ಪರೀಕ್ಷೆ ಬರೆಯಲು ಡೈನಿಂಗ್‌ ಟೇಬಲ್‌, ಪ್ಲಾಸ್ಟಿಕ್‌ ಕುರ್ಚಿ ಬಳಕೆ!

ಶನಿವಾರ, ಮಾರ್ಚ್ 23, 2019
24 °C
ಸರ್ಕಾರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳ ಅವ್ಯವಸ್ಥೆ

ಪರೀಕ್ಷೆ ಬರೆಯಲು ಡೈನಿಂಗ್‌ ಟೇಬಲ್‌, ಪ್ಲಾಸ್ಟಿಕ್‌ ಕುರ್ಚಿ ಬಳಕೆ!

Published:
Updated:
Prajavani

ಬೆಂಗಳೂರು: ಮದುವೆ ಮನೆಗಳಲ್ಲಿ ಊಟಕ್ಕೆ ಬಳಸುವ ತಗಡಿನ ಡೈನಿಂಗ್‌ ಟೇಬಲ್‌ ಮತ್ತು ಕಿತ್ತು ಹೋದ ಪ್ಲಾಸ್ಟಿಕ್‌ ಕುರ್ಚಿಗಳ ಮೇಲೆ ಕುಳಿತು ದ್ವಿತೀಯ ಪಿಯು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸುವ ಪರೀಕ್ಷೆಗಳನ್ನು ಬರೆಯುವ ದುಃಸ್ಥಿತಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಲೂ ಇದೆ!

ರಾಯಚೂರು, ಬಳ್ಳಾರಿ, ಕೊಪ್ಪಳ, ಬೀದರ್‌ ಮುಂತಾದ ಜಿಲ್ಲೆಗಳ ಸಾಕಷ್ಟು ಕಡೆಗಳಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ಬರೆಯಬೇಕಾಗಿದೆ ಎಂದು ವಿದ್ಯಾರ್ಥಿಗಳ ಪೋಷಕರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಬಹಳಷ್ಟು ಸರ್ಕಾರಿ ಪದವಿಪೂರ್ವ ಕಾಲೇಜುಗಳು ಶಿಥಿಲಾವಸ್ಥೆಯಲ್ಲಿದ್ದು, ಡೆಸ್ಕ್‌ಗಳೂ ಇಲ್ಲ. ಹೀಗಾಗಿ ಪರೀಕ್ಷೆಗಾಗಿ ಸ್ಥಳೀಯ ಷಾಮಿಯಾನ ಅಂಗಡಿಗಳಿಂದ ಡಿನ್ನರ್‌ ಟೇಬಲ್‌ ಮತ್ತು ಪ್ಲಾಸ್ಟಿಕ್‌ ಕುರ್ಚಿಗಳನ್ನು ತರಿಸಿ ಪರೀಕ್ಷೆಗೆ ಬಳಸಲಾಗುತ್ತಿದೆ. ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಸಮೀಪ ಶಾಮಿಯಾನ ಹಾಕಿಸಿ ಕೊಠಡಿ ಹೊರಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು.

ಪರೀಕ್ಷಾ ಹಾಲ್‌ನಲ್ಲಿ ಒಂದು ಟೇಬಲ್‌ನಲ್ಲಿ ತಲಾ ಮೂರು ವಿದ್ಯಾರ್ಥಿಗಳನ್ನು ಒತ್ತೊತ್ತಾಗಿ ಕೂರಿಸಿ ಬರೆಸಲಾಗುತ್ತದೆ. ಒಂದು ಕೊಠಡಿಯಲ್ಲಿ 30 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು. ಕೆಲವು ಕಡೆಗಳಲ್ಲಿ 50 ರಿಂದ 90 ವಿದ್ಯಾರ್ಥಿಗಳು ಕುಳಿತು ಬರೆಯುವ ಸ್ಥಿತಿ ಇದೆ ಎಂದು ಪೋಷಕರೊಬ್ಬರು ತಿಳಿಸಿದರು.

ಇಂತಹ ಪರೀಕ್ಷಾ ಕೇಂದ್ರಗಳಲ್ಲಿ ಪರಸ್ಪರ ನಕಲು ಮಾಡುವ ಪ್ರಮಾಣವೂ ಹೆಚ್ಚು. ಈ ವಿಚಾರ ಮೇಲಧಿಕಾರಿಗಳ ಗಮನಕ್ಕೆ ಬಂದ ಬಳಿಕ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ದರು. ಇದರಿಂದ ನಕಲು ಮಾಡುವ ಪ್ರವೃತ್ತಿಗೆ ಕಡಿವಾಣ ಬಿದ್ದಿದೆ. ಆದರೆ, ವಿದ್ಯಾರ್ಥಿಗಳು ಪರೀಕ್ಷಾ ಮೇಲ್ವಿಚಾರಕರು ಇದ್ದರೂ ಪರಸ್ಪರ ಮಾತನಾಡಿಕೊಂಡು ಉತ್ತರ ಬರೆಯುತ್ತಾರೆ ಎಂದು ಕೆಲವು ಪೋಷಕರು ತಿಳಿಸಿದರು.

ಖಾಸಗಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿ ಪರೀಕ್ಷೆ ಬರೆಯಲು ಡೆಸ್ಕ್‌ ಮತ್ತು ಬೆಂಚ್‌ ವ್ಯವಸ್ಥೆ ಉತ್ತಮವಾಗಿಯೇ ಇದೆ. ನಿಯಮದ ಪ್ರಕಾರ ಎಷ್ಟು ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸಬೇಕೊ ಅಷ್ಟೇ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಕೊಪ್ಪಳದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪರೀಕ್ಷೆ ಕೇಂದ್ರ, ಗಂಗಾವತಿಯ ಸರ್ಕಾರಿ ಭೀಮಪ್ಪನವರ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಲ್ಲಿ ಡೈನಿಂಗ್‌ ಟೇಬಲ್‌ ಬಳಸುತ್ತಿರುವ ಚಿತ್ರ ಸಮೇತ ಖಚಿತ ಮಾಹಿತಿ ಲಭಿಸಿದೆ.

‘ಪ್ರಗತಿಪರ ರಾಜ್ಯದ ದುಃಸ್ಥಿತಿ’
ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯ ಎಂದು ಸರ್ಕಾರ ಬಿಂಬಿಸಿಕೊಳ್ಳುತ್ತದೆ. ಆದರೆ, ಕಾಲೇಜುಗಳಲ್ಲಿ ಪಾಠ ಕೇಳಲು ಡೆಸ್ಕ್‌– ಬೆಂಚ್‌ ವ್ಯವಸ್ಥೆ ಇರುವುದಿಲ್ಲ. ಪರೀಕ್ಷೆಯನ್ನು ಬರೆಯಲು ಡೈನಿಂಗ್ ಟೇಬಲ್‌, ಪ್ಲಾಸ್ಟಿಕ್‌ ಕುರ್ಚಿಯನ್ನು ಹಾಕುತ್ತಾರೆ. ಮಕ್ಕಳು ಎಷ್ಟರ ಮಟ್ಟಿಗೆ ಉತ್ತಮವಾಗಿ ಬರೆಯಲು ಸಾಧ್ಯ ಎಂಬುದು ಪೋಷಕರೊಬ್ಬರ ಪ್ರಶ್ನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !