ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜಕ್ಕೆ ಬೆಲೆ ಏರಿಕೆ ಬಿಸಿ

Last Updated 18 ಜುಲೈ 2019, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಸಿದ್ಧಪಡಿಸುವ ರಾಷ್ಟ್ರಧ್ವಜಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಜತೆಗೆ ಈ ಬಾರಿ ಧ್ವಜಗಳ ಬೆಲೆಯೂ ಏರಿಕೆಯಾಗಿದೆ.

ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್‌ 15) ಸನಿಹದಲ್ಲಿ ಇಲ್ಲಿ ಚಟುವಟಿಕೆಗಳು ಹೆಚ್ಚು. ಉತ್ಪಾದನಾ ವೆಚ್ಚ ಜಾಸ್ತಿಯಾಗಿರುವ ಕಾರಣ ಈ ಬಾರಿ ಶೇ 20ರಿಂದ 25ರಷ್ಟು ಹೆಚ್ಚಿನ ಬೆಲೆಗೆ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ.

ನೂಲು ಸಿದ್ಧಪಡಿಸುವವರಿಗೆ ಒಂದು ಲಡಿಗೆಗೆ ಈ ಹಿಂದೆ ₹5.50 ನೀಡಲಾಗುತ್ತಿತ್ತು. ಈಗ ಅದನ್ನು ₹ 7.50ಕ್ಕೆ ಹೆಚ್ಚಿಸಲಾಗಿದೆ. ಬಟ್ಟೆ ನೇಯ್ಗೆ ಮಾಡುವವರಿಗೆ ಪ್ರತಿ ಮೀಟರ್‌ಗೆ ಶೇ 25ರಷ್ಟು ವೇತನ ಹೆಚ್ಚಿಸಲಾಗಿದೆ. ಹೀಗೆ ಖರ್ಚು ಹೆಚ್ಚಾಗುತ್ತಿರುವುದರಿಂದ ರಾಷ್ಟ್ರಧ್ವಜಗಳ ಬೆಲೆಯಲ್ಲಿ ಜಾಸ್ತಿಯಾಗಿದೆ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ.

ಸಂಘವು, 2002ರಲ್ಲಿ ರಾಷ್ಟ್ರಧ್ವಜ ಸಿದ್ಧಪಡಿಸುವ ಕಾರ್ಯವನ್ನು ಆರಂಭಿಸಿತು. 2005ರಲ್ಲಿ ಭಾರತೀಯ ಮಾನಕ (ಬಿಐಎಸ್‌) ಮಾನ್ಯತೆ ಪಡೆದಿದೆ. ಈ ಮಾನ್ಯತೆ ಪಡೆದ ಏಕೈಕ ಸಂಸ್ಥೆ ಇದು. ಒಂಬತ್ತು ಅಳತೆಗಳಲ್ಲಿ ರಾಷ್ಟ್ರಧ್ವಜ ಸಿದ್ಧಪಡಿಸಲಾಗುತ್ತಿದ್ದು, ₹210 ರಿಂದ ₹24,000 ವರೆಗೆ ದರ ನಿಗದಿ ಮಾಡಲಾಗಿದೆ.

ಉತ್ತರ ಪ್ರದೇಶ, ಪಂಜಾಬ್‌, ಆಂಧ್ರಪ್ರದೇಶ, ಜಾರ್ಖಂಡ್, ಬಿಹಾರ, ತಮಿಳುನಾಡು ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ರಾಷ್ಟ್ರಧ್ವಜಗಳಿಗೆ ಬೇಡಿಕೆ ಬಂದಿದೆ. ಭಾರತೀಯ ಸೇನೆ, ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿಯೂ ಬೆಂಗೇರಿಯಲ್ಲಿ ತಯಾರಿಸಿದ ರಾಷ್ಟ್ರಧ್ವಜವೇ ಹಾರಾಡುತ್ತದೆ.

‘ಕಳೆದ ವರ್ಷ, ₹2.11 ಕೋಟಿ ಮೊತ್ತದ 25,814 ರಾಷ್ಟ್ರಧ್ವಜಗಳ ಮಾರಾಟವಾಗಿತ್ತು. ಈ ವರ್ಷ ಜುಲೈ 12ರವರೆಗೆ ₹51 ಲಕ್ಷ ಮೊತ್ತದ ಧ್ವಜಗಳನ್ನು ಮಾರಾಟ ಮಾಡಿದ್ದು, ₹3 ಕೋಟಿ ವಹಿವಾಟಿನ ಗುರಿ ಹೊಂದಲಾಗಿದೆ’ ಎನ್ನುತ್ತಾರೆ ಮಠಪತಿ.

ತಯಾರಿಕೆ ಹೇಗೆ?

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ, ಗದ್ದನಕೇರಿ, ಜಾಲಿಹಾಳ ಗ್ರಾಮಗಳಲ್ಲಿ ಧ್ವಜದ ಬಟ್ಟೆ ಸಿದ್ಧಪಡಿಸಲಾಗುತ್ತದೆ. ನಂತರ ಆ ಬಟ್ಟೆಗೆ ಬೆಂಗೇರಿಯಲ್ಲಿ ಕೇಸರಿ, ಬಿಳಿ, ಹಸಿರು ಹಾಗೂ ಅಶೋಕ ಚಕ್ರದ ಬಣ್ಣ ಹಾಕಲಾಗುತ್ತದೆ. ವಿವಿಧ ಆಕಾರದಲ್ಲಿ ಸಿದ್ಧಪಡಿಸಿದ ನಂತರ 140 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಒಣಗಿಸಿ, ಇಸ್ತ್ರಿ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT