ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಪ್ರಧಾನಿ ಆಗಬೇಕಿತ್ತು; ಬಸನಗೌಡ ಪಾಟೀಲ ಯತ್ನಾಳ್‌

ಸಂಘ ಪರಿವಾರದಿಂದ ಭಯದ ವಾತಾವರಣ ಸೃಷ್ಟಿ: ಪ್ರಿಯಾಂಕ ಖರ್ಗೆ
Last Updated 6 ಮಾರ್ಚ್ 2020, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾತಂತ್ರ್ಯ ಬಂದ ದಿನದಿಂದಲೂಸಂಘ ಪರಿವಾರದ ವ್ಯಕ್ತಿಗಳು ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಹೇಳುತ್ತಾ ಬಂದಿದ್ದಾರೆ. ಈಗ ಇವರು ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ’ ಎಂದು ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಶುಕ್ರವಾರ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಸಂಘದ ಮುಖವಾಣಿ ‘ಆರ್ಗನೈಸರ್‌’ ಸಂವಿಧಾನವನ್ನು ಟೀಕಿಸಿತ್ತು. ದೇಶದ ಪ್ರಾಚೀನ ಕಟ್ಟಳೆ ಮನುಸ್ಮೃತಿಯನ್ನು ಅದರಲ್ಲಿ ಸೇರಿಸಬೇಕಿತ್ತು ಎಂದು ಸಂಪಾದಕೀಯ ಪ್ರತಿಪಾದಿಸಿತ್ತು ಎಂದರು.

‘ಗೋಳವಲಕರ್ ಅವರಿಂದ ಹಿಡಿದು ಮೋಹನ್‌ ಭಾಗವತ್‌ವರೆಗೆ ಸಂಘದ ಎಲ್ಲ ಪ್ರಮುಖರೂ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಸಂವಿಧಾನ ಮಾತ್ರವಲ್ಲ ಇವರು ತ್ರಿವರ್ಣ ಧ್ವಜವನ್ನೂ ಒಪ್ಪಿರಲಿಲ್ಲ’ ಎಂದರು.

‘ಈಗಂತೂ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ವಾಕ್‌ ಸ್ವಾತಂತ್ರ್ಯ ಇಲ್ಲ, ಸ್ವತಂತ್ರ ಅಭಿಪ್ರಾಯ ವ್ಯಕ್ತಪಡಿಸಿದರೆ ದೇಶದ್ರೋಹಿ ಎಂಬ ಪಟ್ಟ ಕಟ್ಟಲಾಗುತ್ತಿದೆ. ಸಂಘ ತನ್ನ ಸಿದ್ಧಾಂತವನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ನಡೆಸಿದೆ’ ಎಂದು ಪ್ರಿಯಾಂಕ್‌ ದೂರಿದರು.

‘ದೇಶದಲ್ಲಿ ಭಿನ್ನ ಅಭಿಪಾಯ ಹೊಂದುವುದು ತಪ್ಪೆ? ಇದು ಸಂವಿಧಾನ ವಿರೋಧಿ ಧೋರಣೆ ಅಲ್ಲವೆ. ಭಿನ್ನ ಅಭಿಪ್ರಾಯ ಹೊಂದಿರುವವರನ್ನು ದೇಶ ದ್ರೋಹಿಗಳು ಎಂದು ಪಟ್ಟ ಕಟ್ಟಲಾಗುತ್ತಿದೆ. ಅವರ ವಿರುದ್ಧ ದೇಶ ದ್ರೋಹದ ಮೊಕದ್ದಮೆ ಹೂಡಲಾಗುತ್ತಿದೆ’ ಎಂದು ಹೇಳಿದರು.

‘ಪೌರತ್ವ ಕಾಯ್ದೆಯನ್ನು ಬಲವಾಗಿ ವಿರೋಧಿಸುತ್ತೇನೆ. ಇದು ಅಲ್ಪಸಂಖ್ಯಾತರಲ್ಲಿ ಆತಂಕ ಹುಟ್ಟಿಸಿದೆ’ ಎಂದರು.

ಪೌರತ್ವ ಕಾಯ್ದೆ ಬಗ್ಗೆ ಗೊಂದಲ ಸೃಷ್ಟಿ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಕೆಲವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಂವಿಧಾನದ ಅನ್ವಯವೇ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ’ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಸಮರ್ಥಿಸಿಕೊಂಡರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಪ್ರಧಾನಿಯಾಗಬೇಕಿತ್ತು’ ಎಂದೂ ಹೇಳಿದರು.

‘ಭಾರತದ ವಿಭಜನೆಗೆ ಅಂಬೇಡ್ಕರ್ ವಿರೋಧ ವ್ಯಕ್ತಪಡಿಸಿದ್ದರು. ಅವರು ಮುಸ್ಲಿಂ ಧರ್ಮ ಸ್ವೀಕರಿಸಲಿಲ್ಲ. ಬೌದ್ಧ ಧರ್ಮ ಸ್ವೀಕರಿಸಿದರು. ಇದರಿಂದಾಗಿ, ಹಿಂದೂಗಳು ದೇಶದಲ್ಲಿ ನೆಮ್ಮದಿಯಿಂದ ಇದ್ದಾರೆ. ಸಾವರ್ಕರ್‌ ಅವರ ಕೆಲವು ವಿಚಾರಗಳನ್ನು ಅಂಬೇಡ್ಕರ್‌ ಒಪ್ಪಿಕೊಂಡಿದ್ದರು’ ಎಂದರು.

ಕೊಳ್ಳೆಗಾಲದ ಎನ್‌.ಮಹೇಶ್‌, ‘164 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿದೆ. 124 ಮಂದಿಯನ್ನು ಕೊಲೆ ಮಾಡಲಾಗಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ 4ರಷ್ಟು ಇದೆ. ಆರೋಪಿಗಳು ಸುಲಭದಲ್ಲಿ ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದರು.

ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ, ‘ಎತ್ತಿನಹೊಳೆಯ ಯೋಜನೆಯ ಮೂಲ ಯೋಜನಾ ಮೊತ್ತ ₹12,500 ಕೋಟಿ ಆಗಿತ್ತು. ಈಗ ವಿಪರೀತವಾಗಿ ಹೆಚ್ಚಾಗಿದೆ. ಈ ಶತಮಾನದಲ್ಲಿ ಕೋಲಾರ ಜಿಲ್ಲೆಗೆ ನೀರು ಹರಿಯುತ್ತದೆಯೇ ಎಂಬ ಅನುಮಾನ ಮೂಡಿದೆ’ ಎಂದರು.

‘ಚುನಾವಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ. ಆದಾಯ ತೆರಿಗೆ ಇಲಾಖೆಯ ಮೇಲೂ ನಿಯಂತ್ರಣ ಹೇರಬೇಕು’ ಎಂದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು 21 ತಿಂಗಳುಗಳು ಕಳೆದಿವೆ. ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರು. 21 ತಿಂಗಳು ಕಳೆದರೂ ಕೋರ್ಟ್‌ ಆದೇಶ ಹೊರಡಿಸಿಲ್ಲ. ಇಂತಹ ವ್ಯವಸ್ಥೆ ಬೇಕಾ’ ಎಂದು ಪ್ರಶ್ನಿಸಿದರು.

ಪೇಚಿಗೆ ಸಿಲುಕಿದ ಯತ್ನಾಳ್
ಸಂವಿಧಾನದ ಕುರಿತು ಮಾತನಾಡುವಾಗ ಬಿಜೆಪಿ ಬಸನಗೌಡ ಪಾಟೀಲ ಯತ್ನಾಳ್‌ ಮಹಾಭಾರತ ಬರೆದದ್ದು ವಾಲ್ಮೀಕಿ, ವೇದ ರಚಿಸಿದ್ದು ವ್ಯಾಸ ಎಂದು ಹೇಳುವ ಮೂಲಕ ಪೇಚಿಗೆ ಸಿಲುಕಿದರು. ನಂತರ ಅವರು ತಮ್ಮ ತಪ್ಪನ್ನು ಸರಿ ಮಾಡಿಕೊಂಡರು. ಹಲವು ಸಂದರ್ಭಗಳಲ್ಲಿ ಹಿಂದುಗಳಿಗೆ ಅಸ್ಪೃಶ್ಯರೇ ನೆರವಾದರು. ರಾಮಾಯಣ ಮತ್ತು ಮಹಾಭಾರತವನ್ನು ವಾಲ್ಮೀಕಿ ಮತ್ತು ವ್ಯಾಸರು ಬರೆದರು. ‘ಸಂವಿಧಾನ ಬೇಕಾದಾಗ ಅಸ್ಪಶ್ಯನಾದ ನನ್ನನ್ನು ಕರೆದರು ಎಂಬುದಾಗಿ ಅಂಬೇಡ್ಕರ್ ಅವರು ಒಂದೆಡೆ ಹೇಳಿದ್ದಾರೆ’ ಎಂದು ಯತ್ನಾಳ್‌ ತಿಳಿಸಿದರು.

**

ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್‌ ವೇದಿಕೆ ಆಗಿತ್ತು. ರಾಜಕೀಯ ಪಕ್ಷ ಆಗಿರಲಿಲ್ಲ. ಅದನ್ನು ವಿಸರ್ಜಿಸುವಂತೆ ಗಾಂಧಿ ಹೇಳಿದ್ದರು. ಬಳಿಕ ಅದು ಕುಟುಂಬ ರಾಜಕಾರಣದ ಪಕ್ಷ ಆಯಿತು.
-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT