ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮತ್ತೆ ಅಧಿಕಾರಕ್ಕೆ ಬರಲ್ಲ: ಪ್ರಕಾಶ್‌ ರೈ

Last Updated 24 ಜನವರಿ 2019, 17:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ. ಸುಮ್ಮನೇ ಅವರು ಕನಸು ಕಾಣುತ್ತಿದ್ದಾರೆ ಎಂದು ನಟ ಪ್ರಕಾಶ್‌ ರೈ ಹೇಳಿದರು.

ಭೋವಿ ಗುರುಪೀಠಕ್ಕೆ ಗುರುವಾರ ಭೇಟಿ ನೀಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಚುನಾವಣೆಯ ಸಮೀಪಿಸಿದಾಗ ಮೇಲ್ಜಾತಿಯ ಬಡವರಿಗೆ ಶೇ 10ರಷ್ಟು ಮೀಸಲಾತಿ ಘೋಷಿಸಿರುವುದು ನೋಟು ರದ್ಧತಿಯಷ್ಟೇ ಗಿಮಿಕ್‌. ಶೋಷಿತರಿಗೆ ರೂಪಿಸಿದ ಮೀಸಲಾತಿ ಸೌಲಭ್ಯವನ್ನು ಚುನಾವಣೆಯ ಉದ್ದೇಶಕ್ಕಾಗಿ ಮುನ್ನೆಲೆಗೆ ತಂದಿದ್ದಾರೆ. ನುಡಿದಂತೆ ಉದ್ಯೋಗ ನೀಡಿದ್ದರೆ ಮೀಸಲಾತಿಯಂತಹ ಗಿಮಿಕ್‌ ಮಾಡುವ ಅಗತ್ಯವಿರಲಿಲ್ಲ’ ಎಂದರು.

ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಭೇಟಿ ನೀಡಿದ್ದ ನಟ ಪ್ರಕಾಶ್‌ ರೈ ಅವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಇದ್ದಾರೆ.
ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಭೇಟಿ ನೀಡಿದ್ದ ನಟ ಪ್ರಕಾಶ್‌ ರೈ ಅವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಇದ್ದಾರೆ.

‘ಮೀಸಲಾತಿ ಸೌಲಭ್ಯಕ್ಕೆ ಅರ್ಹತೆ ಪಡೆಯಲು ರೂಪಿಸಿದ ಬಡತನದ ಮಾನದಂಡವೂ ವಿಚಿತ್ರವಾಗಿದೆ. ದೇಶದ ಶೇ 90ರಷ್ಟು ಜನರು ಬಡತನದ ವ್ಯಾಪ್ತಿಗೆ ಬರುತ್ತಾರೆ. ಅಷ್ಟೂ ಜನರಿಗೆ ಮೀಸಲಾತಿ ಸೌಲಭ್ಯ ನೀಡಲು ಸಾಧ್ಯವೇ ಇಲ್ಲ. ಮೀಸಲಾತಿ ಎಂಬುದು ಮೋದಿ ಅವರ ಮತ್ತೊಂದು ಸುಳ್ಳು. ಮುಂದಿನ ಸರ್ಕಾರದ ಮೇಲೆ ವಿನಾ ಕಾರಣ ಹೊರೆ ಹೊರಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಕುಟುಂಬದಲ್ಲಿ ಹುಟ್ಟಿದ್ದೇ ತಪ್ಪಾ?

‘ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬರುವುದನ್ನು ಸ್ವಾಗತಿಸುತ್ತೇನೆ. ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಬೇಕು ಎಂದು ಪ್ರತಿಪಾದಿಸುವವರು ಪ್ರಿಯಾಂಕಾ ಅವರಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಅವರನ್ನೂ ಒಬ್ಬ ಮಹಿಳೆಯನ್ನಾಗಿಯೇ ನೋಡಬೇಕು. ಪ್ರಿಯಾಂಕಾ ಅವರು ಆ ಕುಟುಂಬದಲ್ಲಿ ಹುಟ್ಟಿದ್ದೇ ತಪ್ಪಾ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ಮೋದಿ ಅವರಿಗೆ ಕುಟುಂಬ ಇಲ್ಲದಿರಬಹುದು. ಆದರೆ, ಅವರು ಪ್ರತಿನಿಧಿಸುವ ಪಕ್ಷದಲ್ಲಿಯೂ ಕುಟುಂಬ ರಾಜಕಾರಣವಿದೆ. ಬೇರೆ ‍ಪಕ್ಷದಲ್ಲಿ ಅಪ್ಪಾ– ಮಕ್ಕಳು ಇದ್ದಾರೆ. ಇದನ್ನೂ ನೋಡಬೇಕಲ್ಲವೇ’ ಎಂದರು.

ನಾಚಿಕೆಗೇಡಿನ ಸಂಗತಿ:

‘104 ಸ್ಥಾನ ಪಡೆದಿರುವ ಬಿಜೆಪಿಗೆ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡಲು ಇಷ್ಟವಿಲ್ಲ. ಆಡಳಿತ ಪಕ್ಷದ ಹಲವರು ಪದವಿಗಷ್ಟೇ ಹಪಹಪಿಸುತ್ತಿದ್ದಾರೆ. ರೆಸಾರ್ಟ್‌ ರಾಜಕಾರಣ ಹಾಗೂ ಗಲಾಟೆ ನಾಚಿಕೆಗೇಡಿನ ಸಂಗತಿ. ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ಬಗ್ಗೆ ಸಂಸದರು ಮಾತನಾಡುತ್ತಿಲ್ಲ. ಪಕ್ಷದ ಹೈಕಮಾಂಡ್‌ ಹೇಳಿದಂತೆ ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿದ್ದಾರೆ. ಅವರ ಪಕ್ಷವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಷ್ಟೇ ಮುಳುಗಿದ್ದಾರೆ. ಅವರು ಜನರ ಪ್ರತಿನಿಧಿಗಳಾಗಿ ಉಳಿಯುತ್ತಿಲ್ಲ’ ಎಂದು ಆರೋಪಿಸಿದರು.

‘ಜಸ್ಟ್‌ ಆಸ್ಕಿಂಗ್ ಆಂದೋಲನದ ಸಂದರ್ಭದಲ್ಲಿ ಸಕ್ರಿಯ ರಾಜಕಾರಣದ ಬಗ್ಗೆ ಆಸಕ್ತಿ ಇರಲಿಲ್ಲ. ಜನರ ಧ್ವನಿಯಾಗಬೇಕು ಎಂಬ ಉದ್ದೇಶವಿತ್ತು. ಆದರೆ, ಪ್ರಶ್ನೆ ಮಾಡುತ್ತಾ ಕುಳಿತುಕೊಳ್ಳುವಲ್ಲಿ ಅರ್ಥವಿಲ್ಲ. ಜನರ ಪ್ರತಿನಿಧಿಯಾಗಬೇಕು ಹಾಗೂ ಜನರ ಧ್ವನಿ ಸಂಸತ್ತಿನಲ್ಲಿ ಕೇಳಿಸಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಒಂದು ಪಕ್ಷದ ಧ್ವನಿ ಆಗುವುದಕ್ಕಿಂತ, ಪಕ್ಷೇತರನಾಗಿದ್ದರೆ ಜನರ ಪರವಾಗಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿರುತ್ತವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT