ಭಾನುವಾರ, ಜನವರಿ 19, 2020
24 °C

‘ವಸತಿ ಅಕ್ರಮ ತಡೆಗೆ ಜಾಗೃತ ದಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ವಸತಿ ಯೋಜನೆಗಳ ಅಕ್ರಮ ತಡೆಗೆ ಕೆಎಸ್‌ಆರ್‌ಟಿಸಿ, ಬೆಸ್ಕಾಂ ಮಾದರಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ರಾಜ್ಯಮಟ್ಟದ ‘ವಸತಿ ಜಾಗೃತ ದಳ’ ರಚಿಸಲು ಸರ್ಕಾರ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿದ ವಸತಿ ಸಚಿವ ವಿ.ಸೋಮಣ್ಣ, ‘ಹಿರಿಯ ಅಧಿಕಾರಿ ನೇತೃತ್ವದಲ್ಲಿ ಜಾಗೃತ ದಳ ರಚಿಸಲಾಗುವುದು. ಈ ಸಮಿತಿಯು ವಿವಿಧ ವಸತಿ ಯೋಜನೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ. ತಂಡದ ಅಧಿಕಾರ ವ್ಯಾಪ್ತಿಯನ್ನು ಇನ್ನಷ್ಟೇ ನಿಗದಿಪಡಿಸಬೇಕಿದೆ’ ಎಂದರು.

ಜಾಗೃತ ದಳದ ಕಾರ್ಯನಿರ್ವಹಣೆ, ಸಾಧಕ, ಬಾಧಕಗಳನ್ನು ನೋಡಿಕೊಂಡು ಜಿಲ್ಲಾ, ತಾಲ್ಲೂಕು ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಹೇಳಿದರು.

ಆಧಾರ್ ಕಡ್ಡಾಯ: ಪ್ರಗತಿಯಲ್ಲಿ ಇರುವ ಹಾಗೂ ಇನ್ನು ಮುಂದೆ ಆಯ್ಕೆಯಾಗುವ ಫಲಾನುಭವಿಗಳ ಕುಟುಂಬ ಸದಸ್ಯರ ಆಧಾರ್, ಪಡಿತರ ಚೀಟಿಯನ್ನು ಜೋಡಣೆ ಮಾಡಲಾಗುತ್ತದೆ. ಇದರಿಂದ ಒಂದೇ ಕುಟುಂಬದ ವಿವಿಧ ಸದಸ್ಯರ ಹೆಸರಿನಲ್ಲಿ ವಸತಿ ಪಡೆದುಕೊಳ್ಳುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕಂದಾಯ ಕೋಶ: ವಿವಿಧ ವಸತಿ ಯೋಜನೆಗಳಿಗೆ ಅಗತ್ಯವಿರುವ ಜಮೀನು ಮಂಜೂರು, ಭೂಮಿ ಖರೀದಿ, ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ‘ಕಂದಾಯ ಕೋಶ’ ಸ್ಥಾಪಿಸಲಾಗುವುದು. ಇದರಿಂದ ಮನೆ ನಿರ್ಮಿಸಲು ಬೇಕಾದ ನಿವೇಶನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸಚಿವರು ಹೇಳಿದರು.

ಐಇಸಿ ಅಕ್ರಮ: ‘ವಸತಿ ಇಲಾಖೆ ವ್ಯಾಪ್ತಿಯಲ್ಲಿ ಮಾಹಿತಿ, ಶಿಕ್ಷಣ, ಸಂವಹನ (ಐಇಸಿ) ಯೋಜನೆ ಮೂಲಕ ಕೋಟ್ಯಂತರ ಹಣ ದುರುಪಯೋಗ ಆಗಿದೆ. ಕೊಳಚೆ ಪ್ರದೇಶಗಳ ಬಡವರ ಮನವೊಲಿಕೆ ಹೆಸರಿನಲ್ಲಿ ಹಣ ಪಡೆದು ಸಾಧನಾ ಸಂಸ್ಥೆ ವಂಚಿಸಿದೆ. 2017–18ನೇ ಸಾಲಿನಲ್ಲಿ ₹2.50 ಕೋಟಿ ನೀಡಲಾಗಿದ್ದು, ನಂತರದ ಎರಡು ವರ್ಷಗಳಲ್ಲಿ ₹3.50 ಕೋಟಿ ನೀಡಬೇಕಿತ್ತು. ಅಕ್ರಮ ನಡೆದಿರುವುದು ನನ್ನ ಗಮನಕ್ಕೆ ಬಂದ ತಕ್ಷಣ ಹಣ ನೀಡುವುದನ್ನು ಸ್ಥಗಿತಗೊಳಿಸಿದ್ದು, ತನಿಖೆಗೆ ಆದೇಶಿಸಲಾಗಿದೆ’ ಎಂದು ತಿಳಿಸಿದರು.

ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೆ ನೀಡುತ್ತಿರುವ ₹1.20 ಲಕ್ಷ ನೆರವನ್ನು ₹2 ಲಕ್ಷಕ್ಕೆ ಹೆಚ್ಚಿಸಲಾಗುವುದು
ವಿ.ಸೋಮಣ್ಣ, ವಸತಿ ಸಚಿವ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು