ಬಡ್ತಿ ಮೀಸಲು: ‘ಮೈತ್ರಿ’ಯಲ್ಲಿ ಒಡಕು?

7

ಬಡ್ತಿ ಮೀಸಲು: ‘ಮೈತ್ರಿ’ಯಲ್ಲಿ ಒಡಕು?

Published:
Updated:

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಪದ್ಧತಿ ಮತ್ತೆ ಜಾರಿಗೊಳಿಸುವ ‘ಬಡ್ತಿ ಮೀಸಲು ಕಾಯ್ದೆ–2017’ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ.

ಕಾಯ್ದೆ ಅನುಷ್ಠಾನ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿ‍ಪಿಎಆರ್‌) ಸಚಿವ ಸಂಪುಟ ಸಭೆಗೆ ಟಿಪ್ಪಣಿ ಸಿದ್ಧಪಡಿಸಿದೆ. ಕಾಯ್ದೆ ಅನುಷ್ಠಾನಗೊಳಿಸಬೇಕೇ ಅಥವಾ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಅಂತಿಮ ಆದೇಶದವರೆಗೆ ಕಾಯಬೇಕೇ ಎಂದು ಇಲಾಖೆ ಪ್ರಸ್ತಾವದಲ್ಲಿ ಕೇಳಿದೆ.

ಕಾಯ್ದೆಯ ಸಿಂಧುತ್ವ ಕುರಿತ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವುದರಿಂದ ಅಂತಿಮ ತೀರ್ಪು ನೀಡುವವರೆಗೆ ಕಾಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ‌ಕಾನೂನು ಇಲಾಖೆ ಮತ್ತು ಅಡ್ವೊಕೇಟ್‌ ಜನರಲ್‌ (ಎ.ಜಿ) ನೀಡಿದ್ದಾರೆ. ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಕೂಡ ಇದೇ ನಿಲುವು ಹೊಂದಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಆದರೆ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ಪರ ವಕೀಲ, ನಿವೃತ್ತ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, ‘ಕಾಯ್ದೆ ಅನುಷ್ಠಾನಗೊಳಿಸದೇ ಇರಲು ಸರ್ಕಾರಕ್ಕೆ ಯಾವುದೇ ಕಾರಣ ಇಲ್ಲ’ ಎಂದು‌ ಅಭಿಪ್ರಾಯ ನೀಡಿದ್ದಾರೆ. ಈ ಅಭಿಪ್ರಾಯಕ್ಕೆ ಸಂಬಂಧಪಟ್ಟಂತೆ ‌ಕಾನೂನು ಇಲಾಖೆ ಮತ್ತು ಎ.ಜಿ ಅವರಿಂದ ಸರ್ಕಾರ ಸಲಹೆ ಪಡೆದಿತ್ತು.

ಕಾಯ್ದೆ ಜಾರಿಗೊಳಿಸುವಂತೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಈ ಹಿಂದಿನ ಸಂಪುಟ ಸಭೆಗಳಲ್ಲಿ ಪಟ್ಟು ಹಿಡಿದಿದ್ದರು. ಆದರೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ಬಹುತೇಕ ಸಚಿವರು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಬರುವವರೆಗೆ ಕಾಯುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದೀಗ ಚೆಂಡು ಮತ್ತೆ ಸಂಪುಟ ಸಭೆಯ ಮುಂದೆ ಬಂದಿದೆ. ಕಾಯ್ದೆ ಜಾರಿಗೊಳಿಸುವಂತೆ ಪರಮೇಶ್ವರ ಮತ್ತು ಪ್ರಿಯಾಂಕ್‌ ಖರ್ಗೆ ಬಿಗಿ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಆದರೆ, ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿಗೆ ಕಾಯುವಂತೆ ಎ.ಜಿ ಮತ್ತು ಕಾನೂನು ಇಲಾಖೆ ಸಲಹೆ ನೀಡಿರುವುದರಿಂದ ಮುಖ್ಯಮಂತ್ರಿ ಮತ್ತು ಸಂಪುಟದ ಕೆಲವು ಕೆಲವು ಹಿರಿಯ ಸಚಿವರು ಅದೇ ಅಭಿಪ್ರಾಯ ವ್ಯಕ್ತಪಡಿಸುವ ಸಾಧ್ಯತೆ ಇದ್ದು, ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

ಹೊಸ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳನ್ನು ಜ. 16ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪೀಠ, ಯಾವುದೇ ಆದೇಶ ನೀಡಲು ನಿರಾಕರಿಸಿತ್ತು.

* ಬಡ್ತಿ ಮೀಸಲು ಕಾಯ್ದೆ ಅನುಷ್ಠಾನ ಮೂಲಕ, ಹಿಂಬಡ್ತಿಗೊಂಡಿರುವ ನೌಕರ‌ರನ್ನು ಬಿ.ಕೆ. ಪವಿತ್ರ ಪ್ರಕರಣದ ಪೂರ್ವದಲ್ಲಿ ಇದ್ದ ಹುದ್ದೆ ಮತ್ತು ಸ್ಥಳಕ್ಕೆ ನಿಯೋಜಿಸಬೇಕು

–ಡಿ. ಚಂದ್ರಶೇಖರಯ್ಯ, ಕಾನೂನು ಸಲಹೆಗಾರ, ಎಸ್‌ಸಿ ಎಸ್‌ಟಿ ನೌಕರರ ಸಮಿತಿ

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !