ಪ್ರತಿಭಟನೆಯಿಂದಾಗಿ ‘ಸಂವಿಧಾನ ಸಂವಾದ’ ಕಾರ್ಯಕ್ರಮ ಮುಂದೂಡಿಕೆ

7
ಶೋಕಾಚರಣೆ ವೇಳೆ ಕಾರ್ಯಕ್ರಮ ನಡೆಸುವುದಕ್ಕೆ ದಲಿತ ಮತ್ತು ಕನ್ನಡ ಪರ ಸಂಘಟನೆಗಳ ವಿರೋಧ

ಪ್ರತಿಭಟನೆಯಿಂದಾಗಿ ‘ಸಂವಿಧಾನ ಸಂವಾದ’ ಕಾರ್ಯಕ್ರಮ ಮುಂದೂಡಿಕೆ

Published:
Updated:

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಮೃದ್ಧ ಭಾರತ ಸಂಸ್ಥೆ, ಎನ್‌ಡಿಟಿವಿ ಸಹಯೋಗದಲ್ಲಿ ಹಮ್ಮಿಕೊಂಡ ‘ಸಂವಿಧಾನದ ಸಂಭಾಷಣೆಗಳು’ ವಿಚಾರಗೋಷ್ಠಿಯನ್ನು ಸಿದ್ಧಗಂಗಾ ಮಠದ ದಿವಂಗತ ಶಿವಕುಮಾರ ಸ್ವಾಮೀಜಿ ಅವರ ಶೋಕಾಚರಣೆ ಸಲುವಾಗಿ ಅರ್ಧದಲ್ಲೇ ನಿಲ್ಲಿಸಲಾಯಿತು. 

ಹೋಟೆಲ್‌ ಲಲಿತ್‌ ಅಶೋಕ್‌ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು  ಉದ್ಘಾಟಿಸಿ ಮಾತನಾಡಿದರು. ಬಳಿಕ ಸಂವಿಧಾನದ ಉಗಮ ಹಾಗೂ ಅದರ ಐತಿಹಾಸಿಕ ಸವಾಲುಗಳು ಕುರಿತ ಗೋಷ್ಠಿ ನಡೆಯಿತು. 

ಆ ವೇಳೆಗಾಗಲೇ ಕೆಲವು ಕನ್ನಡಪರ ಸಂಘಟನೆಗಳ ಮುಖಂಡರು ಹೋಟೆಲ್‌ ಮುಂದೆ ಗೋಷ್ಠಿ ವಿರುದ್ಧ ಘೋಷಣೆ ಕೂಗಿದರು. 

‘ಶೋಕಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಹಾಗಿದ್ದರೂ ಇಲ್ಲಿ ಕಾರ್ಯಕ್ರಮ ಮುಂದುವರಿದಿದೆ. ಇದು ಸ್ವಾಮೀಜಿ ಅವರಿಗೆ ಮಾಡಿದ ಅವಮಾನ. ತಕ್ಷಣವೇ ಕಾರ್ಯಕ್ರಮ ನಿಲ್ಲಿಸಬೇಕು’ ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದರು. 

ಕೆಲವರು ಹೋಟೆಲ್‌ ಮುಂಭಾಗ ಘೋಷಣೆ ಕೂಗಿದರು. ಇನ್ನು ಕೆಲವರು ಗೋಷ್ಠಿಯ ಸಭಾಂಗಣದ ಮುಂಭಾಗದವರೆಗೆ ಬಂದು ಕಾರ್ಯಕ್ರಮ ನಿಲ್ಲಿಸಲು ಆಗ್ರಹಿಸಿದರು. ಈ ವೇಳೆ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರು ಆಗಮಿಸಿ ಪರಿಸ್ಥಿತಿ ಬಗ್ಗೆ ಸಂಘಟಕರಿಗೆ ವಿವರಿಸಿದರು. ಪರಿಸ್ಥಿತಿ ಕೈಮೀರುವುದನ್ನು ಅರಿತ ಸಂಘಟಕರು ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ಘೋಷಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ, ‘ಸ್ವಾಮೀಜಿ ನಿಧನ ಘೋಷಣೆ ಆದ ಬಳಿಕ ಈ ಕಾರ್ಯಕ್ರಮದ ಬಗ್ಗೆ ಮುಖ್ಯಮಂತ್ರಿ ಸಹಿತ ಹಿರಿಯರೊಂದಿಗೆ ಚರ್ಚಿಸಿದ್ದೇನೆ. ಗಣ್ಯಾತಿಗಣ್ಯರು ಆಗಮಿಸುವ ಪೂರ್ವನಿರ್ಧರಿತ ಕಾರ್ಯಕ್ರಮವಿದು. ಹಾಗಾಗಿ ರದ್ದುಗೊಳಿಸುವುದು ಕಷ್ಟವಾಯಿತು’ ಎಂದರು.

‘ಕಾರ್ಯಕ್ರಮವನ್ನು ದಿವಂಗತ ಶಿವಕುಮಾರ ಸ್ವಾಮೀಜಿ ಅವರಿಗೆ ಅರ್ಪಿಸಿಯೇ ಆರಂಭಿಸಿದ್ದೇವೆ. ಇದು ವಿಚಾರಸಂಕಿರಣ ಅಷ್ಟೆ. ಇಲ್ಲಿ ಯಾವುದೇ ಮನೋರಂಜನಾ ಕಾರ್ಯಕ್ರಮ ಇಲ್ಲ. ಸರ್ಕಾರದ ಪ್ರತಿನಿಧಿಗಳು ಯಾರೂ ವೇದಿಕೆ ಹತ್ತಿಲ್ಲ. ಭಾಷಣ ಮಾಡಿಲ್ಲ’ ಎಂದು ಸಮಜಾಯಿಷಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !