ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ‘ಇಂಗ್ಲಿಷ್ ಶಾಲೆ‌’ ಆರಂಭಕ್ಕೆ ತಯಾರಿ; ವಿರೋಧದ ನಡುವೆಯೂ ಆರಂಭ

74 ಶಾಲೆ ಆಯ್ಕೆ
Last Updated 16 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಸಾಹಿತಿಗಳು, ಭಾಷಾ ತಜ್ಞರು ಮತ್ತು ಚಿಂತಕರ ವಿರೋಧದ ನಡುವೆಯೂ, ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಇಂಗ್ಲಿಷ್ ವಿಷಯವನ್ನು ಮಾಧ್ಯಮವನ್ನಾಗಿ ಕಲಿಸುವ ಉದ್ದೇಶದ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಸರ್ಕಾರಿ ಶಾಲೆಗಳು ‘ಕಾನ್ವೆಂಟ್ ರೂಪ’ ಪಡೆಯಲಿವೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 74 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.

ಸರ್ಕಾರದ ಸೂಚನೆ ಮೇರೆಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಬೇಸಿಗೆ ರಜೆ ಕಳೆದು ಶಾಲೆಗಳು ಪುನರಾರಂಭವಾಗುವ ವೇಳೆಗೆ ಆಯ್ದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ವಾತಾವರಣ ಕಾಣಸಿಗಲಿದೆ.

ಮೊದಲ ಹಂತದಲ್ಲಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 4 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಪ್ರತಿನಿಧಿಸುವ ಗ್ರಾಮೀಣ ಮತಕ್ಷೇತ್ರದಲ್ಲಿ ಇಂದು ಶಾಲೆಯನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಶಾಲೆಗಳನ್ನು ಗುರುತಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ 34 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 40 ಶಾಲೆಗಳು ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ‘ರೂಪಾಂತರ’ ಹೊಂದಲಿವೆ.

ದಾಖಲಾತಿ ಹೆಚ್ಚಿರುವ ಶಾಲೆ

ವಿಶೇಷವೆಂದರೆ, ಮಕ್ಕಳ ಸಂಖ್ಯೆ ಹೆಚ್ಚಿರುವ (ಸರಾಸರಿ 300) ಹಾಗೂ ಹಾಜರಾತಿಯೂ ಉತ್ತಮ ಪ್ರಮಾಣದಲ್ಲಿರುವ ಶಾಲೆಗಳನ್ನೇ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಸಲಾಗುತ್ತಿತ್ತು. ಇಂಗ್ಲಿಷನ್ನು ವಿಷಯವಾಗಿ ಬೋಧಿಸಲಾಗುತ್ತಿತ್ತು. ಈಗ, 1ನೇ ತರಗತಿಯಿಂದಲೇ ಇಂಗ್ಲಿಷ್‌ ಮಾಧ್ಯಮದಲ್ಲಿ ಮಕ್ಕಳನ್ನು ಸಿದ್ಧಗೊಳಿಸಲಾಗುತ್ತದೆ.

‘ಈ ಮೂಲಕ ಖಾಸಗಿ ಕಾನ್ವೆಂಟ್‌ಗಳಿಗೆ ಪೈಪೋಟಿ ನೀಡಲು ಮತ್ತು ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯಂತ ಅಗತ್ಯವಾಗಿರುವ ಇಂಗ್ಲಿಷ್ ಜ್ಞಾನವನ್ನು ಸರ್ಕಾರಿ ಶಾಲೆಗಳ ಮಕ್ಕಳಿಗೂ ಕೊಡಲು ಉದ್ದೇಶಿಸಲಾಗಿದೆ’ ಎಂದು ಸರ್ಕಾರ ಹೇಳಿದೆ. ಜೆಡಿಎಸ್‌–ಸಮ್ಮಿಶ್ರ ಸರ್ಕಾರವು ಈ ಯೋಜನೆ ಕುರಿತು ಬಜೆಟ್‌ನಲ್ಲೂ ಘೋಷಿಸಿತ್ತು. ಈ ಅನುಷ್ಠಾನಕ್ಕೆ ಮುಂದಾಗಿದೆ.

ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ಬಟ್ಟೆ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ಹಾಲು, ಬೈಸಿಕಲ್, ಶೂ–ಸಾಕ್ಸ್ ಮೊದಲಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಲಿಕಾ ಗುಣಮಟ್ಟ ವೃದ್ಧಿಸುವುದಕ್ಕೆ ಹಲವು ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ. ಆದಾಗ್ಯೂ ಇಂಗ್ಲಿಷ್ ಮಾಧ್ಯಮವಿಲ್ಲ ಎಂದು ಕಾರಣದಿಂದ ಕೆಲವು ಪೋಷಕರು ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಸೇರಿಸುವುದು ಕಂಡುಬರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಪೋಷಕರು ಕೂಡ ಇಂಗ್ಲಿಷ್ ವ್ಯಾಮೋಹದಿಂದ ಹೊರತಾಗಿಲ್ಲ. ಹೀಗಾಗಿ, ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಇದ್ದರೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಪ್ರಮೇಯ ಬರುವುದಿಲ್ಲ. ಇದರಿಂದ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿಯೂ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ತಯಾರಿ ನಡೆದಿದೆ

‘ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳಿಗೆ ತಲಾ 4ರಂತೆ 40 ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್ ಕಲಿಕೆ ಆರಂಭವಾಗಲಿದೆ. ಇರುವ ಕೊಠಡಿಗಳಲ್ಲೇ ತರಗತಿಗಳು ನಡೆಯಲಿವೆ. ಮಾಧ್ಯಮವಷ್ಟೇ ಬದಲಾಗಲಿದೆ. ಈ ಕುರಿತು ಎಸ್‌ಡಿಎಂಸಿಯವರಿಗೂ ತಿಳಿಸಲಾಗಿದೆ’ ಎಂದು ಚಿಕ್ಕೋಡಿ ಡಿಡಿಪಿಐ ಎಂ.ಜಿ. ದಾಸರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸರ್ಕಾರದ ಸೂಚನೆ ಪ್ರಕಾರ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದ ಪ್ರತಿ ಶಾಲೆಯ 2–3 ಮಂದಿ ಶಿಕ್ಷಕರನ್ನು ಮೊದಲ ವಾರದಲ್ಲಿ ಬೆಂಗಳೂರಿನ ಆರ್‌ಐಇ (ಪ್ರಾದೇಶಿಕ ಶಿಕ್ಷಣ ಸಂಸ್ಥೆ)ಯಲ್ಲಿ ತರಬೇತಿಗೆ ಕಳುಹಿಸಲಾಗುವುದು. ಅವರು ಮಾಸ್ಟರ್‌ ಟ್ರೇನರ್‌ಗಳಾಗಿ ಉಳಿದವರಿಗೆ ಇಲ್ಲಿಯೇ ತರಬೇತಿ ಕೊಡುತ್ತಾರೆ. ಆಯ್ಕೆಯಾದ ಶಾಲೆಗಳಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗಾಗಿ ಅಗತ್ಯವಾದ ಇಂಗ್ಲಿಷ್ ಮಾಧ್ಯಮದ ಪುಸ್ತಕಗಳನ್ನು ಒದಗಿಸುವಂತೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT