ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಡಲಗಾ ಕೈದಿಗಳಿಂದ ಭತ್ತದ ಬೇಸಾಯ

ಮನ ಪರಿವರ್ತನೆಗಾಗಿ ಕೃಷಿ ಚಟುವಟಿಕೆ
Last Updated 7 ಅಕ್ಟೋಬರ್ 2018, 20:12 IST
ಅಕ್ಷರ ಗಾತ್ರ

ಬೆಳಗಾವಿ: ಕೈದಿಗಳು ಹಾಡುವುದು, ಕವಿತೆ ರಚಿಸುವುದು, ಅಭಿನಯಿಸುವುದನ್ನು ಕೇಳಿರಬಹುದು; ನೋಡಿರಲೂಬಹುದು. ಆದರೆ, ಕೃಷಿ ಮಾಡುವುದನ್ನು ನೋಡಿದ್ದೀರಾ? ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದ ಆರು ಮಂದಿ ಕೈದಿಗಳಿಗೆ ಭತ್ತದ ಬೇಸಾಯದ ಅವಕಾಶವನ್ನು ಅಧಿಕಾರಿಗಳು ಕಲ್ಪಿಸಿದ್ದಾರೆ.

ಕೈದಿಗಳ ಮನಪರಿವರ್ತನೆಗಾಗಿ ಹಲವು ಚಟುವಟಿಕೆಗಳನ್ನು ಕಾರಾಗೃಹದ ಅಧಿಕಾರಿಗಳು ಕೈಗೊಳ್ಳುವುದು ಸಾಮಾನ್ಯ. ಇಲ್ಲಿ ಕೃಷಿ ಚಟುವಟಿಕೆಗಳಲ್ಲಿ ಜೈಲು ಹಕ್ಕಿಗಳನ್ನು ತೊಡಗಿಸುವ ಮೂಲಕ, ಅವರ ಮನಪರಿವರ್ತನೆಗೆ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ.

‘ಕಾರಾಗೃಹದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ, ಇಲಾಖೆಗೆ ಸೇರಿದ ಆರು ಎಕರೆ ಪ್ರದೇಶದಲ್ಲಿ ಭತ್ತವನ್ನು ಕೈದಿಗಳಿಂದಲೇ ಬೆಳೆಸಲಾಗುತ್ತಿದೆ. ಭೂಮಿ ಹದ ಮಾಡುವುದರಿಂದ ಹಿಡಿದು ಎಲ್ಲ ಕೆಲಸಗಳನ್ನೂ ಇವರೇ ಮಾಡಿದ್ದಾರೆ. ಕೈದಿಗಳು ನಾಲ್ಕು ಗೋಡೆಗಳ ಮಧ್ಯೆ ಇದ್ದಾಗ ಹೇಗಿರುತ್ತಾರೆ? ಹೊರಗಡೆ ಇದ್ದಾಗ ಅವರ ನಡವಳಿಕೆ ಹೇಗಿರುತ್ತದೆ ಎನ್ನುವುದನ್ನು ಪರೀಕ್ಷಿಸುವ ಕಾರ್ಯವನ್ನೂ ಈ ಮೂಲಕ ಮಾಡಲಾಗುತ್ತಿದೆ’ ಎಂದು ಕಾರಾಗೃಹದ ಸೂಪರಿಂಟೆಂಡೆಂಟ್ ಟಿ.ಪಿ.ಶೇಷ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಿಕ್ಷೆಯ ಕೊನೆಯ ಹಂತದಲ್ಲಿರುವ ಕೈದಿಗಳನ್ನು ಆಯ್ಕೆ ಮಾಡಿ ನಿಯೋಜಿಸಿದ್ದೇವೆ. ಕಾರಾಗೃಹದಲ್ಲಿ ಗರಿಷ್ಠ ಭದ್ರತೆಯ ವಾತಾವರಣದಲ್ಲಿ ಇರುವ ಅವರಿಗೆ ಗದ್ದೆಯಲ್ಲಿ ಕೆಲಸ ಮಾಡುವಾಗ ಕನಿಷ್ಠ ಭದ್ರತೆ ನಿಯೋಜಿಸಲಾಗುತ್ತದೆ. ಇಬ್ಬರು ಸಿಬ್ಬಂದಿ ಮಾತ್ರ ಅವರ ಮೇಲೆ ನಿಗಾ ವಹಿಸುತ್ತಾರೆ. ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿದೆಯೇ ಎನ್ನುವುದನ್ನು ಗಮನಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಕೆಲಸ ಮಾಡಿದ ದಿನದಂದು ಅವರಿಗೆ ತಲಾ ₹ 125 ಕೂಲಿ ನೀಡಲಾಗುವುದು. ಹೊರಗಿದ್ದಾಗಇವರಾರೂ ತಪ್ಪಿಸಿಕೊಳ್ಳುವ ಯತ್ನ ಮಾಡಿಲ್ಲ .ಇಲ್ಲಿನ ಭತ್ತವನ್ನು ಕೈದಿಗಳ ಊಟಕ್ಕಾಗಿಯೇ ಬಳಸಲಾಗುವುದು’ ಎಂದರು.

ಕೈದಿಗಳಿಗೆ ಕೂಲಿ:‘ಕೆಲಸ ಮಾಡಿದ ದಿನದಂದು ಅವರಿಗೆ ತಲಾ ₹ 125 ಕೂಲಿ ನೀಡಲಾಗುವುದು. ಬಿಡುಗಡೆಯಾದಾಗ ಈ ಹಣವನ್ನು ಅವರಿಗೆ ಕೊಡಲಾಗುವುದು. ಇಲ್ಲಿ ಅವರು ತೋರುವ ನಡವಳಿಕೆಯು, ಬಿಡುಗಡೆ ಸಂದರ್ಭದಲ್ಲಿ ಅವರ ನೆರವಿಗೆ ಬರಲಿದೆ. ಹೆಚ್ಚಿನ ಮಾಫಿಯೂ ಸಿಗುತ್ತದೆ. ಭದ್ರತೆಯ ಕಾರಣದಿಂದ ಕೈದಿಗಳ ಹೆಸರು ಬಹಿರಂಗಪಡಿಸಲು ಬಯಸುವುದಿಲ್ಲ. ಆದರೆ, ಇವರಾರೂ ಹೊರಗಿದ್ದಾಗ ತಪ್ಪಿಸಿಕೊಳ್ಳುವ ಯತ್ನ ಮಾಡಿಲ್ಲ’ ಎಂದು ಹೇಳಿದರು.

‘ಎಕರೆಗೆ ಸರಾಸರಿ 30 ಕ್ವಿಂಟಲ್‌ ಇಳುವರಿ ನಿರೀಕ್ಷೆ ಮಾಡುತ್ತಿದ್ದೇವೆ. ಭತ್ತವನ್ನು ಅಕ್ಕಿ ಮಾಡಿಸಿ ಅದನ್ನು ಕೈದಿಗಳ ಊಟಕ್ಕಾಗಿಯೇ ಬಳಸಲಾಗುವುದು. ಹೊರಗಡೆಗೆ ಮಾರುವುದಿಲ್ಲ. ಹುಲ್ಲನ್ನು ಹಸುಗಳ ಮೇವಿಗೆ ಇಟ್ಟುಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಅಧಿಕಾರಿಗಳು, ನಮ್ಮ ಮೇಲೆ ನಂಬಿಕೆ ಇಟ್ಟು ಹೊರಗೆ ಕೆಲಸ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದಾರೆ. ಇದರಿಂದ ಮನಸ್ಸಿಗೆ ರಿಲ್ಯಾಕ್ಸ್‌ ಆಗುತ್ತಿದೆ. ಅವರ ನಂಬಿಕೆ ಉಳಿಸಿಕೊಳ್ಳುತ್ತಿದ್ದೇವೆ. ಜೈಲಿನಿಂದ ಬಿಡುಗಡೆಯಾದ ನಂತರ ಸಮಾಜದಲ್ಲಿ ನಮ್ಮ ನಡವಳಿಕೆ ಹೇಗಿರಬೇಕು ಎಂಬ ಪಾಠವನ್ನು ಇದರಿಂದ ಕಲಿಯುತ್ತಿದ್ದೇವೆ’ ಎಂದು ಕೈದಿಗಳು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT