ಶನಿವಾರ, ಜನವರಿ 18, 2020
22 °C

‘ಪೌರತ್ವ’: ಮುಸ್ಲಿಂ ಮಹಿಳೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಇಲ್ಲಿಯ ದರಬಾರ ಪ್ರೌಢಶಾಲೆ ಮೈದಾನದಲ್ಲಿ ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ಮಹಿಳಾ ಘಟಕದ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮುಸ್ಲಿಂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

‘ದಲಿತ– ಮುಸ್ಲಿಮರ ಮೇಲೆ ಅತ್ಯಾಚಾರ ನಿಲ್ಲಿಸಿ’, ‘ಬನ್ನಿ, ಬಾಬಾ ಸಾಹೇಬರ ಸಂವಿಧಾನ ಉಳಿಸೋಣ’, ‘ನಾವು ಸಿಎಎ, ಎನ್‌ಆರ್‌ಸಿ ವಿರೋಧಿಸುತ್ತೇವೆ’ ಎಂಬ ಫಲಕಗಳನ್ನು ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ನಾಯಕಿ ಅಮೂಲ್ಯ ಮಾತನಾಡಿ, ‘ಅಮಿತ್ ಶಾ, ಪ್ರಗ್ಯಾ ಠಾಕೂರ್‌, ಯೋಗಿ ಆದಿತ್ಯನಾಥ ಟೆರರಿಸ್ಟ್‌ಗಳಾಗಿದ್ದಾರೆ. ವಿದ್ಯಾರ್ಥಿಗಳು ಈ ಕಾಯ್ದೆಯನ್ನು ವಿರೋಧಿಸಿ, ತರಗತಿಗಳನ್ನು ಬಹಿಷ್ಕರಿಸಬೇಕು’ ಎಂದು ಕರೆ ನೀಡಿದರು.

‘ಮೋದಿ ನೇತೃತ್ವದ ಸರ್ಕಾರ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುತ್ತಿದೆ. ಮೋದಿ ಸರ್ಕಾರಕ್ಕೆ ಯಾವುದೇ ದಾಖಲೆಗಳನ್ನು ತೋರಿಸುವುದಿಲ್ಲ. ನಾವು ಭಾರತೀಯರು, ಭಾರತೀಯರಾಗಿಯೇ  ಇರುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗೋ ಬ್ಯಾಕ್‌ ಅಮಿತ್‌ ಶಾ’ ಚಳವಳಿ

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ಜನಜಾಗೃತಿ ಸಮಾವೇಶದ ಹೆಸರಿನಲ್ಲಿ ರಾಜಕೀಯ ಸಭೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇದೇ 19ಕ್ಕೆ ನಗರಕ್ಕೆ ಬರುವುದನ್ನು ವಿರೋಧಿಸಿ ‘ಗೋ ಬ್ಯಾಕ್‌ ಅಮಿತ್ ಶಾ’ ಚಳವಳಿ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಘೋಷಿಸಿದೆ.

ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ, ‘ಗಲಭೆ ಮತ್ತು ಗೋಲಿಬಾರ್‌ನಿಂದ ಪ್ರಕ್ಷುಬ್ಧವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಈಗ ಶಾಂತ ಸ್ಥಿತಿಗೆ ಮರಳುತ್ತಿದೆ. ಈ ಹಂತದಲ್ಲಿ ಅಮಿತ್‌ ಶಾ ಅವರ ರಾಜಕೀಯ ಸಮಾವೇಶಕ್ಕೆ ಅವಕಾಶ ನೀಡಿದರೆ ಮತ್ತೆ ಶಾಂತಿ ಕದಡುತ್ತದೆ. ಅವರ ಭೇಟಿಗೆ ಅವಕಾಶ ನೀಡಬಾರದು’ ಎಂದು ಆಗ್ರಹಿಸಿದರು.

ಅಮಿತ್‌ ಶಾ ನಗರಕ್ಕೆ ಬಂದರೆ ‘ಗೋ ಬ್ಯಾಕ್‌’ ಚಳವಳಿ ನಡೆಸಲಾಗುವುದು. ಭೇಟಿಯನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹವನ್ನೂ ಹಮ್ಮಿಕೊಳ್ಳಲಾಗುವುದು ಎಂದರು.

ಜನತಾ ಅದಾಲತ್‌ ತಡೆಯಲು ಯತ್ನ

ಮಂಗಳೂರು ನಗರದಲ್ಲಿ ಡಿಸೆಂಬರ್‌ 19ರಂದು ನಡೆದಿದ್ದ ಗೋಲಿಬಾರ್‌ ಕುರಿತು ಸಾರ್ವಜನಿಕರ ಅಹವಾಲು ಆಲಿಸಿ, ಸಾಕ್ಷ್ಯ ಸಂಗ್ರಹಿಸಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ‘ಜನತಾ ಅದಾಲತ್‌’ಗೆ ತಡೆಯೊಡ್ಡಲು ನಗರ ಪೊಲೀಸರು ಸೋಮವಾರ ಯತ್ನಿಸಿದರು.

ಬೆಂಗಳೂರಿನ ಇಂಡಿಯನ್‌ ಸೋಷಿಯಲ್‌ ಇನ್‌ಸ್ಟಿಟ್ಯೂಟ್‌ನ ಅಂಗ ಸಂಸ್ಥೆಯಾದ ಲಿಸೆನಿಂಗ್‌ ಪೋಸ್ಟ್‌ ಈ ಸಭೆಯನ್ನು ಆಯೋಜಿಸಿತ್ತು. ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಹಿರಿಯ ವಕೀಲ ಬಿ.ಟಿ. ವೆಂಕಟೇಶ್‌ ಮತ್ತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರನ್ನೊಳಗೊಂಡ ‘ಜನತಾ ಅದಾಲತ್‌’ ಸಭೆ ನಗರದ ಸೂರ್ಯ ಹೋಟೆಲ್‌ನಲ್ಲಿ ಆಯೋಜನೆಯಾಗಿತ್ತು. ಭಾನುವಾರ ರಾತ್ರಿ ಲಿಸೆನಿಂಗ್‌ ಪೋಸ್ಟ್‌ನ ಸಂಯೋಜಕ ಅಶೋಕ್‌ ಮರಿದಾಸ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದ ಮಂಗಳೂರು ಉತ್ತರ (ಬಂದರು) ಠಾಣೆ ಇನ್‌ಸ್ಪೆಕ್ಟರ್‌ ಗೋವಿಂದರಾಜು ಬಿ., ಜನತಾ ಅದಾಲತ್‌ ನಡೆಸಬಾರದು ಎಂದು ಸೂಚಿಸಿದ್ದರು.

ಹೋಟೆಲ್‌ಗೂ ನೋಟಿಸ್‌ ತಲುಪಿಸಿದ್ದ ಪೊಲೀಸರು, ಸಭೆಗೆ ಅವಕಾಶ ನೀಡದಂತೆ ಸೂಚಿಸಿದ್ದರು. ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗುವ ಮುನ್ನ ಮಫ್ತಿಯಲ್ಲಿ ಹೋಟೆಲ್‌ಗೆ ಪೊಲೀಸ್‌ ಸಿಬ್ಬಂದಿ ಸಭೆಗೆ ಅವಕಾಶ ನೀಡದಂತೆ ಒತ್ತಡ ಹೇರಿದರು. ಅದಾಲತ್‌ ಆರಂಭವಾಗುತ್ತಿದ್ದಂತೆಯೇ ಹೋಟೆಲ್‌ ವ್ಯವಸ್ಥಾಪಕ ತಾರಾನಾಥ ಶೆಟ್ಟಿ ಅವರನ್ನು ಸಂಪರ್ಕಿಸಿದ ಪೊಲೀಸ್‌ ಅಧಿಕಾರಿಗಳು, ಸಭೆ ಸ್ಥಗಿತಗೊಳಿಸುವಂತೆ ಒತ್ತಡ ಹೇರಿದರು.

ಸಭಾಂಗಣಕ್ಕೆ ಬಂದ ತಾರಾನಾಥ ಶೆಟ್ಟಿ, ಸಭೆ ನಿಲ್ಲಿಸುವಂತೆ ಕೇಳಿಕೊಂಡರು. ಅರ್ಧ ಗಂಟೆ ಸಭೆ ಸ್ಥಗಿತಗೊಳಿಸಿದ ತಂಡ, ಪರ್ಯಾಯ ಸ್ಥಳದಲ್ಲಿ ಸಭೆ ಮುಂದುವರಿಸಲು ನಿರ್ಧರಿಸಿತು. ಅಷ್ಟರಲ್ಲಿ ಮತ್ತೆ ವಾಪಸಾದ ಹೋಟೆಲ್‌ ವ್ಯವಸ್ಥಾಪಕರು ಮಧ್ಯಾಹ್ನ 4 ಗಂಟೆಯವರೆಗೂ ಸಭೆ ನಡೆಸಲು ಒಪ್ಪಿಗೆ ಸೂಚಿಸಿದರು.

4 ಗಂಟೆಯವರೆಗೂ ಹೋಟೆಲ್‌ನಲ್ಲಿ ಸಭೆ ನಡೆಸಿ, ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಬಳಿಕ ‘ಪಡಿ’ ಸರ್ಕಾರೇತರ ಸಂಸ್ಥೆಯ ಕಚೇರಿಯಲ್ಲಿ ಅದಾಲತ್‌ ನಡೆಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು