ಗುತ್ತಿಗೆ ನೌಕರರ ಮುಷ್ಕರ: ರಜೆ ಪಡೆಯದಿರಲು ವೈದ್ಯರಿಗೆ ಸೂಚನೆ

7

ಗುತ್ತಿಗೆ ನೌಕರರ ಮುಷ್ಕರ: ರಜೆ ಪಡೆಯದಿರಲು ವೈದ್ಯರಿಗೆ ಸೂಚನೆ

Published:
Updated:

ಬೆಂಗಳೂರು: ಸಮಾನ ವೇತನ ಮತ್ತು ನಿವೃತ್ತಿವರೆಗೆ ಸೇವಾ ಭದ್ರತೆ ಒದಗಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ‘ಕರ್ನಾಟಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ’ದ ಕಾರ್ಯಕರ್ತರು ಮತ್ತು ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ರಾಜ್ಯದ ನಾನಾ ಮೂಲೆಗಳಿಂದ ಭಾನುವಾರ ನಗರಕ್ಕೆ ಬಂದಿಳಿದ ಸಾವಿರಕ್ಕೂ ಅಧಿಕ ಸಿಬ್ಬಂದಿ ಮೈಕೊರೆಯುವ ಚಳಿಯಲ್ಲಿ ಇಡೀ ರಾತ್ರಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮೊದಲ ದಿನ ಕಳೆದರು.

ಬಜೆಟ್‌ನಲ್ಲಿ ಆರೋಗ್ಯ ಇಲಾಖೆ ಬಲಗೊಳಿಸಲು ಶೇ 15ರಷ್ಟು ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗಿತ್ತು. ಕೇವಲ ಶೇ 4ರಷ್ಟು ಅನುದಾನ ನೀಡಿ ಅನ್ಯಾಯ ಎಸಗಿದ್ದಾರೆ. ಸಿಬ್ಬಂದಿಗೆ ಸರಿಯಾಗಿ ವೇತನ ದೊರೆಯದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯಲಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಖಾಲಿ ಇರುವ ಸ್ಥಳಗಳಲ್ಲಿ ಇಲಾಖೆಯ ಪೂರ್ಣಾವಧಿ ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿಯನ್ನು ತಕ್ಷಣಕ್ಕೆ ನೇಮಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಯಾರೂ ರಜೆ ಪಡೆಯದೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಚಿಕಿತ್ಸೆಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !