ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ ಸಂಚಾರವೂ ಸ್ಥಗಿತ

ಹೊರ ರಾಜ್ಯಗಳ ಪ್ರಯಾಣಿಕ ವಾಹನಗಳಿಗೆ ನಿಷೇಧ l ಮ್ಯಾಕ್ಸಿ ಕ್ಯಾಬ್ ಸಂಚಾರ ಇಲ್ಲ
Last Updated 22 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್–19 ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಬೆಂಬಲವಾಗಿ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲು ಬಸ್ ಮಾಲೀಕರು ನಿರ್ಧರಿಸಿದ್ದಾರೆ.

ಬೆಂಗಳೂರಿನಿಂದ ಶನಿವಾರ ರಾತ್ರಿ ಪ್ರಯಾಣಿಸಿದ್ದ ಖಾಸಗಿ ಬಸ್‌ಗಳು, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ಬೆಳಗಾವಿ ಸೇರಿ ಜಿಲ್ಲಾ ಕೇಂದ್ರಗಳಲ್ಲೇ ಉಳಿದಿವೆ ಎಂದು ಖಾಸಗಿ ಬಸ್‌ ಕಂಪನಿಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಭಾನುವಾರ ರಾತ್ರಿ ಬೆಂಗಳೂರು ಕಡೆಗೆ ಹೊರಡಬೇಕಿದ್ದ ಬಸ್‌ಗಳು ಸರ್ಕಾರದ ನಿರ್ದೇಶನ ಬಂದ ಕಾರಣ ಕಾರ್ಯಾಚರಣೆ ಆರಂಭಿಸಿಲ್ಲ. ದುರ್ಗಾಂಬಾ, ಸುಗಮ, ವಿಆರ್‌ಎಲ್, ಎಸ್‌ಆರ್‌ಎಸ್‌, ನ್ಯಾಷನಲ್ ರೀತಿಯ ದೊಡ್ಡ ಟ್ರಾವೆಲ್ಸ್‌ಗಳ ಬಸ್‌ಗಳೇ ಕಾರ್ಯಾಚರಣೆ ನಿಲ್ಲಿಸಿವೆ. ಹೀಗಾಗಿ ಸೋಮವಾರ ಬಹುತೇಕ ಬಸ್ ಸಂಚಾರ ಇರುವುದಿಲ್ಲ.

‘ಸೋಮವಾರ ರಾತ್ರಿ ಬೆಂಗಳೂರು ಕಡೆಯಿಂದ ಶೇ 99ರಷ್ಟು ಬಸ್‌ಗಳ ಸಂಚಾರ ಇರುವುದಿಲ್ಲ. ಸೋಮವಾರದ ಸರ್ಕಾರದ ನಿರ್ಧಾರ ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಕರ್ನಾಟಕ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ ತಿಳಿಸಿದರು.

‘ಪ್ರವಾಸಿ ಟ್ಯಾಕ್ಸಿ ಸಂಚಾರ ಸೋಮವಾರವೂ ಸ್ಥಗಿತವಾಗಲಿದೆ. ಕಳೆದ 15 ದಿನಗಳಿಂದ ಬಹುತೇಕ ಪ್ರವಾಸಿ ಟ್ಯಾಕ್ಸಿಗಳ ಸಂಚಾರ ಸ್ಥಗಿತಗೊಂಡಿದೆ. ಕೋವಿಡ್ –19 ಹಿಮ್ಮೆಟ್ಟಿಸಲು ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಕೈಜೋಡಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಟ್ರಾವಲ್ ಆಪರೇಟರ್ ಸಂಘ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಹೇಳಿದರು.

‘ಐ.ಟಿ ಉದ್ಯೋಗಿಗಳು ಮನೆಯಲ್ಲೇ ಕೆಲಸ ಮಾಡಲು ಸೂಚಿಸಿರುವ ಕಾರಣ ಮ್ಯಾಕ್ಸಿಕ್ಯಾಬ್‌ಗಳ ಸಂಚಾರ 15 ದಿನಗಳಿಂದ ವಿರಳವಾಗಿದೆ. ಸರ್ಕಾರದ ನಿರ್ದೇಶನದಂತೆ ಸೋಮವಾರ ಮ್ಯಾಕ್ಸಿ ಕ್ಯಾಬ್ ಸಂಚಾರ ಇರುವುದಿಲ್ಲ’ ಎಂದು ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘದ ಅಧ್ಯಕ್ಷ ಭೈರವ ಸಿದ್ದರಾಮಯ್ಯ ತಿಳಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT