ಸೋಮವಾರ, ಜೂನ್ 21, 2021
27 °C
ಸಂಜೆ ಸಿದ್ದರಾಮಯ್ಯ ಮತ್ತು ಜಾರಕಿಹೊಳಿ ಸಹೋದರರ ಮಾತುಕತೆ

ಕಾಂಗ್ರೆಸ್‌ ಬಿಕ್ಕಟ್ಟು ಇಂದೇ ಇತ್ಯರ್ಥ ಸಾಧ್ಯತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾರಕಿಹೊಳಿ ಸಹೋದರರ ಮುನಿಸನ್ನು ತಣ್ಣಗಾಗಿಸುವ ಜವಾಬ್ದಾರಿ ಹೊತ್ತಿರುವ ಜೆಡಿಎಸ್‌– ಕಾಂಗ್ರೆಸ್‌ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭಾನುವಾರ ಸಂಜೆಯೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿರುವ ಸತೀಶ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಜತೆ ಮಾತುಕತೆ ನಡೆಸಲಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವುದು ಬೇಡ, ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ವಾಗ್ದಾನವನ್ನು ಸಿದ್ದರಾಮಯ್ಯ ಅವರು ಜಾರಕಿಹೊಳಿ ಸಹೋದರರಿಗೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾರಕಿಹೊಳಿ ಸಹೋದರರಿಂದಾಗಿ ಉದ್ಭವಿಸಿದ್ದ ಬಿಕ್ಕಟ್ಟನ್ನು ಶಮನಗೊಳಿಸಲು ಶನಿವಾರ ನಗರಕ್ಕೆ ಬಂದಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಗೊಂದಲ ನಿವಾರಣೆಯ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ಒಪ್ಪಿಸಿ ಭಾನುವಾರ ಮಧ್ಯಾಹ್ನವೇ ಕೇರಳಕ್ಕೆ ತೆರಳಿದರು.

ಇದಕ್ಕೆ ಮುನ್ನ ಕುಮಾರಕೃಪಾದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವೇಣುಗೋಪಾಲ್, ಜಾರಕಿಹೊಳಿ ಸಹೋದರರ ಅಸಮಾಧಾನ ಒಂದು ಸಮಸ್ಯೆಯೇ ಅಲ್ಲ. ಇಂತಹ ಸಣ್ಣಪುಟ್ಟ ಗೊಂದಲಗಳನ್ನು ರಾಜ್ಯದ ನಾಯಕರೇ ಬಗೆಹರಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಂಡು ಮಾತನಾಡಿಸಲು ಬಂದಿದ್ದೇನೆ ಎಂದರು. 

ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರ ಗೇಮ್‌ ಪ್ಲಾನ್‌ ಮಾಡಿದ್ದರು. ಅವರ ಆಟ ನಡೆಯುವುದಿಲ್ಲ. ಕೇಂದ್ರ ಏಜೆನ್ಸಿಗಳ ಮೂಲಕ ಬೆದರಿಸುವ ಮತ್ತು ಹಣದ ಆಮಿಷ ಒಡ್ಡಿ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಕಪ್ಪು ಹಣವನ್ನೂ ಬಳಕೆ ಮಾಡುತ್ತಿದ್ದಾರೆ. ಆದರೆ, ಪಕ್ಷದ ಶಾಸಕರ ಮೇಲೆ ನಂಬಿಕೆ ಇದೆ. ಸಮ್ಮಿಶ್ರ ಸರ್ಕಾರ ಸಂಪೂರ್ಣ ಸುರಕ್ಷಿತವಾಗಿದೆ ಎಂದರು.

ಪರಮೇಶ್ವರ್‌ಗೆ ಬುಲಾವ್‌

ಸಿದ್ದರಾಮಯ್ಯ ಅವರ ಮನೆಯಲ್ಲಿ ಸಭೆ ನಡೆಸುವ ಸಂದರ್ಭದಲ್ಲಿ ಕಾಣಿಸಿಕೊಳ್ಳದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಕರೆ ಮಾಡಿದ ವೇಣುಗೋಪಾಲ ಅವರು ತಕ್ಷಣವೇ ಸಭೆಗೆ ಬರಬೇಕು ಎಂದು ಸೂಚಿಸಿದರು.

ಸರ್ಕಾರ ರಚನೆ ಆದ ದಿನದಿಂದಲೂ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಚಿತಾವಣೆಯಿಂದಲೇ ಗೊಂದಲಗಳು ಸೃಷ್ಟಿ ಆಗಿವೆ ಎಂಬುದು ಪರಮೇಶ್ವರ ಅವರ ಅಸಮಾಧಾನ. ಈ ಕಾರಣದಿಂದ ಅವರು ಸಭೆಯಿಂದ ದೂರ ಉಳಿದಿದ್ದರು ಎನ್ನಲಾಗಿದೆ.

ಜಾರಕಿಹೊಳಿ ಸಹೋದರರ ಅಸಮಾಧಾನದಿಂದ ಉದ್ಭವಿಸಿರುವ ಸಮಸ್ಯೆ ಬಗ್ಗೆ ವೇಣುಗೋಪಾಲ್‌ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದರು. ತಕ್ಷಣವೇ ಜಾರಕಿಹೊಳಿ ಸಹೋದರರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಅಲ್ಲದೆ, ಬಿಜೆಪಿಯವರು ಸಂಪರ್ಕಿಸಿದರು ಎನ್ನಲಾದ ಶಾಸಕರ ಜತೆಯೂ ಮಾತುಕತೆ ನಡೆಸಿ. ಸಾಧ್ಯವಾದರೆ, ತಕ್ಷಣವೇ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಬೇಕು ಎಂದೂ ವೇಣುಗೋಪಾಲ್‌ ತಿಳಿಸಿದರು.

ಬಿಕ್ಕಟ್ಟಿಗೂ ಸಿದ್ದರಾಮಯ್ಯಗೂ ಸಂಬಂಧ ಇಲ್ಲ: ಈಗ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿಗೂ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ಅನಾವಶ್ಯಕವಾಗಿ ಅವರ ಹೆಸರನ್ನು ಎಳೆದು ತರಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌  ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಸಿದ್ದರಾಮಯ್ಯ ಅವರು ಸರ್ಕಾರವನ್ನು ಅಸ್ಥಿರಗೊಳಿಸುತ್ತಿದ್ದಾರೆ ಎಂಬುದು ಸುಳ್ಳು. ಇಂತಹ ಅಪ ಪ್ರಚಾರವನ್ನು ಒಪ್ಪಲು ಸಾಧ್ಯವಿಲ್ಲ. ಬಿಜೆಪಿಯ ಯಡಿಯೂರಪ್ಪ ಮತ್ತು ಟೀಂ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು