ಉಪನ್ಯಾಸಕರ ನೇಮಕಾತಿ: ಮತ್ತೆ ಗೊಂದಲ

7

ಉಪನ್ಯಾಸಕರ ನೇಮಕಾತಿ: ಮತ್ತೆ ಗೊಂದಲ

Published:
Updated:
Deccan Herald

ಬೆಂಗಳೂರು: ಅಧಿಕಾರಿಗಳ ನಡುವಿನ ಪತ್ರ ವ್ಯವಹಾರದಿಂದಾಗಿ ಪಿ.ಯು.ಉಪನ್ಯಾಸಕರ ನೇಮಕಾತಿ ಪರೀಕ್ಷೆಯ ದಿನಾಂಕದಲ್ಲಿ ಈಗ ಮತ್ತೆ ಗೊಂದಲ ತಲೆದೋರಿದೆ.

‘ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ ಆದೇಶದ ವರೆಗೂ ಮುಂದೂಡಲಾಗಿದೆ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸೆಪ್ಟೆಂಬರ್‌ 28ರಂದು ಪ್ರಕಟಣೆ ಹೊರಡಿಸಿತ್ತು. 

‘ಪ್ರಾಧಿಕಾರವು ಅಕ್ಟೋಬರ್‌ 11ರಿಂದ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದೆ. ಪ್ರಸ್ತಾವಿತ ನಿಯಮಗಳ ತಿದ್ದುಪಡಿಗೆ ಒಂದು ತಿಂಗಳ ಕಾಲಾವಕಾಶ ಬೇಕು. ಸದ್ಯಕ್ಕೆ ತಿದ್ದುಪಡಿಯನ್ನು ಪರಿಗಣಿಸದೆ, ಶೈಕ್ಷಣಿಕ ಹಿತದೃಷ್ಟಿಯಿಂದ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣದಿಂದಲೇ ಪುನಃ ಪ್ರಾರಂಭಿಸಲು ಪ್ರಾಧಿಕಾರಕ್ಕೆ ತಿಳಿಸಿ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ, ಇಲಾಖೆಯ ನಿರ್ದೇಶಕರಿಗೆ ಸೆಪ್ಟೆಂಬರ್‌ 29ರಂದು ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.

ಸ್ನಾತಕೋತ್ತರ ಪದವಿಯಲ್ಲಿ ಶೇ 50ರಷ್ಟು ಅಂಕ ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1ರ ಅಭ್ಯರ್ಥಿಗಳೂ ಉಪನ್ಯಾಸಕರ ನೇಮಕಾತಿ ಪರೀಕ್ಷೆ ಬರೆಯುವಂತಾಗಲು ನಿಯಮ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿವಂತೆ ಪ್ರಾಧಿಕಾರಕ್ಕೆ ಕಳೆದ ತಿಂಗಳು ಸೂಚಿಸಿತ್ತು. ಸದ್ಯದ ನಿಯಮದಂತೆ ಶೇ 55 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ಎಲ್ಲ ಸಮುದಾಯದ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ.

ಈ ಕುರಿತು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ವಿನೋದಾ ಪ್ರಿಯಾ ಅವರನ್ನು ವಿಚಾರಿಸಿದಾಗ, ‘ಕೆಇಎ ಜಾಲತಾಣದಲ್ಲಿ ದಿನಾಂಕವನ್ನು ಪ್ರಕಟಿಸಿಯೇ ಪರೀಕ್ಷೆ ನಡೆಸುತ್ತೇವೆ. ಅಭ್ಯರ್ಥಿಗಳು ಅದನ್ನು ಗಮನಿಸಲಿ’ ಎಂದರು.

ಜಾಲತಾಣದಲ್ಲಿ ಸೋಮವಾರ ಸಂಜೆಯವರೆಗೂ ‘ಪರೀಕ್ಷೆಯನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ’ ಎಂಬ ಪ್ರಕಟಣೆ ಇತ್ತು. ರಾತ್ರಿ ಹೊತ್ತಿಗೆ ಆ ಪ್ರಕಟಣೆ ಅಳಿಸಿ, ‘ಆದಷ್ಟೂ ಬೇಗ ಪರೀಕ್ಷಾ ದಿನಾಂಕ ಪ್ರಕಟಿಸಲಾಗುತ್ತದೆ’ ಎಂಬ ಸಾಲನ್ನು ಹಾಕಲಾಗಿದೆ.

ಈ ಹಿಂದೆ ನಿಗದಿಪಡಿಸಿದಂತೆ ಸೆ.11ರಂದೇ ಪರೀಕ್ಷೆ ನಡೆಯಲಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಅಭ್ಯರ್ಥಿಗಳಿಗೆ ಕಾಡುತ್ತಿದೆ. ಅಂದಹಾಗೆ ಈ ನೇಮಕಾತಿ ಪ್ರಕ್ರಿಯೆ 2015ರ ಮೇ ತಿಂಗಳಿನಿಂದ ನಡೆಯುತ್ತಲೇ ಇದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !