ಮಂಗಳವಾರ, ಸೆಪ್ಟೆಂಬರ್ 17, 2019
21 °C

ಪಿಎಸ್‌ಐಗೆ ‘ಬೂಟು ಕಾಲಿನಲ್ಲಿ ಒದೆಯುತ್ತೇನೆ’ ಎಂದ ಐಎಎಫ್ ಕಾರ್ಪೊರಲ್ ಸೆರೆ

Published:
Updated:

ಬೆಂಗಳೂರು: ‘ನಿನ್ನನ್ನು ಬೂಟು ಕಾಲಿನಲ್ಲಿ ಒದೆಯುತ್ತೇನೆ’ ಎಂದು ಪಿಎಸ್‌ಐಗೆ ಧಮ್ಕಿ ಹಾಕಿದ್ದ ಭಾರತೀಯ ವಾಯು ಪಡೆಯ (ಐಎಎಫ್) ಕಾರ್ಪೊರಲ್ ಅಪೂರ್ವ ಕುಮಾರ್ ಎಂಬುವರನ್ನು ಬಂಧಿಸಿದ ಯಲಹಂಕ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಐಎಎಫ್ ಸುಪರ್ದಿಗೆ ಕೊಟ್ಟಿದ್ದಾರೆ.

ಯಲಹಂಕ ವಾಯುನೆಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅಪೂರ್ವ, ಮೇ 6ರ ಸಂಜೆ 5.30ರ ಸುಮಾರಿಗೆ ಸಂತೆ ಸರ್ಕಲ್ ಬಳಿ ಬಂದಿದ್ದರು. ಈ ವೇಳೆ ಅವರ ಕಾರು ಆಕಸ್ಮಿಕವಾಗಿ ಬೈಕ್‌ಗೆ ಡಿಕ್ಕಿಯಾಗಿತ್ತು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಅವರೊಟ್ಟಿಗೆ ಮಾತಿನ ಚಕಮಕಿ ನಡೆಸಿದ್ದರು. ಕ್ರಮೇಣ ವಾಗ್ವಾದ ಜೋರಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.

ಆಸ್ಪತ್ರೆಯಲ್ಲೂ ಗಲಾಟೆ: ‘ಜನ ಸೇರಿರುವ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ತೆರಳಿದೆವು. ಗಾಯಾಳುವನ್ನು ಬಿಡಿಕೆ ವೃತ್ತದಲ್ಲಿರುವ ‘ಶೂಶ್ರೂಷ’ ಆಸ್ಪತ್ರೆಗೆ ಕರೆದೊಯ್ದೆವು. ನಮ್ಮೊಟ್ಟಿಗೇ ಆಸ್ಪತ್ರೆಗೆ ಬಂದಿದ್ದ ಅಪೂರ್ವ, ಗಾಯಾಳುವಿನ ಸಂಬಂಧಿಕರಿಗೆಲ್ಲ ಬೈಯ್ಯುತ್ತಿದ್ದರು. ಸಾರ್ವಜನಿಕ ಸ್ಥಳದಲ್ಲಿ ಹಾಗೆ ಕೂಗಾಡುವುದು ತಪ್ಪು. ಠಾಣೆಗೆ ಬನ್ನಿ ಮಾತನಾಡೋಣ ಎಂದಾಗ, ‘ನಾನೂ ಸಮವಸ್ತ್ರದಲ್ಲಿದ್ದೇನೆ. ನನ್ನನ್ನೇ ಠಾಣೆಗೆ ಕರೆಯುತ್ತೀಯಾ? ಬೂಟು ಕಾಲಿನಲ್ಲಿ ಒದ್ದುಬಿಡುತ್ತೇನೆ’ ಎನ್ನುತ್ತ ಬೂಟನ್ನು ಬಿಚ್ಚಿ ನನಗೆ ಹೊಡೆಯುವುದಕ್ಕೇ ಬಂದರು’ ಎಂದು ಪಿಎಸ್‌ಐ ಟಿ.ಶಿವಪುತ್ರಪ್ಪ ದೂರಿನಲ್ಲಿ ಹೇಳಿದ್ದಾರೆ.

‘ಕೂಡಲೇ ಠಾಣೆಗೆ ಕರೆ ಮಾಡಿ, ಹೊಯ್ಸಳ ವಾಹನವನ್ನು ಆಸ್ಪತ್ರೆ ಬಳಿ ಕರೆಸಿಕೊಂಡೆ. ಆ ವಾಹನದಲ್ಲಿದ್ದ ಹೆಡ್‌ ಕಾನ್‌ಸ್ಟೆಬಲ್ ಹನುಮಂತರಾಯಪ್ಪ ಅವರ ಮೇಲೂ ಹಲ್ಲೆ ನಡೆಸಿದ ಆರೋಪಿ, ತೀರಾ ಕೆಟ್ಟ ಪದಗಳಿಂದ ನಿಂದಿಸಿದರು. ನಂತರ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದೆವು. ವಿಚಾರಣೆ ಪೂರ್ಣಗೊಳಿಸಿ ಐಎಎಫ್‌ ವಶಕ್ಕೆ ಕೊಟ್ಟಿದ್ದೇವೆ’ ಎಂದು ವಿವರಿಸಿದ್ದಾರೆ.

Post Comments (+)