ಡ್ರಗ್ಸ್ ಚಟಕ್ಕೆ ಬಿದ್ದು ಕಳ್ಳರಾದ ಪದವೀಧರರು

ಮಂಗಳವಾರ, ಮೇ 21, 2019
23 °C
ದುಬಾರಿ ಬೈಕ್ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಗಳು

ಡ್ರಗ್ಸ್ ಚಟಕ್ಕೆ ಬಿದ್ದು ಕಳ್ಳರಾದ ಪದವೀಧರರು

Published:
Updated:
Prajavani

ಬೆಂಗಳೂರು: ಬುಲೆಟ್, ಅವೆಂಜರ್ ಸೇರಿದಂತೆ ದುಬಾರಿ ಮೌಲ್ಯದ ಬೈಕ್‌ಗಳನ್ನೇ ಕದಿಯುತ್ತಿದ್ದ ಈ ಬಿ.ಕಾಂ ಪದವೀಧರರು, ಕೇವಲ ₹ 10 ಸಾವಿರಕ್ಕೆ ಒಂದರಂತೆ ಬೈಕ್‌ ಮಾರುತ್ತಿದ್ದರು. ಆ ಹಣದಲ್ಲೇ ಡ್ರಗ್ಸ್ ಹಾಗೂ ಮದ್ಯ ಖರೀದಿಸಿ ನಶೆಯಲ್ಲಿ ತೇಲಾಡುತ್ತಿದ್ದರು. ಇದೀಗ ಸಿ.ಸಿ ಟಿ.ವಿ ಕ್ಯಾಮೆರಾದ ಸುಳಿವು ಇಬ್ಬರಿಗೂ ಜೈಲಿನ ದಾರಿ ತೋರಿಸಿದೆ.

‘ತಿಲಕ್‌ನಗರದ ಮೊಹಮದ್ ನಿಹಾಲ್ (26) ಹಾಗೂ ಜಯನಗರ 1ನೇ ಬ್ಲಾಕ್‌ನ ಮೊಹಮದ್ ಇಸಾಕ್ (31) ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳು ತಿಲಕ್‌ನಗರ, ಕಮರ್ಷಿಯಲ್ ಸ್ಟ್ರೀಟ್‌, ವಿಲ್ಸನ್‌ ಗಾರ್ಡನ್, ಹುಳಿಮಾವು, ಕಬ್ಬನ್‌ಪಾರ್ಕ್‌, ಬ್ಯಾಟರಾಯನಪುರ, ಅಶೋಕನಗರ ಹಾಗೂ ಸುದ್ದಗುಂಟೆಪಾಳ್ಯ ಠಾಣೆಗಳ ವ್ಯಾಪ್ತಿಯಲ್ಲಿ 14 ಬೈಕ್‌ಗಳನ್ನು ಕಳವು ಮಾಡಿದ್ದರು. ಅಷ್ಟೂ ವಾಹನಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ತಿಳಿಸಿದರು.

ಭದ್ರಾವತಿಯ ನಿಹಾಲ್, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಕಾಂಗ್ರೆಸ್ ಮುಖಂಡರೊಬ್ಬರ ಬಳಿ ಕಾರು ಚಾಲಕನಾಗಿದ್ದ. ಇಸಾಕ್ ಕೂಡ ಕ್ಯಾಬ್ ಓಡಿಸಿಕೊಂಡಿದ್ದ. ಇಬ್ಬರೂ ಮಾದಕ ವ್ಯಸನಿಗಳಾಗಿದ್ದು, ತಮ್ಮ ಚಟಕ್ಕೆ ಹಣ ಬೇಕಾದಾಗಲೆಲ್ಲ ಬೈಕ್‌ಗಳನ್ನು ಕಳವು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಸಿಕ್ಕಿಬಿದ್ದಿದ್ದು ಹೇಗೆ: ‘ಇವರು ಕೆಲ ದಿನಗಳ ಹಿಂದೆ ಜಯನಗರ 9ನೇ ಬ್ಲಾಕ್‌ನಲ್ಲಿ ಪಲ್ಸರ್ ಬೈಕ್ ಕದ್ದಿದ್ದರು. ಈ ಸಂಬಂಧ ಬೈಕ್ ಮಾಲೀಕ ತಿಲಕ್‌ನಗರ ಠಾಣೆಗೆ ದೂರು ಕೊಟ್ಟಿದ್ದರು. ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಇದಾದ ಮೂರ್ನಾಲ್ಕು ದಿನಗಳಲ್ಲಿ ಅದೇ ಬೈಕ್‌ನಲ್ಲಿ ರಿಚ್ಮಂಡ್ ಟೌನ್‌ಗೆ ಬಂದಿದ್ದ ಆರೋಪಿಗಳು, ಅಲ್ಲಿಂದ ಇನ್ನೊಂದು ಅವೆಂಜರ್‌ ಬೈಕನ್ನೂ  ಕಳವು ಮಾಡಿಕೊಂಡು ಹೋಗಿದ್ದರು.

ಅವೆಂಜರ್ ಬೈಕ್ ಕಳುವಾದ ಸಂಬಂಧ ಸಿ.ಸಿ ಟಿ.ವಿ ದೃಶ್ಯದ ಸಮೇತ ಸುದ್ದಿ ಪ್ರಸಾರ ಮಾಡಿದ್ದ ವಾಹಿನಿಯೊಂದು, ಕಳ್ಳರು ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ದೃಶ್ಯವನ್ನು ಹಾಗೂ ಅದರ ನೋಂದಣಿ ಸಂಖ್ಯೆಯನ್ನೂ ಸ್ಪಷ್ಟವಾಗಿ ತೋರಿಸಿತ್ತು. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ ಬೈಕ್‌ನ ನೋಂದಣಿ ಸಂಖ್ಯೆ ಕೂಡ ಅದೇ ಆಗಿದ್ದರಿಂದ ಎಚ್ಚೆತ್ತುಕೊಂಡ ತಿಲಕ್‌ನಗರ ಪೊಲೀಸರು, ಆರೋಪಿಗಳ ಚಹರೆ ಆಧರಿಸಿ ತಿಲಕ್‌ನಗರದಲ್ಲೇ ಇಬ್ಬರನ್ನೂ ವಶಕ್ಕೆ ಪಡೆದರು.

20 ಸರ ಕದ್ದ ಎಲೆಕ್ಟ್ರಿಷಿಯನ್‌ಗಳು!
ಎಲೆಕ್ಟ್ರಿಷಿಯನ್‌ ಕೆಲಸ ಬಿಟ್ಟು ಒಂಟಿ ಮಹಿಳೆಯರ ಚಿನ್ನದ ಸರ ದೋಚಲು ಶುರು ಮಾಡಿದ್ದ ಕಮ್ಮನಹಳ್ಳಿಯ ಅರುಣ್ (27) ಹಾಗೂ ಬೈಯಪ್ಪನಹಳ್ಳಿಯ ರಾಜೇಶ್ (26) ಎಂಬುವರನ್ನು ಬಂಧಿಸಿರುವ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, ₹ 22 ಲಕ್ಷ ಮೌಲ್ಯದ 728 ಗ್ರಾಂ ಒಡವೆ ಜಪ್ತಿ ಮಾಡಿದ್ದಾರೆ.

ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಯುವಿಹಾರ ಮಾಡುವ ವೃದ್ಧೆಯರನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆಗೆ ಇಳಿಯುತ್ತಿದ್ದ ಇವರು, ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಹೋಗಿ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಬಂಧಿತರ ವಿರುದ್ಧ ನಗರದ 11 ಠಾಣೆಗಳಲ್ಲಿ 20 ಸರಗಳವು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !