ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಳೆಗೆ ಪ್ರಾರ್ಥಿಸಿದ ಯಡಿಯೂರಪ್ಪ...

ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಕಾರ್ಯಕ್ರಮ; ವರುಣನ ಕೃಪೆಗಾಗಿ ಪರ್ಜನ್ಯ ಜಪ, ವಿಶೇಷ ಪೂಜೆ
Last Updated 6 ಜೂನ್ 2019, 10:46 IST
ಅಕ್ಷರ ಗಾತ್ರ

ಬೆಳಗಾವಿ: ವರುಣನ ಕೃಪೆಗಾಗಿ ಪ್ರಾರ್ಥಿಸಿ ಧಾರ್ಮಿಕ ದತ್ತಿ ಇಲಾಖೆಯಿಂದ ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಗುರುವಾರ ಪರ್ಜನ್ಯ ಜಪ, ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.

‘ರಾಜ್ಯದಲ್ಲಿ ಮಳೆಯ ವಿಳಂಬ, ಅಭಾವದಿಂದಾಗಿ ಅತ್ಯಂತ ಬರ ಪರಿಸ್ಥಿತಿ ಇರುವ ಕಾರಣ ವರುಣ ದೇವನ ಪ್ರಾರ್ಥನೆಗಾಗಿ ಇಲಾಖೆ ವ್ಯಾಪ್ತಿಗೆ ಒಳಪಡುವ, ಆರ್ಥಿಕವಾಗಿ ಸದೃಢವಾಗಿರುವ ದೇವಾಲಯಗಳಲ್ಲಿ ಅಭಿಷೇಕ, ಪರ್ಜನ್ಯ ಹೋಮ, ಜಪ ಮಾಡಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಪ್ರಾರಂಭಿಸಿ, ವಿಶೇಷ ಪೂಜೆ ನೆರವೇರಿಸಬೇಕು’ ಎಂದು ಸರ್ಕಾರದಿಂದ ಆದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ‘ಎ’, ‘ಬಿ’ ಹಗೂ ‘ಸಿ’ ವರ್ಗದ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಬಹುತೇಕ ಎಲ್ಲ ಕಡೆಗಳಲ್ಲೂ ಪೂಜೆ ನಡೆದಿದೆ. ಮಳೆಗಾಗಿ ಪ್ರಾರ್ಥಿಸಲಾಗಿದೆ’ ಎಂದು ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ರವಿ ಕೊಟಾರಗಸ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಯಡಿಯೂರಪ್ಪ ನೇತೃತ್ವ:‘ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಪ್ರಧಾನ ಅರ್ಚಕ ಯಡಿಯೂರಪ್ಪ ನೇತೃತ್ವದಲ್ಲಿ, ದೇವಸ್ಥಾನದ ಉತ್ತರ ದಿಕ್ಕಿನಲ್ಲಿರುವ ಗಂಗಾಮಾತೆಯ ಮೂರ್ತಿಗೆ ಅತ್ಯಂತ ಶ್ರದ್ಧೆಯಿಂದ ಪೂಜೆ ಸಲ್ಲಿಸಲಾಯಿತು. ಗಂಗಾಮಾತೆಯ ಮೂರ್ತಿ ಇರುವುದು ನಮ್ಮ ದೇವಸ್ಥಾನದ ವಿಶೇಷ. ಅರ್ಚಕರು ಒಂದೂವರೆ ತಾಸು ನೀರಿನಲ್ಲಿಯೇ ನಿಂತು ಪ್ರಾರ್ಥಿಸಿದರು. ಹೂಲಿ ಮಠದ ಶಾಸ್ತ್ರಿಗಳ ತಂಡದವರು ಕಳಶ ಪೂಜೆ ನೆರವೇರಿಸಿದರು. ಬೆಳಿಗ್ಗೆ 5ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭಿಸಿ, 9.45ರ ವೇಳೆಗೆ ಕಾರ್ಯಕ್ರಮ ಮುಗಿಯಿತು. ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಮಳೆ ಬಂದರೆ ಎಲ್ಲರಿಗೂ ಒಳಿತಾಗುತ್ತದೆ’ ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ಅವರು ಮಾಹಿತಿ ನೀಡಿದರು.

‘ಎ’ ವರ್ಗದ ದೇಗುಲಗಳಾದ ಅನಗೋಳದ ಹರಿಮಂದಿರ, ತಾಲ್ಲೂಕಿನ ಪಂತಬಾಳೇಕುಂದ್ರಿ, ರಾಮದುರ್ಗ ತಾಲ್ಲೂಕು ಗೊಡಚಿ ವೀರಭದ್ರ ದೇವಸ್ಥಾನ, ರಾಯಬಾಗದ ಚಿಂಚಲಿ ಮಾಯಕ್ಕದೇವಿ, ‘ಬಿ’ ವರ್ಗದಲ್ಲಿರುವ ಟಿಳಕವಾಡಿಯ ಸಾಯಿಮಂದಿರ, ಪೊಲೀಸ್‌ ಕೇಂದ್ರ ಸ್ಥಾನದಲ್ಲಿರುವ ವೀರಭದ್ರ, ಹುಕ್ಕೇರಿ ತಾಲ್ಲೂಕು ಹೊಳೆಮ್ಮ ದೇವಸ್ಥಾನ, ಸಮಾದೇವಿಗಲ್ಲಿಯ ಸಮಾದೇವಿ ಮಂದಿರ, ಮಂಗಸೂಳಿ ಮಲ್ಲಯ್ಯ ದೇಗುಲ, ‘ಸಿ’ ವರ್ಗದಲ್ಲಿರುವ ತಾಲ್ಲೂಕಿನ ಸುಳೇಭಾವಿಯ ಮಹಾಲಕ್ಷ್ಮಿ ದೇವಸ್ಥಾನ, ನಿಪ್ಪಾಣಿಯ ಅಂಬಿಕಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಯಲ್ಲಮ್ಮನ ಗುಡ್ಡದಲ್ಲಿ ಪೂಜೆ ಸಲ್ಲಿಸುವ ವೇಳೆಯಲ್ಲಿಯೇ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಇದು ಶುಭದ ಸಂಕೇತವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT