ವದಿಂದ ತಪ್ಪಿಸಿಕೊಳ್ಳಬಹುದು. ನಮ್ಮ ನಡುವೆ ಅಸಂಖ್ಯಾತ ಜನ ಈ ಸಮಸ್ಯೆಗೆ ಗುರಿಯಾಗಿದ್ದಾರೆ. ಬಹಳಷ್ಟು ಜನಕ್ಕೆ ಇದರ ಅರಿವೂ ಇಲ್ಲ. ಇವರೆಲ್ಲ ತಮ್ಮ ಅಮೂಲ್ಯ ಕಣ್ಣುಗಳನ್ನು ಕಾಪಾಡಿಕೊಳ್ಳಲು ಕಣ್ಣಿನ ಆರೋಗ್ಯವನ್ನು ‘ವ್ರತ’ದಂತೆ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.

ನೋವು ಕೊಡದೇ, ಸದ್ದು ಗದ್ದಲವಿಲ್ಲದೆ ಆವರಿಸಿಕೊಳ್ಳುವ ‘ಸೈಲೆಂಟ್‌ ಕಿಲ್ಲರ್‌’ ಇದು. ಕಣ್ಣುಗಳ ನರಗಳ ಮೇಲೆ ವಿಪರೀತ ಒತ್ತಡ ಉಂಟಾಗಿ ಕಣ್ಣಿನ ನರ ಹಾನಿ ಆಗುವುದಕ್ಕೆ ಗ್ಲುಕೋಮಾ ಎನ್ನಲಾಗುತ್ತದೆ. ಕಣ್ಣಿನಲ್ಲಿ ದ್ರವದ ಸಂಚಲನವೂ ವ್ಯತ್ಯಯಗೊಳ್ಳುತ್ತದೆ. ಅಚ್ಚರಿ ಎಂದರೆ, ರೋಗ ಲಕ್ಷಣಗಳು ಗಮನಕ್ಕೆ ಬರುವುದಿಲ್ಲ.

ನಿಧಾನವಾಗಿ ಆವರಿಸುವ ಗ್ಲುಕೋಮಾವನ್ನು ಈ ವೈದ್ಯ ಬಣ್ಣಿಸುವುದು ಹೀಗೆ; ‘silent thief of sight’, ಅಂದರೆ ಸದ್ದಿಲ್ಲದೆ ದೃಷ್ಟಿಯನ್ನು ಕಸಿಯುವ ಚೋರ!ಹಾಗಿದ್ದರೆ, ಇದಕ್ಕೆ ಪರಿಹಾರವೇ ಇಲ್ಲವೆ ಎಂಬ ಪ್ರಶ್ನೆಗೆ ಅವರ ನಿರ್ದಾಕ್ಷಿಣ್ಯದ ಉತ್ತರ, ‘ಇಲ್ಲ’.

‘ಬಿ.ಪಿ ಮತ್ತು ಶುಗರ್‌ಗಳನ್ನು ಹೇಗೆ ಗುಣಪಡಿಸಲು ಸಾಧ್ಯವಿಲ್ಲವೋ, ಅದೇ ರೀತಿ ಗ್ಲುಕೋಮಾವನ್ನೂ ಗುಣಪಡಿಸಲು ಆಗುವುದಿಲ್ಲ. ವ್ಯಕ್ತಿ ಕೊನೆಯುಸಿರು ಇರುವ ತನಕ ಅದರ ಜತೆಗೇ ಏಗಬೇಕು. ಸಮರ್ಪಕ ನಿರ್ವಹಣೆ ಮಾಡಿಕೊಂಡರಷ್ಟೇ, ಶಾಶ್ವತ ಅಂಧರಾಗುವುದನ್ನು ತಪ್ಪಿಸಿಕೊಳ್ಳಬಹುದು. ದೇಶದಲ್ಲಿ ಶೇ 90 ರಷ್ಟು ಜನಕ್ಕೆ ಇದರ ಅರಿವು ಇಲ್ಲ’ ಎಂದು ಅವರು ಹೇಳಿದರು.

ಏನು ಮಾಡಬೇಕು:* 40 ವರ್ಷ ವಯಸ್ಸಿನ ಬಳಿಕ ವರ್ಷಕ್ಕೆ ಒಮ್ಮೆ ನೇತ್ರ ತಜ್ಞರ ಬಳಿಯೇ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕನ್ನಡಕದ ಅಂಗಡಿಗಳಲ್ಲಿ ಪರೀಕ್ಷೆ ಮಾಡುವುದರಿಂದ ಗ್ಲುಕೋಮಾ ಇರುವುದು ಪತ್ತೆ ಆಗುವುದಿಲ್ಲ.

*ಗ್ಲುಕೋಮಾ ಇದ್ದರೆ ವೈದ್ಯರು ಬರೆದು ಕೊಡುವ ಡ್ರಾಪ್ಸ್‌ ತಪ್ಪದೇ ಹಾಕಿಕೊಳ್ಳಬೇಕು ಮತ್ತು ಪ್ರತಿವರ್ಷ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯ.

*ನೇತ್ರತಜ್ಞ ರೋಗಿಗೆ ಸರಿಯಾಗಿ ಮಾಹಿತಿ ನೀಡಿ, ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಮಾಡಬೇಕು. ರೋಗಿ ಆ ರೀತಿ ಮಾಡದಿದ್ದರೆ ಅದು ವೈದ್ಯನ ಲೋಪ.

ಇದು ವಂಶವಾಹಿ:*ಸಂಬಂಧಿಗಳಲ್ಲಿ ಯಾರಿಗಾದರೂ ಈ ಕಾಯಿಲೆ ಇದ್ದರೆ ಕುಟುಂಬದ ಇತರರಿಗೂ ಬರುವ ಸಾಧ್ಯತೆ ಹೆಚ್ಚು. ರಕ್ತ ಸಂಬಂಧದಲ್ಲಿ ಮದುವೆ ಆಗದಿರುವುದೇ ಇದಕ್ಕೆ ಪರಿಹಾರ.

ಪ್ರಶ್ನೆಗಳು:* ಸರ್‌ ನನಗೆ ಗ್ಲುಕೋಮಾ ಇದೆ, ಕ್ಯೂರ್‌ ಆಗೋದಿಲ್ವ?

ಬಸಪ್ಪ, ವಿಜಯಪುರ

*ಶುಗರ್‌– ಬಿಪಿ ಇದ್ದವರಿಗೆ ಗ್ಲುಕೋಮಾ ಬರುತ್ತದೆಯೇ?

ಪರಿಮಳಾ, ಜಯನಗರ

‘ಕಣ್ಣು ಕುಕ್ಕದಿರಲಿ’ ಬೆಳಕಿನ ಹಬ್ಬ

‘ದೀಪಾವಳಿ ದೀಪಗಳ ಹಬ್ಬವೇ ಹೊರತು ‘ಕಣ್ಣು ಕುಕ್ಕುವ’ ಪಟಾಕಿ ಹಬ್ಬವಲ್ಲ. ದುರದೃಷ್ಟವೆಂದರೆ ಬೆಳಕಿನ ಹಬ್ಬ ಅದೆಷ್ಟೋ ಮಂದಿಯ ಬೆಳಕು ಕಾಣುವ ಸೌಭಾಗ್ಯವನ್ನೇ ಪಟಾಕಿ ಕಿತ್ತುಕೊಳ್ಳುತ್ತಿದೆ. ಹಾಗಾಗಿ ಕೋಲು ಕೊಟ್ಟು ಪೆಟ್ಟು ತಿನ್ನುವ ಕೆಲಸ ಮಾಡಬೇಡಿ. ಪಟಾಕಿ ಸಿಡಿಸುವ ಬದಲು ದೀಪಗಳನ್ನು ಹಚ್ಚಿ. ರಂಗೋಲಿ ಹಾಕಿ, ಸಿಹಿ ಹಂಚಿಕೊಳ್ಳಿ’ ಎಂದು ಹೇಳಿದರು ಭುಜಂಗ ಶೆಟ್ಟಿ.

‘ಬೇಸರದ ವಿಷಯವೇನೆಂದರೆ ದೀಪಾವಳಿ ಸಂದರ್ಭದಲ್ಲಿ ಅನೇಕರು ತಮ್ಮದಲ್ಲದ ತಪ್ಪಿನಿಂದಾಗಿ ಜೀವನಪರ್ಯಂತ ಅಂಧಕಾರದಲ್ಲಿ ಮುಳುಗುವಂತಾಗುತ್ತಿದೆ. ಯಾರೋ ತೂರಿಬಿಟ್ಟ ರಾಕೆಟ್‌ ಇನ್ಯಾರೋ ಅಮಾಯಕರ ಕಣ್ಣು ಕಿತ್ತುಕೊಳ್ಳುತ್ತಿದೆ’ ಎಂದರು.

‘ದೀಪಾವಳಿ ಸಂದರ್ಭದಲ್ಲಿ ಪ್ರತಿವರ್ಷವೂ ನಗರದಲ್ಲಿ 60ಕ್ಕೂ ಹೆಚ್ಚು ಮಂದಿಯ ಕಣ್ಣುಗಳಿಗೆ ಹಾನಿ ಉಂಟಾಗುತ್ತಿದೆ. 15ರಿಂದ 20 ಜನ ಶಾಶ್ವತವಾಗಿ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಶೇಕಡ 90ರಷ್ಟು ಮಂದಿ ಮಕ್ಕಳು’ ಎಂದು ಅವರು ತಿಳಿಸಿದರು.

‘ಪಟಾಕಿಯಿಂದ ಮಾಲಿನ್ಯವೂ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದು ಕೂಡಾ ಕಣ್ಣಿನ ಸಮಸ್ಯೆಗಳನ್ನು ತಂದೊಡ್ಡುತ್ತದೆ’ ಎಂದರು.

ಪ್ರಥಮ ಚಿಕಿತ್ಸೆ ಹೇಗೆ?

ಪಟಾಕಿ ಸಿಡಿಸುವಾಗ ಅರೆಕ್ಷಣೆ ಯಾಮಾರಿದರೂ ಕಣ್ಣು ಕಳೆದುಕೊಳ್ಳುವ ಅಪಾಯವಿದೆ. ಪಟಾಕಿಯ ರಾಸಾಯನಿಕಗಳಿಂದ ಹಾಗೂ ಬಿಸಿಯಿಂದ ಕಣ್ಣಿಗೆ ಹಾನಿ ಉಂಟಾಗುತ್ತದೆ. ಕಣ್ಣಿಗೆ ಪಟಾಕಿಯ ಕಿಡಿಗಳು ಹಾರಿದರೆ ತಕ್ಷಣವೇ ಸ್ವಚ್ಛ ನೀರಿನಿಂದ ಕಣ್ಣನ್ನು ತೊಳೆಯಬೇಕು. ಆದಷ್ಟು ಶೀಘ್ರ ನೇತ್ರತಜ್ಞರನ್ನು ಕಾಣಬೇಕು. ಒಂದು ವೇಳೆ ಕಣ್ಣಿನಿಂದ ರಕ್ತ ಸೂರುತ್ತಿದ್ದರೆ ನೀರಿನಿಂದ ತೊಳೆಯಲು ಹೋಗಬೇಡಿ. ತಕ್ಷಣವೇ ಕಣ್ಣಿಗೆ ಹತ್ತಿ ಬಟ್ಟೆಯನ್ನು ಒತ್ತಿ ಹಿಡಿಯಿರಿ, ತಕ್ಷಣವೇ ತಜ್ಞವೈದ್ಯರಲ್ಲಿಗೆ ಗಾಯಾಳುವನ್ನು ಕರೆದೊಯ್ಯಿರಿ.

* ಪಟಾಕಿ ಸಿಡಿಸಲೇ ಬೇಕೆಂದರೆ ಸಣ್ಣಪುಟ್ಟದ್ದನ್ನು ಮಾತ್ರ ಬಳಸಿ. ರಾಕೆಟ್‌, ಬಾಂಬ್‌, ಹೂಕುಂಡಗಳಂತಹ ಪಟಾಕಿಗಳು ಬೇಡವೇ ಬೇಡ.

* ಪಟಾಕಿಗಳನ್ನು ಬಯಲು ಪ್ರದೇಶದಲ್ಲಿ ಮಾತ್ರ ಸಿಡಿಸಿ

* ಮಕ್ಕಳು ಪಟಾಕಿ ಸಿಡಿಸುವಾಗ ದೊಡ್ಡವರು ಜತೆಯಲ್ಲಿರುವುದು ಒಳಿತು

* ಬೆಂಕಿ ತಗಲುವ ಸಾಧ್ಯತೆ ಇರುವಂತಹ ಕಡೆ (ದೇವರ ಕೋಣೆ, ಅಡುಗೆಮನೆ ಇತ್ಯಾದಿ) ಪಟಾಕಿ ಇಡಬೇಡಿ

‘ತಪಾಸಣೆ, ಪ್ರಾಥಮಿಕ ಚಿಕಿತ್ಸೆ ಉಚಿತ’

‘ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಳ್ಳುವವರಿಗೆ ನಾರಾಯಣ ನೇತ್ರಾಲಯದಲ್ಲಿ ಉಚಿತ ತಪಾಸಣೆ ನಡೆಸಲಾಗುತ್ತದೆ. ಪ್ರಾಥಮಿಕ ಚಿಕಿತ್ಸೆಯನ್ನೂ ಉಚಿತವಾಗಿ ನೀಡುತ್ತೇವೆ’ ಎಂದು ಭುಜಂಗ ಶೆಟ್ಟಿ ತಿಳಿಸಿದರು.

‘ಹಬ್ಬದ ಸಂದರ್ಭದಲ್ಲಿ ನಗರದ ಕಣ್ಣಿನ ಆಸ್ಪತ್ರೆಗಳು ದಿನದ 24 ಗಂಟೆ ತೆರೆದಿರುತ್ತವೆ. ಹಾಗಾಗಿ ಪಟಾಕಿಯಿಂದ ಕಣ್ಣಿಗೆ ಹಾನಿ ಉಂಟಾದರೆ ರಾತ್ರಿ ಹಗಲೆಂದು ನೋಡದೇ ಗಾಯಳುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಬೇಕು’ ಎಂದು ಅವರು ಸಲಹೆ ನೀಡಿದರು.

ಜಗತ್ತಿನ ಒಳಗಣ್ಣು ತೆರೆಸಿದವರು ಯಾರು?

ಈ ಸರಳ ಪ್ರಶ್ನೆಗೆ ಹತ್ತು ಜನ ಹತ್ತು ಬಗೆಯ ಉತ್ತರ ಕೊಡಬಹುದು. ಆದರೆ, ಡಾ.ಭುಜಂಗ ಶೆಟ್ಟರ ಪ್ರಕಾರ, ಶ್ರೀಲಂಕಾದ ಬೌದ್ಧರು ಜಗತ್ತಿಗೆ ಕಣ್ಣುಗಳನ್ನು ಕೊಟ್ಟವರು.

ಬುದ್ಧ ಜಗತ್ತಿನ ಒಳಗಣ್ಣು ತೆರೆಸಿದ್ದೇನೋ ಹೌದು, ಆದರೆ ಶ್ರೀಲಂಕಾ ಬೌದ್ಧರು ಕಣ್ಣು ಕೊಟ್ಟಿದ್ದು ಹೇಗೆ ಎಂಬ ಉಪಪ್ರಶ್ನೆ ಇತ್ತು. ಇದಕ್ಕೆ ಉತ್ತರ ನೀಡಲು ಶೆಟ್ಟರು ಶ್ರೀಲಂಕಾ ಬೌದ್ಧರು ಜಗತ್ತಿಗೆ ಕಣ್ಣುಗಳನ್ನು ಕೊಟ್ಟ ಕಥೆಯನ್ನು ಹೇಳಿದರು.

‘ನಾನು ಮಿಂಟೋ ಆಸ್ಪತ್ರೆಯಲ್ಲಿದ್ದಾಗ, ಕಣ್ಣಿನ ಕಾರ್ನಿಯಾ ಕಸಿಗೆ ಭಾರತದಲ್ಲಿ ಕಣ್ಣುಗಳೇ ಸಿಗುತ್ತಿರಲಿಲ್ಲ. ಆದರೆ, ಶ್ರೀಲಂಕಾದಿಂದ ದಿನವೂ ಕಣ್ಣುಗಳು ಬರುತ್ತಿದ್ದವು. ಭಾರತ ಮಾತ್ರವಲ್ಲ, ಹಲವು ದೇಶಗಳಿಗೆ ಕಣ್ಣುಗಳನ್ನು ಕಳುಹಿಸುತ್ತಿದ್ದರು. ಅಂಗದಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿಂದ ಬೌದ್ಧರು ಮರಣದ ನಂತರ ಅಂಗದಾನ ಮಾಡುತ್ತಿದ್ದರು. ಹೀಗಾಗಿ ಅಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ರಾಜ್ಯದಲ್ಲಿ ನೇತ್ರದಾನ ಪ್ರಾರಂಭಿಸಲು ಶ್ರೀಲಂಕಾದ ಬೌದ್ಧರೇ ನನಗೆ ಪ್ರೇರಣೆ’ ಎಂದು ವಿವರಿಸಿದರು.

ಮರಣದ ಬಳಿಕ ಅಂಗದಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬುದು ಲಂಕನ್ನರ ನಂಬಿಕೆಯಾದರೆ, ಮರಣದ ಬಳಿಕ ಅಂಗ ಛೇದ ಮಾಡಿದರೆ ಮೋಕ್ಷ ಸಿಗುವುದಿಲ್ಲ ಎಂಬುದು ಇಲ್ಲಿನವರ ನಂಬಿಕೆ. ಈ ವೈರುಧ್ಯದ ಮಧ್ಯೆ ನೇತ್ರದಾನಕ್ಕೆ ಪ್ರೇರಣೆ ನೀಡಿ, ಅದನ್ನು ಆಂದೋಲನವಾಗಿಸಲು ಮುಂಚೂಣಿಯಲ್ಲಿ ನಿಲ್ಲಲು ಒಪ್ಪಿದವರು ವರನಟ ಡಾ.ರಾಜ್‌ಕುಮಾರ್‌. ನೇತ್ರಬ್ಯಾಂಕ್‌ಗೆ ತಮ್ಮ ಹೆಸರನ್ನು ಇಡಲೂ ತುಂಬಿದ ಮನಸ್ಸಿನಿಂದ ಒಪ್ಪಿಗೆ ನೀಡಿದರು ಎಂದು ಅವರು ವಿವರಿಸಿದರು.

‘ರಾಜ್‌ಕುಮಾರ್‌ ಅಭಿಮಾನಿಯಾಗಿದ್ದ ನಾನು ಆಸ್ಪತ್ರೆ ಉದ್ಘಾಟನೆಗೆ ಪರಿಚಯಸ್ಥರ ಮೂಲಕ ರಾಜ್‌ ಅವರನ್ನು ಕರೆಸಿದ್ದೆ. ಅಲ್ಲಿ ಅವರಿಗೆ ನೇತ್ರದಾನದ ಮಹತ್ವ ತಿಳಿಸಿದ್ದೆ. ಅದು ಅವರಿಗೆ ಮೆಚ್ಚುಗೆಯಾಯಿತು. ರಾಜ್‌ ನಿಧನರಾದ ತಕ್ಷಣ ನೇತ್ರಗಳನ್ನು ಪಡೆದುಕೊಳ್ಳಲು ಕರೆ ಬಂದಿತು. ಪಾರ್ವತಮ್ಮ ಅವರು ನಿಧನರಾದ ಬಳಿಕ ಅವರ ನೇತ್ರಗಳನ್ನೂ ಪಡೆದೆವು’.

‘ಕರ್ನಾಟಕದಲ್ಲಿ ನೇತ್ರದಾನ ಅಭಿಯಾನ ಆರಂಭವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣುಗಳನ್ನು ದಾನ ಪಡೆಯುವಂತಾಗಲು ಡಾ.ರಾಜ್‌ ಅವರೇ ಕಾರಣ. ಅದಕ್ಕಾಗಿ ನಾವು ಋಣಿಗಳು. ಆದರೆ, ಬೇಡಿಕೆಗೆ ತಕ್ಕಷ್ಟು ನೇತ್ರಗಳು ಲಭ್ಯವಿಲ್ಲ. ಈಗಲೂ ಕಾರ್ನಿಯಾ ಅಳವಡಿಕೆಗೆ 50 ರಿಂದ 100 ಜನ ವೈಟಿಂಗ್‌ ಲಿಸ್ಟ್‌ನಲ್ಲಿ ಇರುತ್ತಾರೆ’ ಎಂದು ಶೆಟ್ಟರು ಹೇಳಿದರು.

ನೇತ್ರ ದಾನ ಹೇಗೆ:

* ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ಕಾರ್ನಿಯಾ ಅಥವಾ ದೃಷ್ಟಿ ಪಟಲವನ್ನು ಮಾತ್ರ ಪಡೆಯಲಾಗುತ್ತದೆ. ಕಣ್ಣಿನ ಗುಡ್ಡೆಗಳನ್ನು ತೆಗೆಯುವುದಿಲ್ಲ.

* ಕಾರ್ನಿಯಾ ಅಳವಡಿಸಲು ರಕ್ತ ಹೊಂದಾಣಿಕೆ ಆಗಬೇಕು ಎಂಬ ನಿಯಮವಿಲ್ಲ.

* ವ್ಯಕ್ತಿ ಸತ್ತ ಬಳಿಕಕಣ್ಣುಗಳು ಅರ್ಧ ತೆರೆದಿದ್ದರೆ ರೆಪ್ಪೆ ಮುಚ್ಚಬೇಕು. ತೇವವಾಗಿರುವಂತೆ ನೋಡಿಕೊಳ್ಳಬೇಕು.

* ಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕದೇ ಇದ್ದರೂ, ಕುಟುಂಬದ ಸದಸ್ಯರ ಒಪ್ಪಿಗೆ ಇದ್ದರೂ ನೇತ್ರದಾನಕ್ಕೆ ಅವಕಾಶವಿದೆ.

ಮೆಳ್ಳೆಗಣ್ಣು– ಬಾಲ್ಯದಲ್ಲೇ ಚಿಕಿತ್ಸೆ ಒಳ್ಳೆಯದು

‘ಮೆಳ್ಳೆಗಣ್ಣು ಸಮಸ್ಯೆಯನ್ನು ಪತ್ತೆಹಚ್ಚಲು ವೈದ್ಯರೇ ಬೇಕೆಂದಿಲ್ಲ. ತಂದೆ ತಾಯಿ, ಬಂಧು ಬಳಗ, ಶಿಕ್ಷಕರು ಯಾರು ಬೇಕಾದರೂ ಇದನ್ನು ಗುರುತಿಸಬಹುದು. ಮೆಳ್ಳೆಗಣ್ಣು ಇದ್ದರೆ ಕಣ್ಣಿಗೆ ಸಂಬಂಧಿಸಿದ ಯಾವುದೋ ಸಮಸ್ಯೆ ಇದೆ ಎಂದೇ ಅರ್ಥ. ಹಾಗಾಗಿ ಅದನ್ನು ನಿರ್ಲಕ್ಷ್ಯ ಮಾಡುವುದು ತರವಲ್ಲ. ಅನೇಕ ತಂದೆ ತಾಯಿ ತಮ್ಮ ಮಕ್ಕಳಲ್ಲಿ ಈ ಸಮಸ್ಯೆ ಇರುವುದನ್ನು ಗುರುತಿಸಿದರೂ ನೇತ್ರತಜ್ಞರನ್ನು ಕಾಣುವುದಿಲ್ಲ’ ಎನ್ನುತ್ತಾರೆ ಭುಜಂಗ ಶೆಟ್ಟಿ.

‘ಬೆಳೆಯುತ್ತಾ ಇದು ಸರಿಯಾಗುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಇದು ಸರಿಯಲ್ಲ. ದೇಹದ ಇತರ ಅಂಗಗಳು 18– 20ವರ್ಷಗಳ ವರೆಗೂ ಬೆಳೆಯುತ್ತದೆ. ಆದರೆ, ಕಣ್ಣಿನ ಬೆಳವಣಿಗೆ 8– 10 ವರ್ಷಗಳಲ್ಲೇ ಕೊನೆಗೊಳ್ಳುತ್ತದೆ. ಹಾಗಾಗಿ ಕಣ್ಣಿನ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ಬಾಲ್ಯದಲ್ಲೇ ಚಿಕಿತ್ಸೆ ಕೊಡಿಸುವುದು ಒಳ್ಳೆಯದು.’

‘ಬಾಲ್ಯದಲ್ಲಿ ಸೂಕ್ತ ಕನ್ನಡಕ ಬಳಸಿದರೂ ಈ ಸಮಸ್ಯೆ ಸರಿಹೋಗುವ ಸಾಧ್ಯತೆ ಇರುತ್ತದೆ. ಅಥವಾ ಶಸ್ತ್ರಚಿಕಿತ್ಸೆ ಮೂಲಕವೂ ಸರಿಪಡಿಸಬಹುದು. ಆದರೆ, ಅನೇಕರು ಉದ್ಯೋಗಕ್ಕೆ ಸೇರುವಾಗ ಅಥವಾ ಮದುವೆ ನಿಗದಿಪಡಿಸಬೇಕಾದ ಸಂದರ್ಭದಲ್ಲಿ ವೈದ್ಯರನ್ನು ಕಾಣುತ್ತಾರೆ. ಆ ಹಂತದಲ್ಲಿ ವೈದ್ಯರೂ ಏನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ’ ಎಂದರು.

‘ಕೆಂಗಣ್ಣಿ’ಗೆ ಗುರಿ ಆಗದಿರಿ

‘ಮದ್ರಾಸ್‌ ಐ’ (ಕೆಂಗಣ್ಣು) ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ. ಈ ಸಮಸ್ಯೆ ಕಾಣಿಸಿಕೊಂಡಾಗ ಎಚ್ಚರ ವಹಿಸದಿದ್ದರೆ, ನಿಮ್ಮ ಬಂಧುಗಳು, ಸಹೋದ್ಯೊಗಿಗಳು, ಸಹಪಾಠಿಗಳೂ ‘ಕೆಂಗಣ್ಣಿ’ಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ಡಾ. ಶೆಟ್ಟಿ.

‘ಕೆಂಗಣ್ಣನ್ನು ನೋಡುವುದರಿಂದ ಈ ರೋಗ ಹಬ್ಬುವುದಿಲ್ಲ. ಇದಕ್ಕೆ ಕಾರಣವಾಗುವ ರೋಗಾಣುವಿನ ಸಂಪರ್ಕಕ್ಕೆ ಬರುವುದರಿಂದ ಇದು ಹರಡುತ್ತದೆ. ಕಣ್ಣನ್ನು ಉಜ್ಜಿಕೊಂಡ ಕೈಯಲ್ಲೇ ಫೋನ್‌ ರಿಸೀವರ್‌ ಎತ್ತಿಕೊಂಡರೆ, ಬಸ್‌ ರೈಲು ಮೆಟ್ರೊದಲ್ಲಿ ಸಂಚರಿಸುವಾಗ ಆಧಾರಕ್ಕಾಗಿ ಹಿಡಿದುಕೊಳ್ಳುವ ಸರಳುಗಳನ್ನು ಹಿಡಿದರೆ, ರೋಗಾಣು ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ ‘ಕೆಂಗಣ್ಣಿ’ನಿಂದ ಬಳಲುವವರು ಅದು ವಾಸಿಯಾಗುವವರೆಗೂ ಕಚೇರಿಗೆ ಹೋಗದಿರುವುದು ಒಳ್ಳೆಯದು. ಇಂತಹ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದಿರುವುದು ಒಳ್ಳೆಯದು. ಇದು ತನ್ನಿಂದ ತಾನೆ ಹೋಗುತ್ತದೆ ಎಂದು ಕಾಯುವುದು ಸರಿಯಲ್ಲ. ಚಿಕಿತ್ಸೆ ಪಡೆದರೆ ಇದು ಬೇಗನೇ ಗುಣವಾಗುತ್ತದೆ’ ಎಂದು ಅವರು ಸಲಹೆ ನೀಡಿದರು.

‘ಕೆಂಗಣ್ಣು ಹೊಂದಿದವರು ಕನ್ನಡಕ ಧರಿಸಿದರೆ ಅದು ಬೇರೆಯವರಿಗೆ ಹಬ್ಬದಂತೆ ತಡೆಯುತ್ತದೆ ಎನ್ನುವುದರಲ್ಲಿ ಸತ್ಯಾಂಶವಿದೆ. ಈ ರೋಗ ಹಬ್ಬದಂತೆ ತಡೆಯುವುದು ಕನ್ನಡಕ ಅಲ್ಲ. ಕನ್ನಡಕ ಧರಿಸಿದಾಗ ಕಣ್ಣನ್ನು ಉಜ್ಜಿಕೊಳ್ಳುವ ಪ್ರಮೇಯ ಕಡಿಮೆ ಅಷ್ಟೆ’ ಎಂದರು.

* ಕೆಂಗಣ್ಣು ಹೊಂದಿದವರು ಬಳಸಿದ ಸಾಬೂನು, ಟವೆಲ್‌ಗಳನ್ನು ಬೇರೆಯವರು ಬಳಸಬಾರದು

* ಈ ಸಮಸ್ಯೆ ಇರುವವರು ಕಣ್ಣುಜ್ಜಬಾರದು

* ಹಸ್ತಲಾಘವ ಮಾಡಬಾರದು

ಔಷಧಿ ಬಳಸುವಾಗ ಇರಲಿ ಎಚ್ಚರ

ಕಣ್ಣಿನ ಔಷಧಿ ಬಳಸುವಾಗ ಬಹಳ ಎಚ್ಚರ ವಹಿಸುವುದು ಅಗತ್ಯ. ಅನೇಕರು ಔಷಧಿ ಪೊಟ್ಟಣದಲ್ಲಿ ಮುದ್ರಿಸಿರುವ ದಿನಾಂಕವನ್ನು ಆಧರಿಸಿ, ಅದರ ಅವಧಿ ಮೀರಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತಾರೆ. ಇದು ಸರಿಯಲ್ಲ. ಕಣ್ಣಿಗೆ ಹಾಕುವ ಯಾವುದೇ ಡ್ರಾಪ್ಸ್‌ನ ಬಾಟಲಿಯ ಮುಚ್ಚಳವನ್ನು ಒಮ್ಮೆ ತೆರೆದರೆ ಅದನ್ನು ಒಂದು ತಿಂಗಳ ಒಳಗೆ ಬಳಸಬೇಕು. ಹಾಗಾಗಿ ಮುಚ್ಚಳ ತೆರೆದ ದಿನವೇ ಅದರ ಪೊಟ್ಟಣದ ಮೇಲೆ ಆ ದಿನಾಂಕವನ್ನು ಬರೆದಿಟ್ಟುಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಡಾ. ಶೆಟ್ಟಿ. ಅವರ ಸಲಹೆಗಳು ಹೀಗಿವೆ:

* ಕಣ್ಣಿಗೆ ಡ್ರಾಪ್ಸ್‌ ಹಾಕುವ ಮುನ್ನ ಹಾಗೂ ನಂತರ ಕೈಗಳನ್ನು ಸಾಬೂನು ಬಳಸಿ ತೊಳೆದುಕೊಳ್ಳಿ

* ಕಣ್ಣಿಗೆ ಡ್ರಾಪ್ಸ್‌ ಹಾಕುವ ಮೂತಿಯನ್ನು ಕೈಯಿಂದ ಮುಟ್ಟಲೇಬಾರದು. ಇದರಿಂದ ಸೋಂಕು ತಗಲುವ ಅಪಾಯವಿದೆ

* ಒಮ್ಮೆಗೆ ಒಂದು ಹನಿ ಔಷಧವನ್ನು ಮಾತ್ರ ಹಾಕಬೇಕು.

* ಎರಡು– ಮೂರು ಹನಿ ಔಷಧ ಹಾಕುವಂತೆ ವೈದ್ಯರು ಸಲಹೆ ನೀಡಿದ್ದರೆ, ಪ್ರತಿ ಹನಿಗಳ ನಡುವೆ ಕನಿಷ್ಠ 10 ನಿಮಿಷ ಅಂತರವಿರಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT