ಗುರುವಾರ , ನವೆಂಬರ್ 21, 2019
23 °C

‘ಅನರ್ಹ’ರಿಗೆ ಬಿಜೆಪಿ ಟಿಕೆಟ್‌: ಸ್ಥಳೀಯ ಪ್ರಮುಖರ ವಿರೋಧ

Published:
Updated:

ಬೆಂಗಳೂರು: ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್‌ ನೀಡಲು ಹಿಂದಿನ ಚುನಾವಣೆಯಲ್ಲಿ ಅವರ ಎದುರು ಸೋತವರು ಹಾಗೂ ಸ್ಥಳೀಯ ಪ್ರಮುಖರು ವಿರೋಧ ವ್ಯಕ್ತಪಡಿಸಿದ್ದಾರೆ. 

ಉಪಚುನಾವಣೆ ಘೋಷಣೆಯಾಗಿರುವ 15 ಕ್ಷೇತ್ರಗಳ ಪೈಕಿ ದಕ್ಷಿಣ ಕರ್ನಾಟಕದ ಎಂಟು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಸಮ್ಮುಖದಲ್ಲಿ ಬುಧವಾರ ಸಭೆ ನಡೆಯಿತು.

‘ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅನರ್ಹರಿಗೆ ಟಿಕೆಟ್ ಕೊಟ್ಟು ಗೆದ್ದರೆ, ಮುಂದೆ ನಡೆಯಲಿರುವ ಬಿಬಿಎಂಪಿ ಚುನಾವಣೆಯಲ್ಲಿ ಅವರ ಬೆಂಬಲಿಗರಿಗೆ ಟಿಕೆಟ್‌ ಕೊಡಿಸುತ್ತಾರೆ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದವರು ಹಾಗೂ ಹಾಲಿ ಸದಸ್ಯರಾಗಿರುವವರ ಕತೆ ಏನು’ ಎಂದು ಪ್ರಮುಖರು ಪ್ರಶ್ನಿಸಿದರು.

ಯಶವಂತಪುರ ಕ್ಷೇತ್ರದಲ್ಲಿಎಸ್.ಟಿ. ಸೋಮಶೇಖರ್, ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ 13 ಕೇಸ್‌ ಹಾಕಿಸಿದ್ದಾರೆ.

ಅವರಿಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರು ಏನು ಮಾಡಬೇಕು ಎಂದೂ ಆ ಕ್ಷೇತ್ರದ ಪ್ರಮುಖರು ತಕರಾರು ತೆಗೆದರು.

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಗೋಪಾಲಯ್ಯಗೆ ಟಿಕೆಟ್ ನೀಡಲು ನೆ.ಲ. ನರೇಂದ್ರ ಬಾಬು, ಎಸ್. ಹರೀಶ್‌ ಹಾಗೂ ಎಂ. ನಾಗರಾಜ್‌ ವಿರೋಧ ವ್ಯಕ್ತಪಡಿಸಿದರು. ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೋ ಅವರ ಪರವಾಗಿ ಎಲ್ಲರೂ ಕೆಲಸ ಮಾಡಲೇಬೇಕು ಎಂದು ಯಡಿಯೂರಪ್ಪ ಪ್ರತಿಪಾದಿಸಿದಾಗ, ನಾಗರಾಜ್‌ ಸಮ್ಮತಿ ಸೂಚಿಸಿದರು. ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದ ತೀರ್ಪು ಬಂದ ಬಳಿಕ ತೀರ್ಮಾನ ತಿಳಿಸುವುದಾಗಿ ನರೇಂದ್ರ ಬಾಬು ಹೇಳಿದರು ಎಂದು ಮೂಲಗಳು ಹೇಳಿವೆ. 

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರಿಗೆ ಟಿಕೆಟ್ ಕೊಡದೇ ಇದ್ದರೆ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆಯೂ ನಡೆಯಿತು.

ಒಂದು ವೇಳೆ ಪಕ್ಷದ ತೀರ್ಮಾನಕ್ಕೆ ಶರತ್ ಬದ್ಧರಾಗದೇ ಇದ್ದರೆ ಮುಂದೆ ನೋಡೋಣ ಎಂದು ಯಡಿಯೂರಪ್ಪ ಹೇಳಿದರು ಎಂದು ಮೂಲಗಳು ತಿಳಿಸಿವೆ. ಶಿವಾಜಿನಗರ, ಕೆ.ಆರ್. ಪುರ, ಹುಣಸೂರು ಹಾಗೂ ಕೆ.ಆರ್. ಪೇಟೆ ಕ್ಷೇತ್ರಗಳ ವಿಷಯದಲ್ಲಿ ಹೆಚ್ಚಿನ ಆಕ್ಷೇಪ ವ್ಯಕ್ತವಾಗಲಿಲ್ಲ.

26ಕ್ಕೆ ಉತ್ತರದ ಕ್ಷೇತ್ರಗಳ ಸಭೆ

‘ಅಭ್ಯರ್ಥಿ ಆಯ್ಕೆ ಕುರಿತಂತೆ ಚರ್ಚೆ ನಡೆದಿದ್ದು, ಯಾರೊಬ್ಬರೂ ಒಡಕಿನ ಮಾತು ಆಡಿಲ್ಲ’ ಎಂದು ಯಡಿಯೂರಪ್ಪ ಹೇಳಿದರು.

‘ಯಾರೇ ಅಭ್ಯರ್ಥಿಯಾದರೂ ಒಂದಾಗಿ ಕೆಲಸ ಮಾಡೋಣ ಎಂಬ ಬಗ್ಗೆ ಚರ್ಚೆ ನಡೆದಿದೆ. ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳ ಸಭೆ ಇದೇ 26ಕ್ಕೆ ಹುಬ್ಬಳ್ಳಿಯಲ್ಲಿ ನಡೆಯಲಿದೆ’ ಎಂದರು. 

ಪ್ರತಿಕ್ರಿಯಿಸಿ (+)