ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜುಗಳಲ್ಲಿ ಪ್ರವೇಶಾತಿ: ಸಾವಿರಾರು ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿ?

ಅನುಮತಿ ಪಡೆಯದ ಹಲವು ಕಾಲೇಜುಗಳಲ್ಲಿ ಪ್ರವೇಶಾತಿ
Last Updated 27 ಜೂನ್ 2019, 19:23 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಖಾಸಗಿ ಪದವಿಪೂರ್ವ ಕಾಲೇಜು ಆರಂಭಿಸಲು ಸಲ್ಲಿಸಲಾಗಿದ್ದ 396 ಅರ್ಜಿಗಳು ತಿರಸ್ಕೃತ
ಗೊಂಡಿದ್ದರೂ, ಕೆಲವು ಕಾಲೇಜುಗಳು ಈಗಾಗಲೇ ಪ್ರವೇಶಾತಿ ಆರಂಭಿಸಿವೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ಸಿಲುಕುವ ಅಪಾಯ ಎದುರಾಗಿದೆ.

ಸಲ್ಲಿಕೆಯಾಗಿದ್ದ ಅರ್ಜಿಗಳ ಪೈಕಿ 29 ಅರ್ಜಿಗಳನ್ನು ಮಾತ್ರ ಪದವಿಪೂರ್ವ ಶಿಕ್ಷಣ ಇಲಾಖೆ ಪುರಸ್ಕರಿಸಿತ್ತು. ಹೊಸ ಕಾಲೇಜು ಆರಂಭಿಸಲು ರೂಪಿಸಲಾಗಿರುವ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಈ ಕಾಲೇಜುಗಳ ಅರ್ಜಿಗಳನ್ನು
ತಿರಸ್ಕರಿಸಿತ್ತು.

‘ಇಲಾಖೆಯ ಅನಮತಿ ಪಡೆಯದೆ ಕಾಲೇಜಿಗೆ ಪ್ರವೇಶ ಪಡೆಯುವುದು ನೇಮಕಾತಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಹೀಗೆ ಅನಧಿಕೃತವಾಗಿ ನೇಮಕಾತಿ ಮಾಡಿಕೊಂಡವರ ಮಾಹಿತಿ ನಮಗೆ ಈಗ ಲಭ್ಯ ಆಗುವುದಿಲ್ಲ. ಮುಂದಿನ ವರ್ಷ ಅಂತಹ ವಿದ್ಯಾರ್ಥಿಗಳಿಗೆ ಸಂಕಷ್ಟ ನಿಶ್ಚಿತ’ ಎಂದುಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಪಿ.ಸಿ.ಜಾಫರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂತಹ ಕಾಲೇಜುಗಳಲ್ಲಿ ನೀಡುವ ಪ್ರವೇಶಾತಿ ಕಾನೂನುಬಾಹಿರ ಎಂದೇ ಪರಿಗಣಿಸಬೇಕಾಗುತ್ತದೆ. ಈಗ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಕೆ ಮಾಡಬೇಕಿರುವುದರಿಂದ ಇಂತಹ ಪ್ರವೇಶಾತಿ ಸಕ್ರಮ ಎನಿಸುವುದಿಲ್ಲ. ಅರ್ಜಿಯಲ್ಲೇನಾದರೂ ತಪ್ಪುಗಳಿದ್ದರೆ ಅದನ್ನು ಸರಿಪಡಿಸಲು ಸಮಯ ನೀಡಲಾಗಿದೆ’ ಎಂದರು.

‘ಪ್ರಜಾವಾಣಿ’ಗೆ ಬಂದ ದೂರಿನಂತೆಯಲಹಂಕದಒಂದು ಕಾಲೇಜಿಗೆ ತೆರಳಿದಾಗ ಅಲ್ಲಿ 400 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿರುವುದು, ರಿಚ್ಮಂಡ್‌ ಟೌನ್‌ನ ಕಾಲೇಜಿನಲ್ಲಿ 300 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿರುವುದು ಗಮನಕ್ಕೆ ಬಂತು. ನಗರದಲ್ಲಿ ಇಂತಹ 20ಕ್ಕೂ ಅಧಿಕ ಕಾಲೇಜುಗಳು ಆರಂಭವಾಗಿರುವುದರ ಬಗ್ಗೆ ದೂರುಗಳು ಬಂದಿವೆ.

‘ಇಲಾಖೆಗೆ ಇಂತಹ ದೂರುಗಳು ಬಂದಿಲ್ಲ. ಹೀಗಾಗಿ ಎಷ್ಟು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಬಹುದು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ’ ಎಂದು ಪಿ.ಸಿ.ಜಾಫರ್‌ಹೇಳಿದರು.

2018–19ನೇ ಸಾಲಿನಲ್ಲಿ ಅನುಮತಿ ಪಡೆದಿದ್ದ ಕಾಲೇಜುಗಳು ಈ ವರ್ಷ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಹುದು. ಆದರೆ ಈ ವರ್ಷ ಹೊಸದಾಗಿ ಸ್ಥಾಪನೆಗೊಂಡ ಕಾಲೇಜುಗಳು ಇಲಾಖೆಯ ಅನುಮತಿ ಪಡೆಯದ ಹೊರತು ವಿದ್ಯಾರ್ಥಿಗಳಿಗೆ ಪ್ರವೇಶ ನೀಡು
ವಂತಿಲ್ಲ ಎಂದು ಇಲಾಖಾ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆಯಂತೆ, ಹಾಲಿ ಕಾಲೇಜುಗಳು ಮಾತ್ರ ಮೂಲಸೌಲಭ್ಯ ನೋಡಿಕೊಂಡು ವಿದ್ಯಾರ್ಥಿಗಳ ಸಂಖ್ಯೆಯನ್ನು 80ರಿಂದ 100ರ ಒಳಗೆ ಹೆಚ್ಚಿಸಿಕೊಳ್ಳಲು ಸಾಧ್ಯ. ಹೊಸದಾಗಿ ಅರ್ಜಿ ಸಲ್ಲಿಸುವವರು ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT