ಬಿಜೆಪಿಯ ಎಲ್ಲಾ ನಿರ್ಧಾರಗಳಲ್ಲಿ ನಾಟಕೀಯತೆ ಇದೆ: ಪ್ರಕಾಶ್‌ ರಾಜ್‌

ಬುಧವಾರ, ಏಪ್ರಿಲ್ 24, 2019
31 °C

ಬಿಜೆಪಿಯ ಎಲ್ಲಾ ನಿರ್ಧಾರಗಳಲ್ಲಿ ನಾಟಕೀಯತೆ ಇದೆ: ಪ್ರಕಾಶ್‌ ರಾಜ್‌

Published:
Updated:
Prajavani

ಬಹುಭಾಷಾ ನಟನಾಗಿ ಪರಿಚಿತರಾಗಿದ್ದ ಪ್ರಕಾಶ್‌ ರಾಜ್‌ ಗೌರಿ ಲಂಕೇಶ್‌ ಹತ್ಯೆಯ ಬಳಿಕ ‘ಜಸ್ಟ್‌ ಆಸ್ಕಿಂಗ್‌’ ಆಂದೋಲನದ ಮೂಲಕ ಪ್ರಭುತ್ವವನ್ನು ಪ್ರಶ್ನಿಸುವ ಜಾಗೃತ ನಾಯಕನಾಗಿ ಗುರುತಿಸಿಕೊಂಡವರು. ಈಗ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಅವರೊಂದಿಗಿನ ಮಾತುಕತೆ ಇಲ್ಲಿದೆ

* ‘ರಾಜಕೀಯದ ಯಾವ ಉದ್ದೇಶವೂ ಇಲ್ಲ; ಪ್ರಜೆಯಾಗಿ ಪ್ರಧಾನಿಯನ್ನು ಪ್ರಶ್ನಿಸುತ್ತಿದ್ದೇನೆ’ ಎಂದಿದ್ದ ನೀವು ಈಗ ಚುನಾವಣೆಗೆ ಧುಮುಕಿದ್ದೀರಿ. ನಿಲುವು ಬದಲಾಗಿದ್ದು ಏಕೆ?

ಸಮಾಜದಿಂದ ನಾನೊಬ್ಬ ಕಲಾವಿದನಾಗಿ ಬೆಳೆದಿದ್ದೇನೆ. ಅದರ ಆಗು–ಹೋಗುಗಳಿಗೆ ಸಂಬಂಧಿಸಿ
ದಂತೆ ನಿಲುವು ತಾಳವುದು, ಸ್ಪಂದಿಸುವುದು ನನ್ನ ಕರ್ತವ್ಯ. ಆ ನಿಟ್ಟಿನಲ್ಲಿ ಜಸ್ಟ್‌ ಆಸ್ಕಿಂಗ್‌ ಅಭಿಯಾನ ಶುರುವಾಯಿತು.

ಐದು ವರ್ಷಗಳಿಂದ ದೇಶದ ರಾಜಕೀಯ ಆತಂಕದ ಸ್ಥಿತಿಯಲ್ಲಿದೆ. ನಾವು ಪ್ರಶ್ನೆ ಮಾಡುತ್ತಿದ್ದೇವೆ ನಿಜ, ಇದರಿಂದ ಉದ್ದೇಶ ಪೂರ್ಣ ಈಡೇರಲ್ಲ. ಸಕ್ರಿಯ ರಾಜಕಾರಣಕ್ಕೆ ಇಳಿಯಬೇಕಲ್ಲ ಎಂಬ ಪ್ರಶ್ನೆ ಎದುರಾಯಿತು. ಬಹಳ ಮುಖ್ಯ ಚುನಾವಣೆ ಇದಾಗಿದ್ದರಿಂದ ಕಂಫರ್ಟ್‌ ಝೋನ್‌ನಿಂದ ಹೊರಬಂದು ಸ್ಪರ್ಧೆಗೆ ನಿಂತಿದ್ದೇನೆ. ಕಾಲ ನನ್ನ ಪಯಣ ನಿರ್ಧರಿಸಿದೆ. ನಾನು ಯಾವತ್ತೂ ಪಯಣ ನಿರ್ಧರಿಸಿಲ್ಲ. ಶುರುವಾದಾಗ ಒಬ್ಬಂಟಿಯಾಗಿದ್ದೆ. ನನ್ನ ನಿರ್ಧಾರ ಸರಿಯಾಗಿದ್ದರಿಂದ ಜನ ಬರುತ್ತಿದ್ದಾರೆ.

* 52 ವರ್ಷಗಳ ಇತಿಹಾಸದಲ್ಲಿ ರಾಜ್ಯದ ಜನ ಸ್ವತಂತ್ರವಾಗಿ ಸ್ಪರ್ಧಿಸಿದ ಒಬ್ಬ ಬುದ್ಧಿಜೀವಿಯನ್ನು, ಸಾಹಿತಿಯನ್ನು, ಕಲಾವಿದನನ್ನು ಚುನಾಯಿಸಿದ ಉದಾಹರಣೆ ಇಲ್ಲವಲ್ಲ?

ಇತಿಹಾಸ ಏನೇ ಇರಬಹುದು. ಸದ್ಯದ ಸನ್ನಿವೇಶ ಬೇರೆಯೇ ಆಗಿದೆ. ಜನ ನನ್ನನ್ನು ಈಗ ಕೇವಲ ನಟನನ್ನಾಗಿ ನೋಡುತ್ತಿಲ್ಲ. ತಮ್ಮ ಭಾವನೆಗಳಿಗೆ ಧ್ವನಿ ನೀಡಿದ ರಾಜಕೀಯ ಹೋರಾಟಗಾರನನ್ನಾಗಿ ಗುರ್ತಿಸಿದ್ದಾರೆ. ರಾಜಕೀಯ ಪಕ್ಷಗಳಿಂದ ಭ್ರಮನಿರಸನಗೊಂಡವರೆಲ್ಲ ನನ್ನತ್ತ ನೋಡುತ್ತಿದ್ದಾರೆ.

* ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲಕ್ಕೇ ಅಧಿಕಾರ. ಅಂತಹ ಸಂಖ್ಯಾಬಲವನ್ನು ಹೊಂದಿದ ಪಕ್ಷ ರಾಜಕೀಯದ ಅಬ್ಬರದಲ್ಲಿ ನಿಮ್ಮಂತಹ ಇಂಡಿಪೆಂಡೆಂಟ್‌ ವಾಯ್ಸ್‌ಗೆ ಜಾಗ ಎಲ್ಲಿ?

ಪ್ರಶ್ನಿಸುವ ಸ್ವಾತಂತ್ರ್ಯ ಸಿಗುವುದು ಸ್ವತಂತ್ರ ಸಂಸದನಾಗಿದ್ದಾಗ ಮಾತ್ರ. ಇದುವರೆಗೆ ಪಕ್ಷ ಬಲ ಇದ್ದವರು ಏನು ಮಾಡಿದಾರ್ರೀ? ಒಬ್ಬ ಸಂಸದನೆಂದರೆ, ಅವನು ಮತ್ತು ಅವನ ಹಿಂದಿರುವ ಸಮಾಜ. ಸಂಸದರಾಗಿ ಆಯ್ಕೆಯಾದವರು ಜನರ ಧ್ವನಿಯಾಗಬೇಕೇ ಹೊರತು ಪಕ್ಷದ ಧ್ವನಿಯಲ್ಲ. ಸಂಖ್ಯಾಬಲವೇನು ಮಾಫಿಯಾವೇ? ಶಕ್ತಿ ಪ್ರದರ್ಶನವೇ?

* ಬೆಂಗಳೂರು ಕೇಂದ್ರ ಕ್ಷೇತ್ರದ ಜನ ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?

ಬೆಂಗಳೂರು ಎಂದರೆ ಕೇವಲ ವಿಧಾನಸೌಧ, ಬ್ರಿಗೇಡ್‌ ರಸ್ತೆ, ಎಂ.ಜಿ. ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌, ಎಲೆಕ್ಟ್ರಾನಿಕ್‌ ಸಿಟಿ ಅಲ್ಲ. ನಗರದಲ್ಲಿ 2000 ಸ್ಲಂಗಳು ಇವೆ. 40–50 ವರ್ಷಗಳಿಂದ ಅವರಿಗೆ ವಸತಿ ಇಲ್ಲ. ಮುಖ್ಯ ರಸ್ತೆಗಳನ್ನು ಬಿಟ್ಟು ಸಂದಿಗಳಲ್ಲಿ ಹೋದರೆ ಗೊತ್ತಾಗುತ್ತದೆ ನೈಜ ಸ್ಥಿತಿ. ಕೇಂದ್ರ ಕ್ಷೇತ್ರದಲ್ಲಿ ಹತ್ತು ವರ್ಷಗಳಿಂದ ಒಬ್ಬ ವ್ಯಕ್ತಿಯೇ ಸಂಸದರಾಗಿದ್ದಾರೆ. ಅವರು ಏನು ಮಾಡಿದ್ದಾರೆ? 250ಕ್ಕೂ ಹೆಚ್ಚಿನ ಸಂಖ್ಯೆಗಳಲ್ಲಿದ್ದ ಕೆರೆಗಳು 50ಕ್ಕೆ ಇಳಿದಿವೆ. ಇದಕ್ಕೆಲ್ಲ ಪರಿಹಾರ ಬೇಕೆಂದರೆ ನನ್ನನ್ನು ಚುನಾಯಿಸಬೇಕು.

* ನಿಮಗೆ ಯಾರು ಫಂಡ್‌ ಮಾಡುತ್ತಿದ್ದಾರೆ?

ಫಂಡ್‌ ಏಕೆ ಬೇಕು? ಆಯೋಗ ನಿಗದಿಪಡಿಸಿದ ₹ 70 ಲಕ್ಷ ನನ್ನ ಖರ್ಚಿಗೆ ಸಾಕು. ಅಷ್ಟು ದುಡ್ಡು ಹೊಂದಿಸದಷ್ಟು ಪ್ರಕಾಶ್‌ ಏನೂ ಬಡವನಲ್ಲ. 

* ನಿಮ್ಮ ಸ್ಪರ್ಧೆಯಿಂದ ಸೆಕ್ಯುಲರ್‌ ಓಟುಗಳು ಹರಿದು ಹಂಚಿಹೋಗಲಿದ್ದು, ಬಿಜೆಪಿಗೆ ಲಾಭವಾಗಲಿದೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆಯಲ್ಲ?

ಸೆಕ್ಯೂಲರ್‌ ಓಟ್‌ ಡಿವೈಡ್‌ ಆಗುತ್ತದೆ ಎನ್ನುವುದು ಕಾಂಗ್ರೆಸ್‌ನ ಅಪಪ್ರಚಾರ. ಈ ಮಾತನ್ನು ಯಾರು ಹೇಳಬೇಕು, ಮುಂಚೆ ಗೆದ್ದವರಲ್ಲವೇ? ಆದರೆ, ನಿರಂತರವಾಗಿ ಸೋಲುತ್ತಾ ಬಂದ ಪಕ್ಷ ಈ ಮಾತು ಹೇಳುತ್ತಿದೆ. ಬಿಜೆಪಿಗೆ ಓಟು ಹಾಕುವವರೆಲ್ಲ ಹಿಂದುತ್ವದ ಕ್ರೂರ ಕೋಮುವಾದಿಗಳಲ್ಲ. ಆದರೆ, ಮುಸ್ಲಿಮರು, ಕ್ರಿಶ್ಚಿಯನ್ನರ ಕುರಿತು ಇಲ್ಲದ ಭಯ ಹುಟ್ಟಿಸಿ ಅವರಿಂದ ಬಿಜೆಪಿ ಓಟು ಪಡೆಯುತ್ತಿದೆ. ಇತ್ತ ಕಾಂಗ್ರೆಸ್‌ ಸಹ ಅಂಗಡಿ ತೆಗೆದುಕೊಂಡು ಕುಳಿತಿದೆ. ಅಯ್ಯಯ್ಯೋ ಅವರು ಬಂದರೆ ಏನು ಗತಿ ಎಂದು ಮುಸ್ಲಿಮರಲ್ಲಿ ಭಯ ಬಿತ್ತುತ್ತಿದೆ. ಆದರೆ, ಈ ಸಲ ಜನ ರಿಪೋರ್ಟ್‌ ಕಾರ್ಡ್‌ ನೋಡಿ ಮತ ಹಾಕುತ್ತಾರೆ ಬಿಡಿ.

* ಮುಂದಿನ ಪ್ರಧಾನಿ ಯಾರು? ಮೋದಿಯೋ, ರಾಹುಲ್‌ ಗಾಂಧಿಯೋ?

ಯಾಕೆ ಆತುರ? ಕಾಯ್ದು ನೋಡೋಣ ಇರಿ. ಈ ಸಲದ ರಾಜಕೀಯ ಪರಿಸ್ಥಿತಿ ಬೇರೆಯೇ ತೆರನಾಗಿದೆ. ಯಾರೂ ಗೆಲ್ಲುವ ಮುಂಚೆ ಗೆದ್ದೆನೆಂದು ಬೀಗಬಾರದು. ಸೋಲುವ ಮುಂಚೆ ಸೋತೆನೆಂದು ಕೊರಗಬಾರದು. ಮೊದಲು ಅವರೆಲ್ಲ ಸಂಸದರಾಗಿ ಆಯ್ಕೆಯಾಗಲಿ, ನಂತರ ನೋಡೋಣ.

* ಅಷ್ಟು ಬಯ್ಯುತ್ತೀರಲ್ಲ, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರದಿಂದ ಒಂದು ಒಳ್ಳೆಯ ಕೆಲಸವೂ ಆಗಿಲ್ಲವೇ?

ಜಿಎಸ್‌ಟಿ ಒಳ್ಳೆಯದು, ಆದ್ರೆ ಅನುಷ್ಠಾನ ಸರಿಯಾಗಿಲ್ಲ. ಮುದ್ರಾ ಯೋಜನೆಯಿಂದ ಸಿಕ್ಕ ದುಡ್ಡಿನಲ್ಲಿ ಉದ್ಯಮ ಮಾಡೋದಕ್ಕೆ ಆಗುತ್ತದೆಯೇ? ಈ ಯೋಜನೆಗೆ ಕೊಟ್ಟ ಸಾಲವನ್ನು ಇನ್ನೆರಡು ವರ್ಷಗಳಲ್ಲಿ ಮನ್ನಾ ಮಾಡುವ ಸ್ಥಿತಿ ಬರದಿದ್ದರೆ ಕೇಳಿ. 12 ಸಾವಿರ ರೂಪಾಯಿ ವ್ಯಯಿಸಿ ಕಟ್ಟುವ ಟಾಯ್ಲೆಟ್‌ಗಳೆಲ್ಲ ಈಗ ಗೋಡೌನ್‌ ಗಳಾಗಿವೆ. ಅವರ ಎಲ್ಲ ನಿರ್ಧಾರಗಳಲ್ಲಿ ನಾಟಕೀಯತೆ ಇದೆ. ನಾವೇನು ಕಿವಿಯ ಮೇಲೆ ಹೂವು ಇಟ್ಟುಕೊಂಡಿಲ್ಲ.

* ತ್ರಿವಳಿ ತಲ್ಲಾಖ್‌ ಹಾಗೂ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿಷಯವಾಗಿ ನಿಮ್ಮ ನಿಲುವೇನು?

ತ್ರಿವಳಿ ತಲ್ಲಾಖ್‌ ಹೆಣ್ಣಿನ ದೃಷ್ಟಿಯಿಂದ ತಪ್ಪು. ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ನಿಷೇಧ ಬಹಳ ದಿನಗಳಿಂದ ನಡೆದುಕೊಂಡು ಬಂದ ಆಚಾರ. ಹೋಗದಿರುವವರು ಹೋಗದಿರಲಿ. ಹೋಗುವವರಿಗೆ ಅಡ್ಡಿಯೇಕೆ? ಅಡ್ಡಿಪಡಿಸುವವರಿಗೆ ಅವಸರಿಸದೆ ನಿಧಾನವಾಗಿ ತಿಳಿಹೇಳಬೇಕು.

* ಪಿ.ಸಿ.ಮೋಹನ್‌, ರಿಜ್ವಾನ್‌ ಅರ್ಷದ್‌ ಅವರಲ್ಲಿ ಯಾರು ಗೆಲ್ಲಬಹುದು?

ಕ್ಷೇತ್ರದ ಜನ

* ಕಾವೇರಿ ವಿಷಯದಲ್ಲಿ ನೀವೇಕೆ ಮೌನಿ?

ಕೆಲವರಿಗೆ ಬೇಕಾದದನ್ನು ಮಾತನಾಡುತ್ತಿಲ್ಲ ಎನ್ನುವುದಕ್ಕೆ ನನ್ನನ್ನು ಮೌನಿ ಎನ್ನುತ್ತಾರೆ. ಕಾವೇರಿ, ಭಾಷೆಯ ಸಮಸ್ಯೆ ಅಲ್ರೀ. ನೆಲ, ಜಲ, ಜನ ಹಾಗೂ ನದಿಯ ಸಮಸ್ಯೆ. ಒಂದು ಟಿಎಂಸಿ ಅಡಿ ನೀರು ಎಷ್ಟು ಅಂತ ಗೊತ್ತೇನ್ರಿ ಈ ಹೋರಾಟ ಮಾಡುವವರಿಗೆ. ತಜ್ಞರ ಜತೆ ಕುಳಿತು ಮಾತನಾಡುವ ವಿಷಯ ಇದು. ನೀನು ಈ ಕಡೆಯಾ, ಆ ಕಡೆಯಾ ಅಂತ ಮಾತನಾಡುವುದು ತರವಲ್ಲ.

* ಕುಟುಂಬ ರಾಜಕೀಯದ ಕುರಿತು ಏನು ಹೇಳುತ್ತೀರಿ?

ಒಂದೇ ಕುಟುಂಬದಿಂದ ಇನ್ನೊಬ್ಬರು ಅರ್ಹತೆ ಇದ್ದು ಬಂದರೆ ಅದು ಕುಟುಂಬ ರಾಜಕೀಯ ಅಲ್ಲ. ಅದೇ ಅರ್ಹತೆ ಇಲ್ಲದೆ ಬಂದರೆ ಕುಟುಂಬ ರಾಜಕೀಯ. ನಿಖಿಲ್‌ ಕುಮಾರಸ್ವಾಮಿ ಅವರದು ಕುಟುಂಬ ರಾಜಕೀಯ. ದೆಹಲಿಯಲ್ಲಿ ಅಷ್ಟೂ ಭಾಷೆಗಳ ಎಂಪಿಗಳ ಮಧ್ಯೆ ಯಾವ ತೀಕ್ಷ್ಣತೆಯಿಂದ ಆ ಹುಡುಗ ಮಾತನಾಡಬಲ್ಲ? ಕುಟುಂಬದ ಮಮಕಾರಕ್ಕೆ ಬಿದ್ದು ಕ್ಷೇತ್ರವೊಂದರ ಐದು ವರ್ಷಗಳನ್ನು ವೇಸ್ಟ್‌ ಮಾಡುವುದು ಅಪರಾಧ.

ಬರಹ ಇಷ್ಟವಾಯಿತೆ?

 • 36

  Happy
 • 1

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !