ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಮುಂದೆ ಟೌನ್‌ಹಾಲ್‌ ಎದುರು ಪ್ರತಿಭಟನೆಗೆ ಅವಕಾಶವಿಲ್ಲ

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ
Last Updated 29 ಫೆಬ್ರುವರಿ 2020, 11:06 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ಹೋರಾಟಗಳಿಗೆ, ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ಟೌನ್‌ಹಾಲ್‌ ಆವರಣದಲ್ಲಿ ಇನ್ನು ‘ಧಿಕ್ಕಾರ’ದ ಕೂಗುಗಳು ಕೇಳುವುದಿಲ್ಲ. ಈ ಪುರಭವನದ ಎದುರು ಇನ್ನು ಮುಂದೆ ಯಾವುದೇ ರೀತಿಯ ಮುಷ್ಕರ, ಪ‍್ರತಿಭಟನೆ ಹಾಗೂ ಇನ್ನಿತರೆ ಚಟುವಟಿಕೆಗೆ ಅನುಮತಿ ನೀಡಬಾರದು ಎಂಬ ನಿರ್ಣಯವನ್ನು ಬಿಬಿಎಂಪಿ ಕೈಗೊಂಡಿದೆ.

ನಗರದಲ್ಲಿ ಶನಿವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ಅಂಗೀಕರಿಸಲಾಯಿತು.

‘ಸಾರ್ವಜನಿಕರು ಸಭೆ–ಸಮಾರಂಭ ಅಥವಾ ಕಾರ್ಯಕ್ರಮ ನಡೆಸಲು ಪುಟ್ಟಣ್ಣಚೆಟ್ಟಿ ಪುರಭವನವನ್ನು ಮುಂಗಡವಾಗಿ ಹಣ ಪಾವತಿಸಿ ಕಾಯ್ದಿರಿಸಿರುತ್ತಾರೆ. ಆದರೆ, ಇಲ್ಲಿ ಅನೇಕ ಸಂಘ–ಸಂಸ್ಥೆಗಳು ಅನುಮತಿಯನ್ನು ಪಡೆಯದೆ ಪ್ರತಿಭಟನೆ ನಡೆಸುತ್ತಿರುವುದರಿಂದ ಕಾರ್ಯಕ್ರಮಗಳಿಗೆ ಅಡಚಣೆಯಾಗುತ್ತಿದೆ. ಹೀಗಾಗಿ, ಪುರಭವನವನ್ನು ಕಾಯ್ದಿರಿಸಲು ಹಿಂದೇಟು ಹಾಕುತ್ತಿರುವುದರಿಂದ ಪಾಲಿಕೆಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ’ ಎಂದು ಮೇಯರ್‌ ಗೌತಮ್‌ಕುಮಾರ್‌ ಹೇಳಿದರು.

‘ಪುರಭವನದ ಸುತ್ತ–ಮುತ್ತ ವಾಹನಗಳ ದಟ್ಟಣೆಯೂ ಹೆಚ್ಚಿರುವುದರಿಂದ ಇಲ್ಲಿ ಪ್ರತಿಭಟನೆ ನಡೆಸಿದರೆ ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ’ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ವ್ಯವಸ್ಥೆ:‘ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಕಾರರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸುಮಾರು 5,000 ಜನ ಸೇರಿ ಧರಣಿ, ಮುಷ್ಕರ ಮಾಡುಬಹುದಾದ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಸುಮಾರು 560ಕ್ಕೂ ಹೆಚ್ಚು ವಾಹನಗಳ ನಿಲುಗಡೆಗೆ ಅವಕಾಶ ಮಾಡಲಾಗುತ್ತದೆ. ಅಲ್ಲದೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗುತ್ತದೆ’ ಎಂದು ಮೇಯರ್‌ ಹೇಳಿದರು.

‘ಕಡಿಮೆ ಸಂಖ್ಯೆಯಲ್ಲಿ ಪ್ರತಿಭಟನಕಾರರಿದ್ದರೆ ಮೌರ್ಯ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆ. ವಾಹನಗಳ ನಿಲುಗಡೆಗೂ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.

‘ಪಾಲಿಕೆ ನಿರ್ಣಯ ಆಧರಿಸಿ, ಪೊಲೀಸ್‌ ಕಮಿಷನರ್‌ ಅವರಿಗೆ ಪತ್ರ ಬರೆಯಲಾಗುವುದು. ತಕ್ಷಣದಿಂದ ಈ ನಿರ್ಬಂಧ ಜಾರಿಗೆ ಬರಲಿದೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT