ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಇರುವ ಸಿಬ್ಬಂದಿ ಸೇವೆ ಬಳಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ: ವಿ.ಎಸ್.ಪಾಟೀಲ

ಸಾರಿಗೆ ಇಲಾಖೆ ಹುದ್ದೆಗಳ ಕಡಿತಕ್ಕೆ ಪತ್ರ
Last Updated 26 ಜೂನ್ 2020, 10:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರ್ಥಿಕ ಹೊರೆ ಕಡಿಮೆ ಮಾಡಲು ಕೆಲ ಹುದ್ದೆಗಳನ್ನು ಕಡಿತ ಮಾಡಿ, ಇನ್ನೂ ಕೆಲ ಹುದ್ದೆಗಳನ್ನು ವಿಲೀನ ಮಾಡಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಕಚೇರಿ ಮತ್ತು ವಿಭಾಗೀಯ ಕಚೇರಿಗಳಲ್ಲಿ ಸಿಬ್ಬಂದಿ ಕಡಿತ ಮಾಡಿದರೆ ಆರ್ಥಿಕ ಹೊರೆಕಡಿಮೆ ಮಾಡಬಹುದು ಎಂದಿದ್ದಾರೆ.

ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರ ಹುದ್ದೆ, ಉಪ ಮುಖ್ಯ ಕಾನೂನು ಅಧಿಕಾರಿ, ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ, ಕೇಂದ್ರ ಕಚೇರಿಯ ಉಪ ಮುಖ್ಯ ಲೆಕ್ಕಾಧಿಕಾರಿ, ಹುಬ್ಬಳ್ಳಿ ಕೇಂದ್ರ ಕಚೇರಿ, ಪ್ರಾದೇಶಿಕ ಕಾರ್ಯಾಗಾರ, ಹುಬ್ಬಳ್ಳಿ ವಿಭಾಗ, ನಗರ ಸಾರಿಗೆ ವಿಭಾಗದ ‌ಕಚೇರಿಯ ಉಪಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಹುದ್ದೆಗಳನ್ನು ಕಡಿತ ಮಾಡಬಹುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು–ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರು, ಮುಖ್ಯ ತಾಂತ್ರಿಕ ಎಂಜಿನಿಯರ್‌–ಉಗ್ರಾಣ ಮತ್ತು ಖರೀದಿ ನಿಯಂತ್ರಕರು, ಮುಖ್ಯ ಯೋಜನಾ ಮತ್ತು ಅಂಕಿ ಸಂಖ್ಯಾ ಅಧಿಕಾರಿ–ಮುಖ್ಯ ಗಣಕ ವ್ಯವಸ್ಥಾಪಕರು ಸೇರಿದಂತೆ ಇನ್ನಷ್ಟು ಹುದ್ದೆಗಳನ್ನು ವಿಲೀನ ಮಾಡಬಹುದು ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಪಾಟೀಲ ‘ಕೊರೊನಾ ಸೋಂಕು ಹರಡುವ ಭೀತಿ ಇರುವ ಕಾರಣಕ್ಕೆ ಪೂರ್ಣ ಪ್ರಮಾಣದಲ್ಲಿ ಬಸ್‌ಗಳು ಸಂಚರಿಸುತ್ತಿಲ್ಲ, ಇದರಿಂದ ಎಲ್ಲ ಸಿಬ್ಬಂದಿಗೆ ಕೆಲಸವಿಲ್ಲ. ಆದ್ದರಿಂದ ಖಾಲಿ ಇರುವ ಸಿಬ್ಬಂದಿಯನ್ನು ಸರ್ಕಾರ ತನ್ನ ಸೇವೆಗೆ ಬಳಸಿಕೊಳ್ಳಬಹುದು ಎಂದಷ್ಟೇ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದೇನೆ. ಕಡಿತ ಹಾಗೂ ವಿಲೀನದ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ’ ಎಂದರು.

‘ನಮ್ಮ ಸಾರಿಗೆ ಸಂಸ್ಥೆಯಲ್ಲಿ ಹುದ್ದೆ ಕಡಿತ ಅಥವಾ ವಿಲೀನದ ಬಗ್ಗೆ ಚರ್ಚೆಯಾಗಿಲ್ಲ. ಕೊರೊನಾ ಇರುವ ಕಾರಣ ಬಹಳಷ್ಟು ಸಿಬ್ಬಂದಿ ಖಾಲಿಯಿದ್ದಾರೆ. ಆದರೂ, ಅವರಿಗೆ ಎರಡು ತಿಂಗಳು ವೇತನ ಕೊಟ್ಟಿದ್ದೇವೆ. ಮುಂದೆಯೂ ಹಾಗಾಗಬಾರದು ಎನ್ನುವ ಕಾರಣಕ್ಕೆ ಬೇರೆ ಕೆಲಸಗಳಿಗೆ ನಿಯೋಜಿಸಬಹುದು ಎಂದು ತಿಳಿಸಿದ್ದೇನೆ’ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಪ್ರತಿಕ್ರಿಯಿಸಿ ‘ಸದ್ಯಕ್ಕೆ ನಮ್ಮ ವ್ಯಾಪ್ತಿಯಲ್ಲಿ ಹುದ್ದೆಗಳ ಕಡಿತ ಹಾಗೂ ವಿಲೀನದ ಬಗ್ಗೆ ಚರ್ಚೆಯಾಗಿಲ್ಲ. ಉದ್ಯೋಗಿಗಳ ಹಿತರಕ್ಷಣೆಯೂ ಮುಖ್ಯ. ಸದ್ಯಕ್ಕಂತೂ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT