ಶುಕ್ರವಾರ, ನವೆಂಬರ್ 22, 2019
23 °C
ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆಗೆ ಮುನ್ನವೇ ಡಿಪಿಸಿ: ಸುಪ್ರೀಂ ತೀರ್ಪು ಉಲ್ಲಂಘನೆ ಆರೋಪ

88 ಅರಣ್ಯಾಧಿಕಾರಿಗಳಿಗೆ ಬಡ್ತಿ?

Published:
Updated:

ಬೆಂಗಳೂರು: ಬಡ್ತಿ ಮೀಸಲಾತಿ ಕಾಯ್ದೆ ಪ್ರಕಾರ ಅಂತಿಮ ಜ್ಯೇಷ್ಠತಾ ಪಟ್ಟಿ ಪ‍್ರಕಟಿಸುವ ಮುನ್ನವೇ, 88 ವಲಯ ಅರಣ್ಯಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್‌) ಬಡ್ತಿ ನೀಡಲು ಅರಣ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿದೆ.

ವಲಯ ಅರಣ್ಯಾಧಿಕಾರಿ ವೃಂದದಿಂದ 55 ಮಂದಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ವೃಂದಕ್ಕೆ ಬಡ್ತಿ ನೀಡಲು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ ನೇತೃತ್ವದಲ್ಲಿ ಇದೇ 13ರಂದು ಬೆಳಿಗ್ಗೆ 11.30ಕ್ಕೆ ಇಲಾಖಾ ಮುಂಬಡ್ತಿ ಸಮಿತಿ (ಡಿಪಿಸಿ) ಸಭೆ ನಿಗದಿಯಾಗಿದೆ. 33 ಮಂದಿಗೆ ಎಸಿಎಫ್‌ ವೃಂದದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವೃಂದಕ್ಕೆ ಬಡ್ತಿ ನೀಡಲು ಮಧ್ಯಾಹ್ನ 12ಕ್ಕೆ ಸಭೆ ನಡೆಯಲಿದೆ.

ಹಿಂಬಡ್ತಿಗೆ ಒಳಗಾಗಿದ್ದ ನೌಕರರಿಗೆ ಸೂಪರ್‌ ನ್ಯೂಮರರಿ ಹುದ್ದೆ ಸೃಷ್ಟಿಸಲು ಮುಂದಾಗಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ, ಇದಕ್ಕಾಗಿ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಮಸೂದೆ ಮಂಡಿಸಿತ್ತು. ಈ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದರು. ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಈ ವರ್ಷದ ಮೇ ತಿಂಗಳಲ್ಲಿ ಎತ್ತಿ ಹಿಡಿದಿತ್ತು. ಬಳಿಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ನೌಕರರನ್ನು ಹಿಂಬಡ್ತಿಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿತ್ತು.

‘ಕಾಯ್ದೆ ಪ್ರಕಾರ, ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ ನಂತರವೇ ನೇಮಕಾತಿ ಪ್ರಾಧಿಕಾರಗಳು ಮುಂಬಡ್ತಿ ಪ್ರಕ್ರಿಯೆ ಪ್ರಾರಂಭಿಸಬೇಕು. ಇದನ್ನು ಎಲ್ಲ ನೇಮಕಾತಿ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದನ್ನು ಪಾಲಿಸದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯು ಮೇ ತಿಂಗಳಲ್ಲಿ ನಿರ್ದೇಶನ ನೀಡಿತ್ತು.

‘ಉಪ ವಲಯ ಅರಣ್ಯಾಧಿಕಾರಿಗಳ ಜ್ಯೇಷ್ಠತಾ ಪಟ್ಟಿಯನ್ನು 13 ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಿಸಿಎಫ್‌) ಪರಿಷ್ಕರಿಸಬೇಕು. ಆ ಬಳಿಕ ವಲಯ ಅರಣ್ಯಾಧಿಕಾರಿಗಳು, ಎಸಿಎಫ್‌ಗಳು ಹಾಗೂ ಡಿಸಿಎಫ್‌ಗಳ ಜ್ಯೇಷ್ಠತಾ ಪಟ್ಟಿ ‍ಪರಿಷ್ಕರಣೆ ಆಗಬೇಕು. ಆದರೆ, ಇಲಾಖೆಯಲ್ಲಿ ತಾತ್ಕಾಲಿಕ ಹಾಗೂ ಅಂತಿಮ ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆಯೇ ಆಗಿಲ್ಲ.ಕೆಲವು ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡಲು ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಕ್ರಿಯೆ ಕಾನೂನುಬಾಹಿರ: ಆಕ್ಷೇಪ
‘ಜ್ಯೇಷ್ಠತೆಯನ್ನು ಅಂತಿಮಗೊಳಿಸದೆ ಇಲಾಖಾ ಪ್ರಾಧಿಕಾರಗಳು ಮುಂಬಡ್ತಿ ಪ್ರಕ್ರಿಯೆ ನಡೆಸುವಂತಿಲ್ಲ. ಅರಣ್ಯ ಇಲಾಖೆ ಮುಂಬಡ್ತಿ ಸಮಿತಿ ಸಭೆ ಕರೆದಿರುವುದು ಕಾನೂನುಬಾಹಿರ’ ಎಂದು ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಮನ್ವಯ ಸಮಿತಿ ಆಕ್ಷೇಪಿಸಿದೆ.

ಈ ಸಂಬಂಧ ಸಮಿತಿಯು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದೆ.‘ರದ್ದಾಗಿರುವ ಜ್ಯೇಷ್ಠತೆಯ ಪ್ರಕಾರ ಬಡ್ತಿ ನೀಡಲು ಇಲಾಖೆ ಮುಂದಾಗಿದೆ. ಈ ರೀತಿ ಬಡ್ತಿ ನೀಡಿದರೆ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ಸಮಿತಿಯ ಕಾನೂನು ಸಲಹೆಗಾರ ಡಿ.ಚಂದ್ರಶೇಖರಯ್ಯ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)