ಮೀನುಗಾರರ ಭಾರಿ ಪ್ರತಿಭಟನೆ

7
ಮಲ್ಪೆಯಿಂದ ಉಡುಪಿವರೆಗೆ ಪ್ರತಿಭಟನೆ

ಮೀನುಗಾರರ ಭಾರಿ ಪ್ರತಿಭಟನೆ

Published:
Updated:
Prajavani

ಉಡುಪಿ: 21 ದಿನಗಳಿಂದ ಮಡುಗಟ್ಟಿದ್ದ ಮೀನುಗಾರರ ಆಕ್ರೋಶ ಭಾನುವಾರ ಭುಗಿಲೆದ್ದಿತ್ತು. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೀನುಗಾರರು ಪ್ರತಿಭಟನೆಗೆ ಧುಮುಕಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಾಪತ್ತೆಯಾಗಿರುವ ಮೀನುಗಾರರನ್ನು ಶೀಘ್ರ ಪತ್ತೆ ಮಾಡುವಂತೆ ಒತ್ತಾಯಿಸಿದರು.

ಭಾನುವಾರ ಬೆಳಿಗ್ಗೆ ಮಲ್ಪೆಯಲ್ಲಿ ತೆಂಗಿನಕಾಯಿ ಹೊಡೆದು ಪೂಜೆ ಸಲ್ಲಿಸಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದ ಕಡಲ ಮಕ್ಕಳು ಉಡುಪಿಯವರೆಗೂ ಸಾಗಿ ಸುಮಾರು 3 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. 

ಮಲ್ಪೆ ಬಂದರಿನಿಂದ ಕಲ್ಮಾಡಿ, ಆದಿ ಉಡುಪಿ, ಕರಾವಳಿ ಜಂಕ್ಷನ್‌, ಶಾರದಾ ಹೋಟೆಲ್‌ ಮಾರ್ಗವಾಗಿ ಮೇಲ್ಸೇತುವೆ ಮೂಲಕ ಸಾಗಿ ಅಂಬಲಪಾಡಿ ಜಂಕ್ಷನ್‌ ತಲುಪಿದ ಪ್ರತಿಭಟನಾಕಾರರು, ಹೆದ್ದಾರಿ ತಡೆ ನಡೆಸಿದರು. ದಾರಿಯುದ್ದಕ್ಕೂ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಮೂರು ಜಿಲ್ಲೆಗಳಿಂದ 15 ಸಾವಿರಕ್ಕೂ ಹೆಚ್ಚು ಮೀನುಗಾರರು ಭಾಗವಹಿಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಲ್ಲಿ ಮೀನುಗಾರಿಕಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು.

ಮಹಿಳಾ ಮೀನು ಮಾರಾಟಗಾರರ ಸಂಘ ಹಾಗೂ ಮಹಿಳಾ ಸಂಘ–ಸಂಸ್ಥೆಗಳಿಂದ ಸಾವಿರಾರು ಮಹಿಳಾ ಮೀನುಗಾರರು ಧರಣಿಯಲ್ಲಿ ಭಾಗವಹಿಸಿದ್ದರೆ. ‘ಮೀನುಗಾರರ ಜೀವಕ್ಕೆ ಬೆಲೆ ಇಲ್ಲವೇ?’, ‘ದೇಶ, ರಾಜ್ಯವನ್ನು ಆಳುವವರೇ ಮೀನುಗಾರರ ಸಂಕಷ್ಟ ಅರಿಯಿರಿ’, ‘ನಾವು ಸಾಲ ಮನ್ನಾ ಮಾಡಿ, ಉದ್ಯೋಗ ನೀಡಿ ಎಂದು ಬೀದಿಗೆ ಇಳಿದಿಲ್ಲ. ನಮ್ಮವರನ್ನು ಕಳೆದುಕೊಂಡು 21 ದಿನಗಳು ಕಳೆದಿವೆ. ಅವರನ್ನು ಹುಡುಕಿಕೊಡಿ ಎಂದು ಕೇಳುತ್ತಿದ್ದೇವೆ’ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಮಲ್ಪೆ, ಮಂಗಳೂರು, ಗಂಗೊಳ್ಳಿ, ಹೊನ್ನಾವರ, ಕಾರವಾರದ ಮೀನುಗಾರಿಕಾ ಬಂದರುಗಳ ಚಟುವಟಿಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ನಗರದೊಳಗಿನ ಮೀನು ಮಾರುಕಟ್ಟೆಗಳೂ ಬಂದ್‌ ಆಗಿದ್ದವು. ನಿರೀಕ್ಷೆಗೂ ಮೀರಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಮೀನುಗಾರರು ಶಕ್ತಿ ಹಾಗೂ ಒಗ್ಗಟ್ಟು ಪ್ರದರ್ಶಿಸಿದರು.

ಮೀನುಗಾರರ ಸಂಘದ ಅಧ್ಯಕ್ಷ ಆನಂದ್ ಸಿ. ಕುಂದರ್,  ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಯಶ್‌ಪಾಲ ಸುವರ್ಣ, ಶಾಸಕ ರಘುಪತಿ ಭಟ್‌, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಸಂಸದೆ ಶೋಭಾ ಕರದ್ಲಾಂಜೆ, ಶಾಸಕ ಲಾಲಾಜಿ ಮೆಂಡನ್‌ ಧರಣಿಯ ನೇತೃತ್ವ ವಹಿಸಿದರು.

ಎಲ್ಲೆಡೆ ಬಿಗಿ ಭದ್ರತೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿವೈಎಸ್‌ಪಿ ಟಿ.ಆರ್.ಜೈಶಂಕರ್, ದಿನೇಶ್ ಕುಮಾರ್ ಸ್ಥಳದಲ್ಲಿ ಹಾಜರಿದ್ದು, ಭದ್ರತೆ ನೋಡಿಕೊಂಡರು. ಮೂರು ಕೆಎಸ್‌ಆರ್‌ಪಿ ತಂಡ, 1 ವಜ್ರವಾಹಕ ಸೇರಿದಂತೆ ಒಟ್ಟು 400 ಮಂದಿ ಪೊಲೀಸ್‌ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು.

ರಸ್ತೆ ಸಂಚಾರದಲ್ಲಿ ಬದಲಾವಣೆ:

ಮೆರವಣಿಗೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಬಲಪಾಡಿಯಿಂದ ಕಿನ್ನಿಮೂಲ್ಕಿಯವರೆಗೆ ಆರು ಕಿ.ಮೀ. ರಸ್ತೆ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದರು.

ಕುಂದಾಪುರದಿಂದ ಮಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಅಂಬಾಗಿಲು, ಪೆರಂಪಳ್ಳಿ, ಮಣಿಪಾಲ ಮಾರ್ಗವಾಗಿ ಬೀಡಿನಗುಡ್ಡೆ ಹಾಗೂ ಮಂಗಳೂರಿನಿಂದ ಕುಂದಾಪುರಕ್ಕೆ ಹೋಗುವ ವಾಹನಗಳನ್ನು ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಮೂಲಕ, ಬಲೈಪಾದೆ, ಕಲ್ಸಂಕ, ಮೂಲಕ ತೆರಳಲು ವ್ಯವಸ್ಥೆ ಮಾಡಲಾಗಿತ್ತು.

ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ:

ಮೀನುಗಾರರು ಸುರಕ್ಷಿತವಾಗಿ ವಾಪಸಾಗಲಿ ಎನ್ನುವ ನಿಟ್ಟಿನಲ್ಲಿ ಆದಿ ಉಡುಪಿ ಮಸೀದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರತಿಭಟನೆ ಸಾಗುವ ದಾರಿಯುದ್ದಕ್ಕೂ ಪ್ರತಿಭಟನಾಕಾರರಿಗೆ ತಂಪು ಪಾನೀಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !