ಶನಿವಾರ, ಸೆಪ್ಟೆಂಬರ್ 21, 2019
24 °C
ಗೇರು ಬೆಳೆಗಾರರಿಗೆ ನಿರಾಸೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಮುಖ

ಗೇರು ಇಳುವರಿ ಕುಂಠಿತ; ದರ ಕುಸಿತ

Published:
Updated:
Prajavani

ಶಿರಸಿ: ಹವಾಮಾನ ವೈಪರೀತ್ಯದಿಂದ ಈ ಬಾರಿ ಗೇರು ಇಳುವರಿ ತೀವ್ರ ಕುಂಠಿತವಾಗಿದೆ. ಇದರ ಜತೆಗೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿರುವುದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲಿನ ಭಾಗದ ಕೃಷಿಕರಿಗೆ ಗೇರು ಉಪ ಆದಾಯ ತಂದುಕೊಡುವ ಬೆಳೆ. ಖಾಲಿ ಬಿಟ್ಟಿರುವ ಜಮೀನು, ಬೆಟ್ಟ ಭೂಮಿಯಲ್ಲಿ ರೈತರು ಹೆಚ್ಚಾಗಿ ಗೇರು ಬೆಳೆಯುತ್ತಾರೆ. ತೋಟಗಾರಿಕಾ ಇಲಾಖೆಯ ದಾಖಲೆ ಪ್ರಕಾರ ಜಿಲ್ಲೆಯಲ್ಲಿ 4,125 ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆಯಿದೆ.

‘ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಬೆಳೆಯ ಮೇಲೆ ಗೇರು ಬೀಜದ ದರ ನಿಗದಿಯಾಗುವುದಿಲ್ಲ. ಜಾಗತಿಕ ಮಾರುಕಟ್ಟೆ ಆಧರಿಸಿ ಇಲ್ಲಿನ ಉತ್ಪನ್ನಗಳ ದರ ನಿರ್ಧರಿತವಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೇ ಗೇರು ಬೀಜದ ಬೆಲೆ ಕೆಲವು ತಿಂಗಳುಗಳಿಂದ ಕುಸಿತವಾಗಿದ. ಗೇರು ಬೆಳೆಯುವ ದೇಶಗಳಲ್ಲಿ ಉತ್ಪಾದನೆ ಅಧಿಕವಿರುವುದರಿಂದ ದರ ಇಳಿಮುಖವಾಗಿದೆ. ಜಿಲ್ಲೆಯಲ್ಲಿರುವ ಗೇರು ಫ್ಯಾಕ್ಟರಿಗಳಿಗೆ ಶೇ 80ರಷ್ಟು ಕಚ್ಚಾಗೇರು ಹೊರ ದೇಶಗಳಿಂದ ಆಮದಾಗುತ್ತದೆ’ ಎನ್ನುತ್ತಾರೆ ಕುಮಟಾದ ಕಲಾಧರ ಕ್ಯಾಶ್ಯೂಸ್‌ನ ಮುಖ್ಯಸ್ಥ ಕೃಷ್ಣ ಭಟ್ಟ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೇರು ಬೀಜದ ಕೆ.ಜಿ.ಯೊಂದಕ್ಕೆ ₹ 70–80 ದರ ಸಿಗುತ್ತಿದೆ. ರಫ್ತು ವಹಿವಾಟು ಕೂಡ ಇಳಿಮುಖವಾಗಿದೆ. ಪಶ್ಚಿಮ ಆಫ್ರಿಕಾದ ನೈಜೀರಿಯಾ, ಐವರಿ ಕೋಸ್ಟ್‌, ಗಾನಾ, ಇಸಾವೊ ಸೇರಿ ಸುಮಾರು ಒಂಬತ್ತು ದೇಶಗಳಿಂದ ಇಲ್ಲಿಗೆ ಗೇರು ಬೀಜ ಪೂರೈಕೆಯಾಗುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಳೆದ ವರ್ಷ ಉತ್ತಮ ಇಳುವರಿ ಹಾಗೂ ದರ ದೊರೆತಿತ್ತು. ಕೆ.ಜಿ.ಯೊಂದಕ್ಕೆ ₹ 130ರಿಂದ ₹ 150ರವರೆಗೆ ದರ ಲಭಿಸಿತ್ತು. ಈ ಬಾರಿ ಗುಣಮಟ್ಟದ ಬೀಜಕ್ಕೆ ಗರಿಷ್ಠ ₹ 100 ದರ ಸಿಗುತ್ತಿದೆ. ಗೇರು ಮರಗಳಿಗೆ ನಿರ್ವಹಣೆ ಹೆಚ್ಚು ಬೇಕಾಗುವುದಿಲ್ಲ. ಆದರೆ, ಕೊಯ್ಲಿನ ವೇಳೆ ಹಣ್ಣಿನಿಂದ ಬೀಜ ಬೇರ್ಪಡಿಸುವ ಕೆಲಸಕ್ಕೆ ಜನರು ಬೇಕು. ಉಪ ಆದಾಯದ ಮೂಲವಾಗಿರುವ ಕಾರಣಕ್ಕೇ ನಾವು ಹೆಚ್ಚಿನ ಪ್ರದೇಶದಲ್ಲಿ ಗೇರು ಬೆಳೆದಿದ್ದೇವೆ’ ಎನ್ನುತ್ತಾರೆ ಬೆಳೆಗಾರ ಗಣೇಶ ಹೆಗಡೆ.

‘ಬೆಟ್ಟದಲ್ಲಿ 150ರಷ್ಟು ಗೇರು ಮರಗಳಿವೆ. ಕಳೆದ ವರ್ಷ 1.50 ಕ್ವಿಂಟಲ್ ಬೀಜ ಸಂಗ್ರಹಿಸಿದ್ದೆವು. ಈ ಬಾರಿ 25 ಕೆ.ಜಿ ಸಿಗುವುದೂ ಅನುಮಾನ. ಆರಂಭದಲ್ಲಿ ಮರಗಳ ತುಂಬ ಹೂ ಬಿಟ್ಟಾಗ ಒಳ್ಳೆಯ ಬೆಳೆ ಬರಬಹುದೆಂಬ ನಿರೀಕ್ಷೆಯಿತ್ತು. ಆದರೆ, ಇಬ್ಬನಿ ಹಾಗೂ ಮೋಡಕವಿದ ವಾತಾವರಣಕ್ಕೆ ಒಮ್ಮೆಲೇ ಎಲ್ಲ ಹೂ ಉದುರಿದ ಪರಿಣಾಮ ಬೆಳೆ ತೀವ್ರ ಕಡಿಮೆಯಾಗಿದೆ’ ಎನ್ನುತ್ತಾರೆ ಬೆಳೆಗಾರ ಕಾನಗೋಡಿನ ರಮೇಶ ಹೆಗಡೆ.

*
ರೈತರು ಸರಿಯಾಗಿ ಒಣಗಿಸಿ, ಗುಣಮಟ್ಟದ ಬೀಜ ತಂದು ಕೊಟ್ಟರೆ ಕದಂಬ ಮಾರ್ಕೆಟಿಂಗ್‌ ಉತ್ತಮ ದರದಲ್ಲಿ ಖರೀದಿಸುತ್ತದೆ
–ವಿಶ್ವೇಶ್ವರ ಭಟ್ಟ, ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ

Post Comments (+)