ಲೋಕಸಭೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧೆ 

7
ಚುನಾವಣೆಗೆ ಸ್ಪರ್ಧಿಸಲ್ಲ, ಪ್ರಧಾನಿ ಅಭ್ಯರ್ಥಿ ಆಗುವುದಿಲ್ಲ: ದೇವೇಗೌಡ

ಲೋಕಸಭೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧೆ 

Published:
Updated:
Deccan Herald

ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ರಾಜಕೀಯಕ್ಕೆ ತರಲು ವೇದಿಕೆ ಸಿದ್ಧಪಡಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಸೋಮವಾರ ಪ್ರಕಟಿಸಿದರು.

‘ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಪ್ರಧಾನಿ ಸ್ಥಾನದ ಅಭ್ಯರ್ಥಿಯಾಗಲ್ಲ’ ಎಂದು ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ರಾಷ್ಟ್ರರಾಜಕಾರಣಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.

‘ಯಾರಿಂದಲೂ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆ ಬಳಿಕವೂ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು ಸಂಸತ್‌ ಚುನಾವಣೆಗೂ ಮುನ್ನ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಇಳಿಸಲು ಯತ್ನಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕುಮಾರಸ್ವಾಮಿ, ರಾಷ್ಟ್ರ ರಾಜಕಾರಣದ ಮೇಲೆ ಆಸೆಯಿಲ್ಲ. ದೆಹಲಿ ರಾಜಕಾರಣದ ಬಗ್ಗೆ ಕನಸಿನಲ್ಲೂ ಯೋಚಿಸಿಲ್ಲ. ಅದರ ನೋವು ದೇವೇಗೌಡರಿಗೂ ಗೊತ್ತು. ಪ್ರಜ್ವಲ್ ರೇವಣ್ಣ ರಾಜಕೀಯಕ್ಕೆ ಬರುವ ಅವಶ್ಯಕತೆ ಬಂದಾಗ ತೀರ್ಮಾನ ಮಾಡಲಾಗುವುದು’ ಎಂದರು. 

16ರಂದು ಕಾರ್ಯಾದೇಶ: ‘ಈಗಾಗಲೇ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಸ್ಥೆಗಳ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದು, ಆ. 16ರಂದು ಕಾರ್ಯಾದೇಶ ನೀಡಲಾಗುವುದು. ಸಾಲಮನ್ನಾ ಕುರಿತು ಯಾವುದೇ ಗೊಂದಲ ಇಲ್ಲ. ಈ ವಿಚಾರದಲ್ಲಿ ಆರ್ಥಿಕ ಶಿಸ್ತು ಉಲ್ಲಂಘನೆ ಮಾಡಿಲ್ಲ. ಪ್ರತಿಪಕ್ಷದ ನಾಯಕರು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಅವರನ್ನು ತೃಪ್ತಿಪಡಿಸಲಾಗದು’ ಎಂದು ಹೇಳಿದರು.

ಸಾಲಮನ್ನಾದಿಂದ ಆಗುವ ಆರ್ಥಿಕ ಹೊರೆ ಕಡಿಮೆ ಮಾಡಲು ಈಗಾಗಲೇ ಸಂಪನ್ಮೂಲ ಕ್ರೋಡೀಕರಣಕ್ಕೂ ಚಾಲನೆ ನೀಡಲಾಗಿದೆ. ಮೂರು ತಿಂಗಳಲ್ಲಿ ಶೇ 32ರಷ್ಟು ವಿವಿಧ ರೂಪದಲ್ಲಿ ಆದಾಯ ಸಂಗ್ರಹವಾಗಿದೆ ಎಂದು ಹೇಳುವ ಮೂಲಕ ಸಮ್ಮಿಶ್ರ ಸರ್ಕಾರ ಕೋಮಾದಲ್ಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

 ಕೆಲ ಫಾರಂಗಳಿಗೆ ವಿಶೇಷ ಪೂಜೆ

ಹೊಳೆನರಸೀಪುರ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸೋಮವಾರ ಹುಟ್ಟೂರು, ತಾಲ್ಲೂಕಿನ ಹರದನಹಳ್ಳಿಯ ಶಿವನ ದೇವಾಲಯ ಸೇರಿ ವಿವಿಧ ದೇಗುಲಗಳಲ್ಲಿ ಪೂಜೆ ಸಲ್ಲಿಸಿದರು.

ಶಿವನ ದೇವಾಲಯದ ಆವರಣಕ್ಕೆ ಪತ್ರಕರ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ದೇವರ ಎದುರು ಕೆಲ ಫಾರಂಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದು ಕಂಡುಬಂತು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕೆಲ ಬಿ ಫಾರಂಗಳನ್ನು ಸಾಂಕೇತಿಕವಾಗಿ ದೇವರ ಸನ್ನಿಧಿಯಲ್ಲಿ ಇಟ್ಟು ಪೂಜಿಸಿ, ಪಕ್ಷದ ಗೆಲುವಿಗೆ ಪ್ರಾರ್ಥಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಳಿಕ ಪ್ರತಿಕ್ರಿಯಿಸಿದ ಎಚ್‌.ಡಿ.ಕುಮಾರಸ್ವಾಮಿ, ‘ಕೇರಳ, ರಾಜ್ಯದಲ್ಲಿ ಸಾಕಷ್ಟು ಮಳೆ ಆಗುತ್ತಿದೆ. ಯಾವುದೇ ಅನಾಹುತ ಸಂಭವಿಸದಿರಲಿ ಎಂದು ಪ್ರಾರ್ಥಿಸಿದ್ದೇನೆ’ ಎಂದರು.

 

***
ಅಂಕಿ ಅಂಶ

₹6,541 ಕೋಟಿ -ಅಬಕಾರಿ ಸುಂಕ (2018–19ರ ಜುಲೈ ವರೆಗೆ)

₹883 ಕೋಟಿ -ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಳ

₹31,303 ಕೋಟಿ -ಪ್ರಮುಖ ತೆರಿಗೆ ಸಂಗ್ರಹ (2018–19ರ ಜುಲೈ ವರೆಗೆ)

₹1,300 ಕೋಟಿ - ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಳ

ಶೇ 37.7 -ತೆರಿಗೆ ಸಂಗ್ರಹ ಸಾಮರ್ಥ್ಯ ಹೆಚ್ಚಳ

 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !