ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಹೊಸ ಸಾಲ ವಿತರಣೆಗೆ ಕ್ರಮ: ಸಚಿವ ಎಸ್.ಟಿ.ಸೋಮಶೇಖರ್

Last Updated 18 ಏಪ್ರಿಲ್ 2020, 10:29 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ರಾಜ್ಯದ ವಿವಿಧೆಡೆ ಪೂರ್ವ ಮುಂಗಾರು ಬಿತ್ತನೆ ಚಟುವಟಿಕೆಗಳು ಆರಂಭಿಕ ಹಂತದಲ್ಲಿದೆ. ಅದಕ್ಕಾಗಿ ಏಪ್ರಿಲ್‌ನಿಂದಲೇ ನಿಯಮಾನುಸಾರ ಹೊಸ ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ಹೇಳಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹತ್ತಿ ಮಾರುಕಟ್ಟೆ, ಕಡಲೆ ಖರೀದಿ ಕೇಂದ್ರ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ಭೇಟಿ ನೀಡಿದ ವೇಳೆ ಪರಿಶೀಲನೆ ನಡೆಸಿ, ಅವರು ಮಾತನಾಡಿದರು.

‘ಸಹಕಾರ ಸಂಸ್ಥೆಗಳ ಮೂಲಕ ಹಿಂದಿನ ವರ್ಷ ₹ 13 ಸಾವಿರ ಕೋಟಿ ಸಾಲ ನೀಡಲಾಗಿದೆ. ಈ ಬಾರಿಯು ಅಷ್ಟೇ ಪ್ರಮಾಣದ ಸಾಲ ನೀಡಲು ತೀರ್ಮಾನಿಸಲಾಗಿದೆ. ಲಾಕ್‌ಡೌನ್ ಇರುವ ಕಾರಣಕ್ಕೆ ಹಳೆ ಸಾಲ ಮರುಪಾವತಿಸಲು ಜೂನ್‌ವರೆಗೆ ಕಾಲಾವಕಾಶ ನೀಡಲಾಗಿದೆ. ಅದಕ್ಕೂ ಮುಂಚಿತವಾಗಿ ಯಾರು ಮೊದಲು ಸಾಲ ಪಾವತಿಸುತ್ತಾರೋ ಅವರಿಗೆ ಸಾಲದ ನವೀಕರಣ, ಹೊಸ ಸಾಲ ತ್ವರಿತವಾಗಿ ನೀಡಲಾಗುವುದು’ ಎಂದರು.

‘ರೈತರು ತಮ್ಮ ಬೆಳೆಯನ್ನು ಎಪಿಎಂಸಿ ಸೇರಿ ಇತರೆ ಮಾರುಕಟ್ಟೆಗೆ ಮಾರಾಟ ಮಾಡಲು ನಿರಾತಂಕವಾಗಿ ತೆಗೆದುಕೊಂಡು ಹೋಗಬಹುದು. ಯಾವುದೇ ಚೆಕ್‌ಪೋಸ್ಟ್‌ಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಪೊಲೀಸರಿಂದ ಅಡೆತಡೆಗಳಿಲ್ಲ. ಈ ಕುರಿತು ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ರೈತರು ಮಾರುಕಟ್ಟೆಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಲು ಮುಂದಾಗಿ. ಎಪಿಎಂಸಿ ಸಿಬ್ಬಂದಿ ಸ್ಯಾನಿಟೈಸರ್ ನೀಡಬೇಕು. ವ್ಯಾಪಾರ ವಹಿವಾಟು ವೇಳೆ ಎಲ್ಲರೂ ಅಂತರ ಕಾಯ್ದುಕೊಂಡು ಸಹಕಾರ ನೀಡಬೇಕು’ ಎಂದರು.

ಊಟೋಪಚಾರ ಕಲ್ಪಿಸಿ: ‘ಎಪಿಎಂಸಿಗೆ ಬರುವ ರೈತರು ಹಾಗೂ ಹಮಾಲರಿಗೆ ಉಪಹಾರ, ಊಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕ್ಯಾಂಟೀನ್ ತೆರೆದು ಅಲ್ಲಿಂದಲೇ ಪಾರ್ಸಲ್ ವ್ಯವಸ್ಥೆ ಕಲ್ಪಿಸಿ. ಒಂದು ವೇಳೆ ಕ್ಯಾಂಟೀನ್ ತೆರೆಯದಿದ್ದಲ್ಲಿ ಸಮಿತಿಯಿಂದ ತಿಂಡಿ, ಊಟ ವಿತರಿಸಿ’ ಎಂದು ಸೂಚನೆ ನೀಡಿದರು.

‘ಕಡಲೆ ಖರೀದಿ ಪ್ರಮಾಣ ಹೆಚ್ಚಿಸಿದರೆ ರೈತರಿಗೆ ಅನುಕೂಲವಾಗಲಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಬೇಕು’ ಎಂದು ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಟಿ. ರಘುಮೂರ್ತಿ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್, ‘ಸದ್ಯದ ಪರಿಸ್ಥಿತಿಯಲ್ಲಿ ಇದು ಖಂಡಿತ ಸಾಧ್ಯವಿಲ್ಲ’ ಎಂದರು.

ಜಿಲ್ಲೆಗೆ 3 ಕೋಲ್ಡ್ ಸ್ಟೋರೇಜ್ ನೀಡಿ:‘ಚಿತ್ರದುರ್ಗ ಎಪಿಎಂಸಿಗೆ 2 ಹಾಗೂ ಚಳ್ಳಕೆರೆಗೆ 1 ಕೋಲ್ಡ್ ಸ್ಟೋರೇಜ್ ಘಟಕ ಅಳವಡಿಕೆ ಮಾಡಬೇಕು’ ಎಂದು ಶಾಸಕರು ಸಚಿವರಲ್ಲಿ ಮನವಿ ಮಾಡಿದರು. ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಕೋಲ್ಡ್‌ ಸ್ಟೋರೇಜ್‌ ಘಟಕ ಅಳವಡಿಕೆ ಸಂಬಂಧ ಪ್ರಸ್ತಾವ ಕಳಿಸಿ, ಅದಕ್ಕೆ ಅನುಮತಿ ಕೊಡಿಸುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಸಹಕಾರ ಸಂಘದ ನಿರ್ದೇಶಕ ಎಸ್.ಆರ್. ಗಿರೀಶ್, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಟಿ.ಎ. ಮಹೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT