ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನಾಕಾರರಿಗೆ ಕಪಾಳಮೋಕ್ಷ ಮಾಡಿದ ಪಿಎಸ್‌ಐ!

Last Updated 11 ಫೆಬ್ರುವರಿ 2019, 12:43 IST
ಅಕ್ಷರ ಗಾತ್ರ

ಹಾರೂಗೇರಿ: ಆಸ್ತಿ ದಾಖಲೆ ಪತ್ರಗಳಲ್ಲಿ ತಪ್ಪಾಗಿ ನಮೂದು ಆಗಿರುವುದನ್ನು ತಿದ್ದುಪಡಿ ಮಾಡಿಕೊಡುವಂತೆ ಪುರಸಭೆ ಮುಖ್ಯಾಧಿಕಾರಿಯವರಿಗೆ ಒತ್ತಾಯಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಪಿಎಸ್‌ಐ ಕುಮಾರ ಹಿತ್ತಲಮನಿ ಕಪಾಳಮೋಕ್ಷ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಮ್ಮ ಆಸ್ತಿ ದಾಖಲೆ ಪತ್ರಗಳಲ್ಲಿ ಆಗಿರುವ ನ್ಯೂನ್ಯತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳಾದ ಪ್ರಭು ನಾವಿ ಹಾಗೂ ಗಜಾನನ ನಾವಿ ಅವರು ಕಳೆದ 8ರಂದು ಪುರಸಭೆ ಮುಖ್ಯಾಧಿಕಾರಿ ಜಿ.ವಿ. ಹಣ್ಣಿಕೇರಿ ಅವರನ್ನು ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ಕೆಲಹೊತ್ತು ಜಿ.ವಿ. ಹಣ್ಣಿಕೇರಿ ಹಾಗೂ ನಾವಿ ಸಹೋದರರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಆಗ ಸ್ಪಿಎಸ್‌ಐ ಕುಮಾರ ಹಿತ್ತಲಮನಿ, ನಾವಿ ಸಹೋದರರಿಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದರು ಹಾಗೂ ಅವಾಚ್ಯವಾಗಿ ನಿಂದಿಸಿದರು. ಈ ದೃಶ್ಯಾವಳಿಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ನಾಲ್ಕಾರು ಬಾರಿ ಅಲೆದಾಟ:
‘ಮನೆಯ ಖಾತೆಯಲ್ಲಿ ನಮ್ಮ ಹೆಸರು ಬಿಟ್ಟು ಹೋಗಿತ್ತು. ಅದನ್ನು ಸರಿಪಡಿಸಿಕೊಡುವಂತೆ ಮುಖ್ಯಾಧಿಕಾರಿ ಹಣ್ಣಿಕೇರಿ ಅವರಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವು. ನಾಲ್ಕಾರು ಬಾರಿ ಕಚೇರಿಗೆ ಅಲೆದಾಡಿದ್ದೇವು. ಆದರೂ ಅವರು ನಮ್ಮ ಕೆಲಸ ಮಾಡಿಕೊಡಲಿಲ್ಲ. ಕೊನೆಗೆ ಬೇಸರವಾಗಿ ಶುಕ್ರವಾರ ಪುರಸಭೆ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದೇವು’ ಎಂದು ಗಜಾನನ ನಾವಿ ಹೇಳಿದರು.

‘ಪ್ರತಿಭಟನೆ ವೇಳೆ ನಮಗೆ ಹಾಗೂ ಹಣ್ಣಿಕೇರಿ ಅವರಿಗೆ ವಾಗ್ವಾದ ನಡೆಯಿತು. ಆಗ ಸ್ಥಳಕ್ಕೆ ಬಂದ ಪಿಎಸ್‌ಐ ಹಿತ್ತಲಮನಿ ಕಪಾಳಕ್ಕೆ ಬಡಿದರು’ ಎಂದು ತಿಳಿಸಿದರು.

ಸುಮ್ಮನಾಗಿಸಲು ಮಾಡಿದೆ:
‘ನಾವಿ ಸಹೋದರರು ಹಾಗೂ ಮುಖ್ಯಾಧಿಕಾರಿ ನಡುವೆ ವಾಗ್ವಾದ ನಡೆಯುತ್ತಿತ್ತು. ಅವರನ್ನು ಸುಮ್ಮನಾಗಿಸಲು ಹೊಡೆಯಬೇಕಾಯಿತು. ಇದನ್ನೇಕೆ ನೀವು (ಮಾಧ್ಯಮದವರು) ದೊಡ್ಡದು ಮಾಡುತ್ತಿದ್ದೀರಿ?’ ಎಂದು ಪಿಎಸ್‌ಐ ಕುಮಾರ ಹಿತ್ತಲಮನಿ ಪ್ರತಿಕ್ರಿಯಿಸಿದರು.

ಗಮನಕ್ಕೆ ಬಂದಿದೆ– ಎಸ್ಪಿ:
‘ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಬಂದಿದ್ದ ಈ ಘಟನೆಯ ವಿಡಿಯೊ ನೋಡಿದ್ದೇನೆ. ಆದರೆ, ಯಾರೂ ದೂರು ಕೊಟ್ಟಿಲ್ಲ. ದೂರು ಬಂದ ನಂತರ ವಿಚಾರಣೆ ನಡೆಸುತ್ತೇನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT