ಆಸ್ತಿ ಖರೀದಿದಾರರಿಗೆ ‘ಮೈತ್ರಿ’ ಹೊರೆ

7
ಮಾರ್ಗಸೂಚಿ ದರ ಶೇ 20ರಷ್ಟು ಹೆಚ್ಚಳಕ್ಕೆ ಸಿದ್ಧತೆ; ಸೆಪ್ಟೆಂಬರ್‌ನಿಂದ ಜಾರಿ?

ಆಸ್ತಿ ಖರೀದಿದಾರರಿಗೆ ‘ಮೈತ್ರಿ’ ಹೊರೆ

Published:
Updated:

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌, ವಿದ್ಯುತ್‌ ಹಾಗೂ ಮದ್ಯದ ದರ ಹೆಚ್ಚಿಸಿದ ಬೆನ್ನಲ್ಲೇ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ, ಸ್ಥಿರಾಸ್ತಿ ಮಾರ್ಗಸೂಚಿ ದರವನ್ನೂ ಪರಿಷ್ಕರಿಸಲು ನಿರ್ಧರಿಸಿದೆ. ಶೇ 5ರಿಂದ 20ರಷ್ಟು ದರ ಹೆಚ್ಚಳವಾಗಲಿದ್ದು, ಇದರಿಂದ ಆಸ್ತಿ ಖರೀದಿ ತುಟ್ಟಿಯಾಗಲಿದೆ.

ರಾಜ್ಯದಾದ್ಯಂತ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಕ್ರಿಯೆ ಆರಂಭಿಸಿದೆ. ಸೆಪ್ಟೆಂಬರ್‌ನಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿದೆ. ಸ್ಥಿರಾಸ್ತಿಯ ಹಾಲಿ ಮಾರ್ಗ­ಸೂಚಿ ದರ, ಮಾರುಕಟ್ಟೆ ದರ, ಸಂಪರ್ಕಕ್ಕೆ ಇರುವ ರಸ್ತೆ­ಗಳು, ಆಸ್ತಿ ಇರುವ ಪ್ರದೇಶ­ದ ವಾಣಿಜ್ಯ ಚಟುವಟಿ­ಕೆ­, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ, ಭೂಪರಿವರ್ತನೆ, ಸ್ಥಿರಾಸ್ತಿಯ ಸ್ವರೂಪಗಳನ್ನು ಆಧರಿಸಿ ದರ ಪರಿಷ್ಕರಣೆ ಮಾಡಲಾ­ಗುತ್ತದೆ.

ಈ ಸಂಬಂಧ ಜಿಲ್ಲಾ ನೋಂದಣಿ ಅಧಿಕಾರಿ­ಗಳು ಮತ್ತು ಉಪ ನೋಂದಣಿ ಅಧಿಕಾರಿಗಳ ಜತೆಗೆ ಜುಲೈ 9ರಂದು ಸಭೆ ನಡೆಸಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಡಾ.ಕೆ.ವಿ. ತ್ರಿಲೋಕ್‌ಚಂದ್ರ, ತಕ್ಷಣ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದ್ದರು.

ಬೆಂಗಳೂರಿನ 43 ಉಪನೋಂದಣಾಧಿಕಾರಿಗಳು ಈಗಾಗಲೇ ಪ್ರಸ್ತಾವ ಸಲ್ಲಿಸಿದ್ದಾರೆ. ಉಳಿದ ಜಿಲ್ಲೆಗಳ ಅಧಿಕಾರಿಗಳು ಒಂದೆರಡು ದಿನಗಳಲ್ಲಿ ಪ್ರಸ್ತಾವ ಸಲ್ಲಿಸುವ ನಿರೀಕ್ಷೆ ಇದೆ. ಆ ಬಳಿಕ ರಾಜ್ಯಪತ್ರದಲ್ಲಿ ‍ಕರಡನ್ನು ಪ್ರಕಟಿಸಿ, ಸಾರ್ವಜನಿಕ ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

‘2016ರ ಮಾರ್ಚ್‌ ತಿಂಗಳಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಿಸಲಾಗಿತ್ತು. ಎರಡು ವರ್ಷಗಳಿಂದ ಹೆಚ್ಚಳ ಮಾಡಿರಲಿಲ್ಲ. ಈ ಸಲ ಬಜೆಟ್‌ನಲ್ಲಿ ನೀಡಿರುವ ಗುರಿಗೂ ಇಲಾಖೆಯ ರಾಜಸ್ವ ಸಂಗ್ರಹಕ್ಕೂ ಶೇ 15ರಷ್ಟು ವ್ಯತ್ಯಾಸ ಇದೆ. ಹೀಗಾಗಿ, ದರ ಪರಿಷ್ಕರಣೆ ಅನಿವಾರ್ಯವಾಯಿತು’ ಎಂದು ತ್ರಿಲೋಕ್‌ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ಕಡೆಗಳಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಿಲ್ಲ. ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರದ ನಡುವೆ ಭಾರಿ ಅಂತರ ಇರುವುದು ನೋಂದಣಿ ವಹಿವಾಟು ಪರಿಶೀಲನೆ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. ಇಂತಹ ಲೋಪಗಳನ್ನು ಸರಿಪಡಿಸುವುದಕ್ಕೆ ಈ ಬಾರಿಯ ಪರಿಷ್ಕರಣೆಯಲ್ಲಿ ಆದ್ಯತೆ ನೀಡಲಾಗುತ್ತದೆ’ ಎಂದರು.

‘ಕೆಲವು ಕಡೆಗಳಲ್ಲಿ ಶೇ 20ರಷ್ಟು, ಮತ್ತೆ ಹಲವು ಕಡೆಗಳಲ್ಲಿ ಶೇ 5ರಷ್ಟು ಜಾಸ್ತಿ ಆಗಲಿದೆ. ಹೆಚ್ಚಿನ ಪ್ರದೇಶ‌ಗಳಲ್ಲಿ ಹೆಚ್ಚಳವೇ ಆಗುವುದಿಲ್ಲ. ಉದಾಹರಣೆಗೆ, ಬೆಂಗಳೂರಿನಲ್ಲಿ ಕೇಂದ್ರ ವಾಣಿಜ್ಯ ಪ್ರದೇಶಗಳು, ಜಯನಗರ, ನೆಲಮಂಗಲ, ಮೈಸೂರು ರಸ್ತೆ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಆಸುಪಾಸಿನ ಪ್ರದೇಶಗಳಲ್ಲಿ ಗರಿಷ್ಠ ಹೆಚ್ಚಳವಾಗಲಿದೆ’ ಎಂದರು.

***

ಅಂಕಿ ಅಂಶಗಳು

₹ 9,000 ಕೋಟಿ -2017–18ನೇ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಗುರಿ

₹ 9,041 ಕೋಟಿ -2017–18ನೇ ಸಾಲಿನಲ್ಲಿ ಸಂಗ್ರಹ

₹ 10,400 ಕೋಟಿ -2018–19ನೇ ಸಾಲಿನ ಗುರಿ

250 -ರಾಜ್ಯದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗಳು

****

ದರ ಹೆಚ್ಚಳ ಹೇಗೆ?

ಆಸ್ತಿಯ ಮೌಲ್ಯ ₹ 50 ಲಕ್ಷ ಇದೆ ಎಂದಿಟ್ಟುಕೊಳ್ಳಿ. ಒಂದು ವೇಳೆ ಶೇ 5 ಹೆಚ್ಚಳ ಮಾಡಿದರೆ ಆಸ್ತಿಯ ಮಾರುಕಟ್ಟೆ ಮೌಲ್ಯ ₹ 52.50 ಲಕ್ಷ, ಶೇ 10 ಹೆಚ್ಚಿಸಿದರೆ ₹ 55 ಲಕ್ಷ, ಶೇ 15 ಹೆಚ್ಚಿಸಿದರೆ ₹ 57.50 ಲಕ್ಷ, ಶೇ 20 ಹೆಚ್ಚಿಸಿದರೆ ₹ 60 ಲಕ್ಷ ಆಗುತ್ತದೆ.

ಆಸ್ತಿ ಖರೀದಿ ವೇಳೆ ಖರೀದಿದಾರರು ಶೇ 5.65ರಷ್ಟು ಮುದ್ರಾಂಕ ಶುಲ್ಕ ಹಾಗೂ ₹ 1 ಸಾವಿರ ನೋಂದಣಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಶೇ 5ರಷ್ಟು ದರ ಹೆಚ್ಚಳ ಮಾಡಿದರೆ ₹ 1 ಲಕ್ಷದ ಆಸ್ತಿಗೆ ಹೆಚ್ಚುವರಿಯಾಗಿ ₹ 275 ಮುದ್ರಾಂಕ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ₹ 50 ಲಕ್ಷದ ಆಸ್ತಿಗೆ ಶೇ 20ರಷ್ಟು ಹೆಚ್ಚಳ ಮಾಡಿದರೆ ಹೆಚ್ಚುವರಿಯಾಗಿ ₹ 50 ಸಾವಿರ ಕಟ್ಟಬೇಕಾಗುತ್ತದೆ ಎಂದು ತ್ರಿಲೋಕ್‌ಚಂದ್ರ ಮಾಹಿತಿ ನೀಡಿದರು.

***

ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ದರ ಪರಿಷ್ಕರಣೆ ಮಾಡಲಿದ್ದೇವೆ. ಆ ಮೂಲಕ ರಾಜಸ್ವ ಸಂಗ್ರಹ ಗುರಿಯನ್ನೂ ತಲುಪಲಿದ್ದೇವೆ
-ಡಾ.ಕೆ.ವಿ.ತ್ರಿಲೋಕ್‌ಚಂದ್ರ, ಆಯುಕ್ತ

ಬರಹ ಇಷ್ಟವಾಯಿತೆ?

 • 9

  Happy
 • 3

  Amused
 • 3

  Sad
 • 2

  Frustrated
 • 9

  Angry

Comments:

0 comments

Write the first review for this !