ಸಿಸಿಎಫ್ ಕಚೇರಿಗೆ ಅತಿಕ್ರಮಣದಾರರ ಮುತ್ತಿಗೆ

ಬುಧವಾರ, ಮೇ 22, 2019
24 °C
ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಶಿರಸಿಯಲ್ಲಿ ತೀವ್ರ ವಿರೋಧ

ಸಿಸಿಎಫ್ ಕಚೇರಿಗೆ ಅತಿಕ್ರಮಣದಾರರ ಮುತ್ತಿಗೆ

Published:
Updated:
Prajavani

ಶಿರಸಿ: ಹಲವಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡವರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುತ್ತಿದೆ ಎಂದು ಆರೋಪಿಸಿ, ಅತಿಕ್ರಮಣಕಾರರು ಶನಿವಾರ ಇಲ್ಲಿನ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. 

ಯಲ್ಲಾಪುರ ನಾಕಾದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.

ಅರಣ್ಯ ಅತಿಕ್ರಮಣ ಕಾಯ್ದೆ ಅನುಷ್ಠಾನ ಪ್ರಕ್ರಿಯೆ ಜಾರಿಯಲ್ಲಿರುವ ವೇಳೆಯೇ ಅತಿಕ್ರಮಣಕಾರರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ ನೂಕಿ, ಕಚೇರಿಯ ಒಳನುಗ್ಗಲು ಪ್ರಯತ್ನಿಸಿದರು. ಕಚೇರಿಯ ಗೇಟಿಗೆ ಬೀಗ ಹಾಕಿ, ಪೊಲೀಸರು ವಾತಾವರಣ ತಿಳಿಗೊಳಿಸಿದರು. 

ಹೋರಾಟಗಾರರ ವೇದಿಕೆ ಪ್ರಮುಖ ಎ. ರವೀಂದ್ರ ನಾಯ್ಕ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 5,621 ಅತಿಕ್ರಮಣಕಾರರ 3,159 ಹೆಕ್ಟೇರ್ ಪ್ರದೇಶ ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಈ ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಒಂದೊಮ್ಮೆ ವರದಿ ಕಳುಹಿಸಿದ್ದರೆ ಅದರ ಮಾಹಿತಿಯನ್ನು ತಕ್ಷಣ ಕೊಡಬೇಕು’ ಎಂದರು.

 ಒಕ್ಕಲೆಬ್ಬಿಸುವುದನ್ನು ನಿಲ್ಲಿಸದಿದ್ದರೆ ಇನ್ನಷ್ಟು ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಪ್ರಮುಖರಾದ ಸದಾನಂದ ಭಟ್ಟ, ಶೋಭಾ ನಾಯ್ಕ, ರಾಮಾ ಮೊಗೇರ, ಇಬ್ರಾಹಿಂ ಸಾಬ್ ಇದ್ದರು.

**

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಪ್ರಕ್ರಿಯೆ ಜಾರಿಯಲ್ಲಿರುವಾಗ ಅತಿಕ್ರಮಣ ಕಾರರನ್ನು ಒಕ್ಕಲೆಬ್ಬಿಸುವುದಿಲ್ಲ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಶೀಘ್ರ ನೀಡಲಾಗುವುದು.

-ಅಶೋಕ ಬಾಸರಕೋಡ, ಸಿಸಿಎಫ್

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !