ಶನಿವಾರ, ಮೇ 15, 2021
29 °C

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ವಿರೋಧಿಸಿ 29ರಂದು ಧರಣಿ: ಡಿ.ಕೆ. ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಜೂನ್ 29ರಂದು ಧರಣಿ ಹಮ್ಮಿಕೊಂಡಿದ್ದೇವೆ’ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಹಿರಿಯ ನಾಯಕರ ಸಭೆ ಕರೆದು ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಕುರಿತು ಚರ್ಚಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುತ್ತೇವೆ. ಜುಲೈ 4, 5ರಂದು ತಾಲ್ಲೂಕು ಮಟ್ಟದಲ್ಲಿ ಧರಣಿ ಹಮ್ಮಿಕೊಳ್ಳುತ್ತೇವೆ’ ಎಂದರು.

‘ಲಾಕ್‌ಡೌನ್ ಬಳಿಕ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ದೇಶದ ಜನರನ್ನು ಕೇಂದ್ರ ಸರ್ಕಾರ ಸುಲಿಗೆ ಮಾಡುತ್ತಿದೆ. ಡೀಸೆಲ್‌ ಮೇಲೆ ಶೇ 26.48, ಪೆಟ್ರೋಲ್ ಮೇಲೆ ಶೇ 21ರಷ್ಟು ತೆರಿಗೆ ಹಾಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದೆ. ಆದರೆ, ಕೇಂದ್ರ ಸರ್ಕಾರ ತೈಲ ಬೆಲೆ ಕಡಿಮೆ ಮಾಡುತ್ತಿಲ್ಲ’ ಎಂದು ಅವರು ದೂರಿದರು.

ಯೋಧರಿಗೆ ನಮನ: ‘ಎಲ್ಲ ರಾಜ್ಯಗಳ ಕಾಂಗ್ರೆಸ್‌ ಅಧ್ಯಕ್ಷರ ಜೊತೆ ರಾಹುಲ್‌ ಗಾಂಧಿ ಬುಧವಾರ ವೀಡಿಯೊ ಸಂವಾದ ನಡೆಸಿದರು. ಅವರ ಸೂಚನೆಯಂತೆ ಗಾಂಧಿ ಪ್ರತಿಮೆ ಬಳಿ ಹುತಾತ್ಮ ಯೋಧರಿಗೆ ಶುಕ್ರವಾರ ನಮನ ಸಲ್ಲಿಸುತ್ತೇವೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಕಾರ್ಯಕ್ರಮ ನಡೆಯಲಿದೆ. ಆ ಮೂಲಕ, ಯೋಧರ ಕುಟುಂಬಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ’ ಎಂದರು.

‘ಪಿಎಂ, ಸಿಎಂ ಕೇರ್’ನಿಂದ ಭರಿಸಬೇಕು: ‘ಆರೋಗ್ಯ ಕರ್ನಾಟಕ ಯೋಜನೆಯನ್ನು ನಾನು ವೈದ್ಯಕೀಯ ಸಚಿವನಾಗಿದ್ದಾಗ ನಮ್ಮ ಸರ್ಕಾರ (ಕಾಂಗ್ರೆಸ್‌) ಜಾರಿಗೆ ತಂದಿದೆ. ಬಡ ಕುಟುಂಬಗಳಿಗೆ ₹ 5 ಲಕ್ಷವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ನೀಡಿದ್ದೆವು. ಆದರೆ, ಈಗ ಪಿಎಂ, ಸಿಎಂ ಕೇರ್ ನಿಧಿಗೆ ಹಣ ಹರಿದುಬಂದಿದೆ. ಸರ್ಕಾರ ಆ ಹಣ ಬಳಸಿಕೊಂಡು ಜನರಿಗೆ ಉಚಿತ ಚಿಕಿತ್ಸೆ ನೀಡಬೇಕು. ಅದನ್ನು ಬಿಟ್ಟು ಬಡವರಿಂದ ಹಣ ವಸೂಲಿ ಯಾಕೆ ಮಾಡಬೇಕು’ ಎಂದು ಅವರು ಪ್ರಶ್ನಿಸಿದರು.

ಕೆಪಿಸಿಸಿ ಚಾಲಕ ಘಟಕ: ‘ಕೆಪಿಸಿಸಿ ಚಾಲಕರ ಘಟಕ ಆರಂಭಿಸಲು ನಿರ್ಧರಿಸಿದ್ದೇವೆ. ತಾಲ್ಲೂಕು, ಬ್ಲಾಕ್ ಮಟ್ಟದಲ್ಲೂ ಸಂಘವನ್ನು ಕಟ್ಟುತ್ತೇವೆ. ಬಡವರು ನಿವೇಶನ ಮಾರಾಟ ಮಾಡಲು ಜಿಎಸ್‌ಟಿ ಜಾರಿಗೆ ತರಲಾಗಿದೆ. ಈ ತೀರ್ಮಾನದ ವಿರುದ್ಧವೂ ಹೋರಾಟ ರೂಪಿಸುತ್ತೇವೆ. ನಿರುದ್ಯೋಗ ಸಮಸ್ಯೆಯ ಬಗ್ಗೆಯೂ ಗಮನಹರಿಸಿದ್ದೇವೆ’ ಎಂದರು.

ನಾನು ನನ್ನ ಕೆಲಸ ಮಾಡಿದ್ದೇನೆ: ‘ಕನಕಪುರ ನಾಗರಿಕನಾಗಿ ನಾನು‌ ಅಲ್ಲಿ ಲಾಕ್‌ಡೌನ್‌ ಮಾಡಿದ್ದೇನೆ. ಬೆಂಗಳೂರಿನ ಜನರು ಏನು ಬೇಕೊ ಅದನ್ನು ಮಾಡುತ್ತಾರೆ. ನಾನು ಮಾಡಿದ್ದಕ್ಕೆ ಡಿಸಿಎಂ ಸಾಹೇಬರು ಏನೇನೋ ಹೇಳಿದರು. ಪಾಪ, ನಾನ್ಯಾಕೆ ಅವರ ಬಗ್ಗೆ ಮಾತನಾಡಲಿ’ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ವಿರುದ್ಧ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

‘ಆಶಾ ಕಾರ್ಯಕರ್ತೆಯರು, ವೈದ್ಯರು, ಐಎಎಸ್ ಮಾಡಿದವರು ಎಲ್ಲರೂ ಒಂದೇ. ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ಕೊಡಬೇಕು.ವಿದೇಶದಿಂದ ಬಂದವರಿಗೆ ಪ್ರತ್ಯೇಕ ಚಿಕಿತ್ಸೆ ಸರಿಯಲ್ಲ. ಯಾರೂ ಮೇಲಲ್ಲ, ಯಾರೂ ಕೀಳೂ ಅಲ್ಲ’ ಎಂದರು.

ಸರ್ಕಾರ ವಿಫಲ: ‘ಮುನ್ನೆಚ್ಚರಿಕೆ ವಹಿಸಲು, ಸಿದ್ಧತೆ ಮಾಡಿಕೊಳ್ಳಲು ಲಾಕ್ ಡೌನ್ ಮಾಡಲಾಗುತ್ತದೆ. ಪೂರ್ವಸಿದ್ಧತೆ ಮಾಡುತ್ತಿದ್ದರೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಉಂಟಾಗುತ್ತಿರಲಿಲ್ಲ. ಸೋಕು ನಿಯಂತ್ರಿಸುವ ವಿಷಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಟೀಕಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್‌, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಹಾಗೂ ವಕ್ತಾರ ಉಗ್ರಪ್ಪ ಮಾಧ್ಯಮ ಗೋಷ್ಠಿಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು