ಪ್ರತ್ಯೇಕ ರಾಜ್ಯ ಹೋರಾಟಗಾರರಿಂದ ಪ್ರತಿಭಟನೆ

7
ನಡೆಯದ ಬಂದ್: ಎಚ್‌ಡಿಕೆ ಮಾತು ಉಳಿಸಿಕೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಪ್ರತ್ಯೇಕ ರಾಜ್ಯ ಹೋರಾಟಗಾರರಿಂದ ಪ್ರತಿಭಟನೆ

Published:
Updated:
Deccan Herald

ಹುಬ್ಬಳ್ಳಿ: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘ ನೀಡಿದ್ದ ಹುಬ್ಬಳ್ಳಿ ಬಂದ್ ಕರೆಗೆ ಜನರಿಂದ ಬೆಂಬಲ ವ್ಯಕ್ತವಾಗಲಿಲ್ಲ. ನಗರದ ಚನ್ನಮ್ಮ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಹೋರಾಟಗಾರರು ಪ್ರತ್ಯೇಕ ರಾಜ್ಯ ನೀಡಲೇಬೇಕು ಎಂದು ಆಗ್ರಹಿಸಿದರು. ಘೋಷಣೆಗಳನ್ನು ಕೂಗಿದ ಅವರು ಬೇಡಿಕೆ ಈಡೇರುವ ವರೆಗೂ ಹೋರಾಟ ನಿಲ್ಲದು ಎಂದರು.

ಬಂದ್‌ ಕರೆಗೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಘಟನೆಯ ಮುಖಂಡರನ್ನು ಆಹ್ವಾನಿಸಿ ಮಾತುಕತೆ ನಡೆಸಿ, ಬೆಳಗಾವಿಯ ಸುವರ್ಣ ಸೌಧಕ್ಕೆ ಕೆಲವು ಕಚೇರಿ ಸ್ಥಳಾಂತರ ಸೇರಿದಂತೆ ಹಲವು ಬೇಡಿಕೆಗಳನ್ನು 15 ದಿನದ ಒಳಗೆ ಈಡೇರಿಸುವ ಭರವಸೆಯನ್ನು ನೀಡಿದ್ದಾರೆ. ಪರಿಣಾಮ ಹಲವಾರು ಸಂಘಟನೆಗಳು ಬಂದ್‌ ಹೋರಾಟದಿಂದ ಹಿಂದೆ ಸರಿದಿವೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷ ಕಳ್ಳಿಮನಿ ಹೇಳಿದರು.

ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಭರವಸೆಗಳನ್ನು ದಶಕಗಳಿಂದ ನೀಡುತ್ತಾ ಬಂದಿದ್ದಾರೆ. ಅದನ್ನು ನಂಬಿದ ಈ ಭಾಗದ ಜನರಿಗೆ ನಿರಾಸೆಯಾಗಿದೆ. ಈಗ ಮುಖ್ಯಮಂತ್ರಿ ಅವರು ನೀಡಿರುವ ಭರವಸೆಯನ್ನು ಈಡೇರಿಸದಿದ್ದರೆ ಮತ್ತೆ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ. ಶಾಂತಿಯುತ ಹೋರಾಟದಲ್ಲಿ ನಮಗೆ ನಂಬಿಕೆ ಇದ್ದು, ಜನ ಸಾಮಾನ್ಯರಿಗೆ ತೊಂದರೆ ನೀಡುವುದಿಲ್ಲ ಎಂದರು.

ಹುಬ್ಬಳ್ಳಿಯ ವಿದ್ಯಾಶ್ರಮದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಈ ಭಾಗದ ರೈತರು ಹಾಗೂ ಜನರಿಗೆ ಅನ್ಯಾಯವಾಗಿರುವುದರಿಂದ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ. ಜನರ ಬೇಡಿಕೆಯಂತೆ ಪ್ರತ್ಯೇಕ ರಾಜ್ಯ ಆಗಲೇಬೇಕು ಎಂದು ಆಗ್ರಹಿಸಿದರು.

ಬಂದ್‌ಗೆ ಬೆಂಬಲ ನೀಡಿದ್ದ ಸಂಘಟನೆಗಳು ಈಗ ಹಿಂದಕ್ಕೆ ಸರಿದಿವೆ. ಅದು ಅವರ ವೈಯಕ್ತಿಯಕ ವಿಚಾರ, ಆ ಬಗ್ಗೆ ಟೀಕೆ ಮಾಡುವುದಿಲ್ಲ ಎಂದು ಅವರು ತಿಳಿಸಿದರು.

ಈ ವರೆಗೆ ರಾಜ್ಯ ಆಳಿರುವ ಎಲ್ಲ ಮುಖ್ಯಮಂತ್ರಿಗಳಿಂದಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು. ಚನ್ನಮ್ಮ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿದರು. ಆ ನಂತರ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಂದ್ ನಡೆಯದ ಕಾರಣ ಜನ ಜೀವನ, ವಾಣಿಜ್ಯ ಚಟುವಟಿಕೆ ಎಂದಿನಂತೆಯೇ ಇತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !