ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಪೊಲೀಸ್ ಅತಿಥಿ, ಇಂದು ಬ್ಯಾಂಕಿನ ಅಧಿಕಾರಿ

14 ವರ್ಷದ ಬಳಿಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ ಯುವಕ
Last Updated 5 ನವೆಂಬರ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಕಳ್ಳತನ ಹಾಗೂ ಕೊಲೆ ಪ್ರಯತ್ನ ಆರೋಪದಲ್ಲಿ ಪೊಲೀಸರಿಂದ ಪೆಟ್ಟು ತಿಂದು, ಬಾಲಮಂದಿರ ಸೇರಿದ್ದ ಬಾಲಕನೊಬ್ಬ ಇದೀಗ ಖಾಸಗಿ ಬ್ಯಾಂಕೊಂದರಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದಾರೆ. ಅಂದು ಕಳ್ಳ ಎಂಬ ಪಟ್ಟಕಟ್ಟಿದವರೇ ಇಂದು ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸುತ್ತಿದ್ದಾರೆ.

ಕೌಟುಂಬಿಕ ಕಾರಣಗಳಿಂದ ಮನೆಯನ್ನು ತೊರೆದು, ಅಡ್ಡದಾರಿ ಹಿಡಿದಿದ್ದ ಬಾಲಕ(ಹೆಸರು ಬಹಿರಂಗಪಡಿಸುವಂತಿಲ್ಲ) ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ14 ವರ್ಷದ ಬಳಿಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಗರದಲ್ಲಿ ಮಂಗಳವಾರ ‘ಮಕ್ಕಳ ಹಕ್ಕುಗಳ ರಕ್ಷಣೆ’ ವಿಷಯವಾಗಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗವಹಿಸಿದ ಯುವಕ, ತಮ್ಮ ಜೀವನದಲ್ಲಾದ ಪರಿವರ್ತನೆಯ ಬಗ್ಗೆ ವಿವರಿಸಿದರು.

‘ನಗರದ ಗೊಟ್ಟಿಗೆರೆಯಲ್ಲಿ ಜನಿಸಿ, ಸರ್ಕಾರಿ ಶಾಲೆ ಸೇರಿದೆ. ಚಿಕ್ಕವಯಸ್ಸಿನಲ್ಲಿಯೇ ತಾಯಿ ನಿಧನರಾದರು. ಅಪ್ಪ ಕುಡಿದು ಬಂದು, ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದರು. ಮನೆಯಲ್ಲಿ ಊಟ–ತಿಂಡಿ ಇಲ್ಲದೆಯೇ ಹಸಿದುಕೊಂಡಿರಬೇಕಿತ್ತು. ಇದರಿಂದ ನೊಂದು 8ನೇ ವರ್ಷದಲ್ಲಿ ಮನೆ ತೊರೆದೆ. ನನ್ನ ಹಾಗೇ ಇನ್ನೂ ಕೆಲವರು ವಿವಿಧ ಕೌಟುಂಬಿಕ ಕಾರಣದಿಂದ ಮನೆ ಬಿಟ್ಟು ಬಂದಿದ್ದರು. ಊಟ–ತಿಂಡಿಗಾಗಿ 11 ಮಂದಿ ಗುಂಪು ಕಟ್ಟಿಕೊಂಡು ಕಳ್ಳತನ ಮಾಡಲು ಆರಂಭಿಸಿದೆವು. ಶಾಲೆ ತೊರೆದು, ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡೆವು. ಈ ವೇಳೆ ಊರವರಿಂದ ಛೀಮಾರಿ ಹಾಕಿಸಿಕೊಂಡು, ಒದೆ ತಿಂದೆವು. ರಾತ್ರಿವೇಳೆ ಶಾಲೆಗಳ ಆವರಣ, ಮದುವೆ ಛತ್ರದಲ್ಲಿಯೇ ಮಲಗುತ್ತಿದ್ದೆವು. ಒಂದು ದಿನ ಊರವರೇ ಪೊಲೀಸರಿಗೆ ಹಿಡಿದುಕೊಟ್ಟರು’ ಎಂದು ಬಾಲ್ಯದ ಜೀವನವನ್ನು ವಿವರಿಸಿದರು.

‘ನಮ್ಮ ಗುಂಪಿನಲ್ಲಿದ್ದ ಕೆಲ ಹಿರಿಯರು ಕೊಲೆ ಪ್ರಯತ್ನವನ್ನೂ ಮಾಡಿದ್ದರು. ಈ ಪ್ರಕರಣದಲ್ಲಿ ನನ್ನ ಹೆಸರನ್ನು ಸೇರಿಸಿ, ನಾಲ್ಕೈದು ಪ್ರಕರಣಗಳನ್ನು 2005ರ ಫೆಬ್ರುವರಿಯಲ್ಲಿ ಪೊಲೀಸರು ದಾಖಲಿಸಿದರು. ಬಳಿಕ ಬಾಲಮಂದಿರಕ್ಕೆ ಕಳುಹಿಸಿದರು. ಅಲ್ಲಿ ನಮಗೆ ಯೋಗ, ಧ್ಯಾನ ಹೇಳಿಕೊಡುತ್ತಿದ್ದರು. 2006ರಲ್ಲಿ ಬಿಡುಗಡೆಯಾದೆ. ಸ್ವಯಂಸೇವಾ ಸಂಘಟನೆಯೊಂದು ವಸತಿ ನೀಡಿ ಶಿಕ್ಷಣ ಕೊಡಿಸಿತು. 7ನೇ ತರಗತಿಯಿಂದ ಶಿಕ್ಷಣ ಮುಂದುವರಿಸಿದೆ. ವಾಣಿಜ್ಯ ವಿಭಾಗದಲ್ಲಿ ಪದವಿಯನ್ನೂ ಪಡೆದು, ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ (ದೂರಶಿಕ್ಷಣ) ಪಡೆದೆ’ ಎಂದರು.

‘ಪೊಲೀಸರಿಂದ ಹೊಡೆತಗಳನ್ನು ತಿನ್ನುವಾಗ ಐಪಿಎಸ್‌ ಅಧಿಕಾರಿಯಾಗಬೇಕೆಂದು ನಿರ್ಧರಿಸಿದೆ. ಆದರೆ, ಈ ಕ್ಷೇತ್ರಕ್ಕೆ ಬಂದಲ್ಲಿ ಸಮಾಜಸೇವೆಗೆ ಅಷ್ಟಾಗಿ ಅವಕಾಶವಿರುವುದಿಲ್ಲ ಎಂದು ಮನಗಂಡು, ಇದೀಗ ಐಎಎಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವೆ. ಸಮಯ ಸಿಕ್ಕಾಗ ಬಾಲಮಂದಿರಕ್ಕೆ ತೆರಳಿ ಪಾಠ ಮಾಡುತ್ತೇನೆ’ ಎಂದರು.

**

ಯುನಿಸೆಫ್ ವರದಿಯ ಪ್ರಕಾರ 2018ರಲ್ಲಿ ದೇಶದಲ್ಲಿ 8.88 ಲಕ್ಷ ಮಂದಿ ಅಪೌಷ್ಟಿಕತೆಯಿಂದ ಸತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಅಧ್ಯಯನ ನಡೆಸಲಾಗುವುದು.
-ಅಂತೋಣಿ ಸೆಬಾಸ್ಟಿನ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT