ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ ವಿಸ್ತರಣೆ ಬಳಿಕ ಸರ್ಕಾರಕ್ಕೆ ಸಮಸ್ಯೆ: ಸತೀಶ ಜಾರಕಿಹೊಳಿ

Last Updated 2 ಫೆಬ್ರುವರಿ 2020, 12:49 IST
ಅಕ್ಷರ ಗಾತ್ರ

ಬೆಳಗಾವಿ: ‘ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿ ಸರ್ಕಾರಕ್ಕೆ ಖಂಡಿತವಾಗಿಯೂ ಸಮಸ್ಯೆಯಾಗುತ್ತದೆ’ ಎಂದು ಯಮಕನಮರಡಿ ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಭವಿಷ್ಯ ನುಡಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವಿಸ್ತರಣೆ ಆದಷ್ಟು ಬೇಗ ನಡೆಯಬೇಕು ಎನ್ನುವುದು ನಮ್ಮ (ಕಾಂಗ್ರೆಸ್‌ನವರ) ಬಯಕೆಯೂ ಆಗಿದೆ’ ಎಂದರು.

‘ಆಪರೇಷನ್‌ ಕಮಲದ ಮೂಲಕ ಬಂದವರನ್ನು ಹತೋಟಿಯಲ್ಲಿ ಇಡುವುದಕ್ಕೆ ಆಗುವುದಿಲ್ಲ. ಅವರ ಮರ್ಜಿಯಲ್ಲಿ ಇರುವುದರಿಂದಾಗಿ ಅವರು ಹೇಳಿದಂತೆ ಕೇಳಬೇಕಾಗುತ್ತದೆ. ಹೀಗಾಗಿ, ಸಂಪುಟದಲ್ಲಿ ಜಿಲ್ಲಾವಾರು ಪ್ರಾತಿನಿಧ್ಯ, ಜಾತಿ ಲೆಕ್ಕಾಚಾರ ಮಾಡುವುದಕ್ಕೆ ಆಗುವುದಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಜೆಪಿಯವರು ಇದ್ದಾರೆ. ಆಪರೇಷನ್‌ ಕಮಲ ನಡೆದಾಗಲೇ ತಪ್ಪು ಸಂದೇಶ ಹೋಗಿದೆ. ಮೂಲ ಬಿಜೆಪಿಯವರನ್ನು ಅವರು ಕಡೆಗಣಿಸಲೇಬೇಕಾಗುತ್ತದೆ. ಆಗ ಹಲವು ಸಮಸ್ಯೆಗಳು ಉಂಟಾಗುತ್ತವೆ’ ಎಂದರು.

‘ಜಲಸಂಪನ್ಮೂಲ ಖಾತೆಯೇ ಬೇಕು ಎನ್ನುವುದು ರಮೇಶ ಜಾರಕಿಹೊಳಿ ಯೋಜನೆ. ಡಿ.ಕೆ. ಶಿವಕುಮಾರ್‌ ಆ ಖಾತೆ ನಿರ್ವಹಿಸಿದ್ದರು. ಹೀಗಾಗಿ, ಅದೇ ಬೇಕೆಂದು ಪಟ್ಟು ಹಿಡಿಯುತ್ತಾರೆ. ಹಿಂದಿನಿಂದಲೂ ಅದರ ಮೇಲೆ ಕಣ್ಣಿಟ್ಟಿದ್ದಾರೆ. ಅಭಿವೃದ್ಧಿ ಮಾಡುವುದಕ್ಕಾಗಿ ಅವರು ಆ ಬಯಕೆ ಹೊಂದಿಲ್ಲ; ಸ್ವಹಿತಾಸಕ್ತಿಗಾಗಿ ಬೇಡಿಕೆ ಇಟ್ಟಿದ್ದಾರೆ’ ಎಂದು ಟೀಕಿಸಿದರು.

‘ರಮೇಶ ಹಿಂದಿನಿಂದಲೂ ಟ್ರಬಲ್‌ ಮೇಕರ್. ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಗೆ ಸಹಿಸಿಕೊಳ್ಳುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ 50 ಮಂದಿ ನಮ್ಮೊಂದಿಗೆ ಇದ್ದಾರೆ ಎಂದು ರಮೇಶ ಹೇಳಿದ್ದಾರಲ್ಲವೇ? ಮುಖ್ಯಮಂತ್ರಿ ಮುಂದೆ ದಿನಕ್ಕೊಂದು ಹೊಸ ಸಮಸ್ಯೆ ತಂದಿಡುತ್ತಾರೆ. ಅದನ್ನು ಯಾರೂ ಪರಿಹಾರ ಮಾಡುವುದಕ್ಕೆ ಆಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

‘ರಮೇಶ, ಮಂತ್ರಿಯಾದ ಮೇಲೆ ಬಚ್ಚಿಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ನಿರಂತರವಾಗಿ ಅಧಿಕಾರಿಗಳ ಸಭೆ ನಡೆಸಬೇಕಾಗುತ್ತದೆ. ಅಭಿವೃದ್ಧಿ ವಿಷಯದಲ್ಲಿ ಓಡಾಡಬೇಕಾಗುತ್ತದೆ. ಇಡೀ ಇಲಾಖೆಯ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಮಾಧ್ಯಮ, ಕಾನೂನು, ಸಾಮಾಜಿಕ ಮಾಧ್ಯಮವಿದೆ. ಹೀಗಾಗಿ, ಅವರು ಕಣ್ತಪ್ಪಿಸಿ ಓಡಾಡಲು ಆಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT