ಪಿಯು ತರಗತಿ 9.30ಕ್ಕೆ ಆರಂಭಿಸಲು ತೀರ್ಮಾನ

7

ಪಿಯು ತರಗತಿ 9.30ಕ್ಕೆ ಆರಂಭಿಸಲು ತೀರ್ಮಾನ

Published:
Updated:

ಬೆಂಗಳೂರು: ಪದವಿಪೂರ್ವ ಕಾಲೇಜಿನ ವೇಳಾಪಟ್ಟಿಯ ಕುರಿತು ಇದ್ದ ಗೊಂದಲ ನಿವಾರಣೆಯಾಗಿದ್ದು, ಬೆಳಿಗ್ಗೆ 9.30ರಿಂದ 3.30ರವರೆಗೆ ತರಗತಿಗಳು ನಡೆಸಲು ತೀರ್ಮಾನಿಸಲಾಗಿದೆ.

ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದೊಂದಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಅವರು ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದರು.

ಪ್ರಸಕ್ತ ವರ್ಷ ಮೇ 3ರಿಂದ ಪಿಯು ತರಗತಿಗಳನ್ನು ಆರಂಭಿಸಲಾಗಿತ್ತು. ಇದಕ್ಕೆ ಉಪನ್ಯಾಸಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಸಂಘ ಇದನ್ನು ಸಚಿವರ ಗಮನಕ್ಕೆ ತಂದಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಮೇ 28ರಿಂದಲೇ ತರಗತಿಗಳು ಆರಂಭಗೊಳ್ಳುತ್ತವೆ ಎಂದರು.

ವೇತನ ತಾರತಮ್ಯ ಸರಿಪಡಿಸಲು ಎರಡನೇ ಹೆಚ್ಚುವರಿ ವೇತನ ಭಡ್ತಿ ನೀಡಲು ಇಲಾಖೆ ವತಿಯಿಂದ ಹೊಸ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗೆ ಸಲ್ಲಿಸುವುದು, ಉಪನ್ಯಾಸಕರ ಕಾರ್ಯಭಾರದ ಕುರಿತು ಅಧ್ಯಯನ ಮಾಡಲು ಉನ್ನತ ಮಟ್ಟದ ಸಮಿತಿ ರಚಿಸುವುದು, ಪ್ರತಿ ತರಗತಿಗೆ ಗರಿಷ್ಠ ವಿದ್ಯಾರ್ಥಿಗಳ ಸಂಖ್ಯೆಯನ್ನು 80 ರಿಂದ 40ಕ್ಕೆ ಇಳಿಸುವುದು, ಜೆಒಸಿಯಿಂದ ಪಿಯು ಕಾಲೇಜಿಗೆ ವಿಲೀನಗೊಂಡ ಉಪನ್ಯಾಸಕರಿಗೆ ಬಿ.ಎಡ್‌ ಪದವಿಯಿಂದ ವಿನಾಯಿತಿ ನೀಡುವುದು ಹಾಗೂ ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು 6 ತಿಂಗಳ ಒಳಗೆ ಭರ್ತಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಡ್ಡಾಯ ವರ್ಗಾವಣೆಗೊಂಡ ಉಪನ್ಯಾಸಕರ ಸ್ಥಾನವನ್ನು ಯಾರೂ ಆಯ್ಕೆ ಮಾಡಿಕೊಳ್ಳದೆ ಖಾಲಿ ಇದ್ದಲ್ಲಿ ಮೊದಲಿದ್ದ ಉಪನ್ಯಾಸಕರನ್ನೆ ಮುಂದಿನ ವರ್ಗಾವಣೆ ಪ್ರಕ್ರಿಯೆಯವರೆಗೆ ಮುಂದುವರೆಸುವುದಾಗಿ ಮತ್ತು ಕೋರಿಕೆ ವರ್ಗಾವಣೆಯ ಕನಿಷ್ಠ ಅರ್ಹತೆಯನ್ನು 5 ವರ್ಷಗಳಿಂದ 3 ವರ್ಷಕ್ಕೆ ಇಳಿಸುವ ಬಗ್ಗೆ ಚರ್ಚಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

‘ಸರ್ಕಾರಕ್ಕೆ ಸಲ್ಲಿಸಿದ್ದ ನಮ್ಮ ಬಹುತೇಕ ಬೇಡಿಕೆಗಳನ್ನು ಸಚಿವರು ಈಡೇರಿಸಿರುವುದರಿಂದ ಇದೇ 21ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಾಗೂ ಸೆ. 9ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ’ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದರು.

‘ಡೈಸ್‌–ನಾನ್‌ ತೆಗೆಯಲು ಒಪ್ಪಿಗೆ’
ಉಪನ್ಯಾಸಕರ ಬಿ.ಇಡಿ ಪದವಿ ಅವಧಿಯನ್ನು 'ಡೈಸ್‌-ನಾನ್‌' ಎಂದು ಪರಿಗಣಿಸುವುದನ್ನು ಕೈಬಿಡುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಹೇಶ್‌ ತಿಳಿಸಿದರು. 

2013ರಲ್ಲಿ ನೇಮಕಗೊಂಡ 733 ಉಪನ್ಯಾಸಕರು ಬಿ.ಇಡಿ ಪದವಿ ಪಡೆಯುತ್ತಿದ್ದಾರೆ. ಆ ಅವಧಿಯನ್ನು 'ಡೈಸ್‌-ನಾನ್‌' ಮತ್ತು ವೇತನರಹಿತ ಅವಧಿ ಎಂದು ಪರಿಗಣಿಸಿ ಸರ್ಕಾರ ಕಳೆದ ಜುಲೈನಲ್ಲಿ ಆದೇಶಿಸಿತ್ತು. ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಹಿಂದಿನ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅಧಿವೇಶನದಲ್ಲಿಯೇ ಲಿಖಿತ ಉತ್ತರ ನೀಡಿ, ಇದನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅದು ಜಾರಿಯಾಗಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !