ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಸ್ ಗುದ್ದಾಟ: ಪೊಲೀಸರಿಗಿಲ್ಲ ಪದಕ

ಹಿರಿಯ ಅಧಿಕಾರಿಗಳ ಗುದ್ದಾಟ; ಕೆಳಹಂತದ ಅಧಿಕಾರಿಗಳಿಗೆ ಪ್ರಾಣಸಂಕಟ * ಗೃಹ ಇಲಾಖೆಯ ಕಾರ್ಯದರ್ಶಿ, ಸಚಿವರ ನಿರ್ಲಕ್ಷ್ಯ
Last Updated 25 ಜನವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಐಪಿಎಸ್‌ ಅಧಿಕಾರಿಗಳ ಮುಸುಕಿನ ಗುದ್ದಾಟದಿಂದಾಗಿ, ಅತ್ಯುತ್ತಮ ಸೇವೆಗಾಗಿಪ್ರತಿ ವರ್ಷಗಣರಾಜ್ಯೋತ್ಸವ ದಿನ ಕೊಡುವ ರಾಷ್ಟ್ರಪತಿ ಪದಕಗಳಿಂದ ಈ ಬಾರಿ ರಾಜ್ಯದ ಪೊಲೀಸರು ವಂಚಿತರಾಗಿದ್ದಾರೆ. ಸರ್ಕಾರದ ಈ ನಡೆ ಪೊಲೀಸ್‌ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪದಕಗಳಿಗೆ ಅರ್ಹರಾದ 47 ಪೊಲೀಸರ ಪಟ್ಟಿಯನ್ನು ಪೊಲೀಸ್‌ ಇಲಾಖೆ ಸಿದ್ಧಪಡಿಸಿ ಗೃಹ ಸಚಿವಾಲಯಕ್ಕೆ ಸಲ್ಲಿಸಿತ್ತು. ಆದರೆ, ಈ ಪಟ್ಟಿಯನ್ನು ರಾಜ್ಯ ಸರ್ಕಾರ ನಿಗದಿತ ದಿನದಂದು ಕೇಂದ್ರಕ್ಕೆ ಕಳುಹಿಸಿಲ್ಲ. ಹೀಗಾಗಿ, ಕರ್ನಾಟಕ ಹೊರತುಪಡಿಸಿ ಪದಕಗಳನ್ನು ಪಡೆದ ಉಳಿದ ರಾಜ್ಯಗಳ ಪೊಲೀಸರ ಹೆಸರನ್ನು ಶುಕ್ರವಾರ ಪ್ರಕಟಿಸಲಾಗಿದೆ.

ಲಾಭದಾಯಕ ಹುದ್ದೆ, ವರ್ಗಾವಣೆ ವಿಷಯವಾಗಿ ಐಪಿಎಸ್ ಅಧಿಕಾರಿಗಳ ನಡುವೆ ತೆರೆಮರೆಯಲ್ಲಿ ಶೀತಲ ಸಮರ ನಡೆಯುತ್ತಿದೆ. ರಾಷ್ಟ್ರಪತಿ ಪದಕಕ್ಕೆ ಸಿದ್ಧಪಡಿಸಿದ ಪೊಲೀಸರ ಹೆಸರಿನ ಬಗ್ಗೆ ತಗಾದೆ ತೆಗೆದಿದ್ದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು, ‘ಪದಕಕ್ಕೆ ತಮ್ಮ ಹೆಸರನ್ನು ಪರಿಗಣಿಸದೆ ಅನ್ಯಾಯ ಮಾಡಲಾಗಿದೆ’ ಎಂದು ಆರೋಪಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅವರ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ‘ಈ ವಿಷಯದಲ್ಲಿ ಆತುರದ ಕ್ರಮ ಕೈಗೊಳ್ಳಬೇಡಿ’ ಎಂದು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ(ಡಿಪಿಎಆರ್‌)ನಿರ್ದೇಶನ ನೀಡಿತ್ತು.

ಆ ಆದೇಶದಿಂದಾಗಿ ಈ ಬಾರಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಲ್ಲ ಎನ್ನಲಾಗಿದೆ.

ಪಟ್ಟಿ ಕಳುಹಿಸುವಂತೆ ಕೋರಿಕೇಂದ್ರ ಗೃಹ ಸಚಿವಾಲಯ, ಎರಡು ಬಾರಿ ರಾಜ್ಯದ ಗೃಹ ಇಲಾಖೆಗೆ ಪತ್ರ ಬರೆದಿದ್ದು, ಪ್ರತಿಕ್ರಿಯೆ ನೀಡಿಲ್ಲವೆಂಬ ಆರೋಪವಿದೆ.

ದೆಹಲಿಯಲ್ಲಿ ಜ. 24ರಂದು ಸಭೆ ಸೇರಿದ್ದ ಪದಕ ಆಯ್ಕೆ ಸಮಿತಿ, ಕರ್ನಾಟಕದಿಂದ ಪಟ್ಟಿ ಬಾರದಿದ್ದರಿಂದ ಬೇರೆ ರಾಜ್ಯದ ಪೊಲೀಸರಿಗೆ ಹೆಚ್ಚುವರಿಯಾಗಿ ಪದಕಗಳನ್ನು ನೀಡಿ ಪಟ್ಟಿ ಅಂತಿಮಗೊಳಿಸಿದೆ. ಎಲ್ಲರಿಗೂ ಜ. 26ರಂದು ರಾಷ್ಟ್ರಪತಿಯವರು ಪದಕ ಪ್ರದಾನ ಮಾಡಲಿದ್ದಾರೆ.

ಕೆಳಹಂತದ ಅಧಿಕಾರಿಗಳಿಗೇಕೆ ಶಿಕ್ಷೆ: ‘ಐಪಿಎಸ್ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟಕ್ಕೂ ಕೆಳಹಂತದ ಅಧಿಕಾರಿಗಳಿಗೆ ಯಾವುದೇ ಸಂಬಂಧವಿಲ್ಲ. ಆದರೂ ನಮಗೆ ಈ ಬಾರಿ ಪದಕ ಕೈ ತಪ್ಪುವಂತೆ ಮಾಡಲಾಗಿದೆ. ನಮಗೇಕೆ ಈ ಶಿಕ್ಷೆ’ ಎಂದು ಪದಕ ವಂಚಿತ ಪೊಲೀಸರು ಅಳಲು ತೋಡಿಕೊಂಡರು.

‘ಉತ್ತಮ ಕೆಲಸ ಮಾಡಿದ್ದು, ಉನ್ನತ ಅಧಿಕಾರಿಗಳು ನಮ್ಮನ್ನು ಗುರುತಿಸಿದ್ದರು. ಪದಕ ನೀಡಲು ಅರ್ಹರೆಂದು ನಿರ್ಧರಿಸಿ ಐಪಿಎಸ್ ಅಧಿಕಾರಿಗಳ ಜೊತೆಯಲ್ಲಿ ನಮ್ಮ ಹೆಸರನ್ನು ಸೇರಿಸಿ ಕಳುಹಿಸಿದ್ದರು. ಪಟ್ಟಿಯಲ್ಲಿ ಹೆಸರಿದ್ದ ಅನೇಕರು ಸದ್ಯದಲ್ಲೇ ನಿವೃತ್ತಿ ಆಗಲಿದ್ದಾರೆ’ ಎಂದರು.

**

ಐಪಿಎಸ್‌ ಅಧಿಕಾರಿಯೊಬ್ಬರ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌, ರಾಷ್ಟ್ರಪತಿ ಪದಕಗಳಿಗೆ ಪೊಲೀಸರ ಹೆಸರು ಶಿಫಾರಸಿಗೆ ತಡೆ ನೀಡಿದೆ.

–ಎಂ.ಬಿ. ಪಾಟೀಲ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT