ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ಆಸ್ತಿ ವಿವರ ಮುಚ್ಚಿಟ್ಟ ಆರೋಪ: ಆಯೋಗಕ್ಕೆ ಡಿಸಿ ವರದಿ

ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ: ಆದಾಯ ತೆರಿಗೆ ಇಲಾಖೆಯಿಂದ ತನಿಖೆ
Last Updated 18 ಮೇ 2019, 19:17 IST
ಅಕ್ಷರ ಗಾತ್ರ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರದ ಜತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆಸ್ತಿ ವಿವರ ಮುಚ್ಚಿಟ್ಟಿದ್ದಾರೆ ಎಂಬ ದೂರಿನ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿರುವ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ‘ಈ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ತನಿಖೆ ಆಗಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್‌ ನಾಮಪತ್ರ ಜತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆಸ್ತಿ ವಿವರ ಮುಚ್ಚಿಟ್ಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ದೂರು ನೀಡಿದ್ದರು.

ಹಣದ ವ್ಯತ್ಯಾಸ, ತೆರಿಗೆ ವಂಚನೆ ಆರೋಪದ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ತನಿಖೆ ಆಗಬೇಕು. ಆಸ್ತಿ ವಿವರ ಸಲ್ಲಿಕೆ ಬಗ್ಗೆ ಲೋಕಾಯುಕ್ತದಿಂದ ಮಾಹಿತಿ‌ ಪಡೆಯಬಹುದು ಹಾಗೂ ತಂದೆ ರೇವಣ್ಣ ದಾನವಾಗಿ ನೀಡಿರುವ ಆಸ್ತಿ ಬಗ್ಗೆ ತನಿಖೆ ನಡೆಸಲು ನಿರ್ದೇಶನ ನೀಡುವಂತೆಯೂ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾ‌ ಪ್ರತಿನಿಧಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಬರೆದಿದ್ದ ಪತ್ರಕ್ಕೆ ಉತ್ತರಿಸಿರುವ ಜಿಲ್ಲಾಧಿಕಾರಿ, ‘ಅಭ್ಯರ್ಥಿ ಸಲ್ಲಿಸುವ ಅಫಿಡವಿಟ್‌ನ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸುವ ಪ್ರಾಧಿಕಾರ ಇದಾಗಿರುವುದಿಲ್ಲ. ಈ ಬಗ್ಗೆ ದೂರುದಾರರೇ ನ್ಯಾಯಾಲಯದಲ್ಲಿ ಪ್ರಶ್ನಿಸಿ, ಸಂಬಂಧಿಸಿದ ಇಲಾಖೆಗಳಿಂದ ತನಿಖೆ ಮೂಲಕ ಮಾಹಿತಿ ಪಡೆಯಬಹುದು’ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ‘ಆರೋಪದಿಂದ ಏನೂ ಆಗುವುದಿಲ್ಲ. ನಾನು ಅಫಿಡವಿಟ್ ನಲ್ಲಿ ದಾಖಲು ಮಾಡಿರುವ ಮಾಹಿತಿಯೆಲ್ಲ ನಿಜ ಎಂದು ಚುನಾವಣಾಧಿಕಾರಿಗೆ ಹೇಳಿದ್ದೇನೆ. ಐದು ವರ್ಷದಿಂದ ಆದಾಯ ತೆರಿಗೆ ಪಾವತಿಸಿಲ್ಲ ಎನ್ನುವುದು ಕಾಮನ್ ಸೆನ್ಸ್ ಇಲ್ಲದ ಆರೋಪ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT