ಬುಧವಾರ, ನವೆಂಬರ್ 20, 2019
22 °C
ಇತಿಹಾಸ–1 ಪತ್ರಿಕೆ ಹೊಸ ತಜ್ಞರಿಂದ ಪರಿಶೀಲನೆಗೆ ಶಿಫಾರಸು

ಕೀ ಉತ್ತರಗಳಲ್ಲಿ ದೋಷ: ‘ರಾಜ್ಯಶಾಸ್ತ್ರ–2’ ಪತ್ರಿಕೆ ಮರುಪರೀಕ್ಷೆ

Published:
Updated:

ಬೆಂಗಳೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿ ಪರೀಕ್ಷೆಯ ಕೆಲವು ಕೀ ಉತ್ತರಗಳಲ್ಲಿ ದೋಷ ಇರುವುದನ್ನು ಸರ್ಕಾರ ನೇಮಿಸಿದ್ದ ತಜ್ಞರ ವರದಿ ದೃಢಪಡಿಸಿದೆ.

ಎರಡು ವಿಷಯಗಳ ಫಲಿತಾಂಶ ತಡೆಹಿಡಿದು ಉಳಿದ ವಿಷಯಗಳ ನೇಮಕಾತಿ ಪಟ್ಟಿಯನ್ನು ಎರಡು ದಿನದೊಳಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎ.ಹರೀಶ್‌ಗೌಡ ನೇತೃತ್ವದ ಸಮಿತಿಯು ಪರಿಶೀಲನಾ ವರದಿಯನ್ನು ಇದೇ 10ರಂದು ಸರ್ಕಾರಕ್ಕೆ ಸಲ್ಲಿಸಿದೆ. ರಾಜ್ಯಶಾಸ್ತ್ರ–2ರ ವಿಷಯಕ್ಕೆ ಮರು ಪರೀಕ್ಷೆ ನಡೆಸಬೇಕು ಮತ್ತು ಇತಿಹಾಸ–1 ಪತ್ರಿಕೆಯನ್ನು ಹೊಸ ಸಮಿತಿಯಿಂದ ಪರಿಶೀಲನೆ ನಡೆಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಿದೆ.

‘ಈ ಎರಡು ವಿಷಯಗಳ ಫಲಿತಾಂಶ ತಡೆಹಿಡಿದು, ಉಳಿದ ವಿಷಯಗಳ ನೇಮಕಾತಿ ಪಟ್ಟಿಯ ಪ್ರಕಟಣೆಗೆ ಸೂಚನೆ ನೀಡಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

‘ಅಭ್ಯರ್ಥಿಗಳ ಆತಂಕ ಸರ್ಕಾರದ ಗಮನಕ್ಕೆ ಬಂದಿದೆ. ನೇಮಕಾತಿಯಲ್ಲಿ ವಿಳಂಬ ಮಾಡುವುದಿಲ್ಲ. ಸಮಸ್ಯೆ ಇಲ್ಲದ ವಿಷಯಗಳ ನೇಮಕಾತಿ ಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು. ಉಪಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವುದಕ್ಕೆ ಮೊದಲೇ ಎಲ್ಲ ಪ್ರಕ್ರಿಯೆ ಮುಗಿಯಲಿದೆ’ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಇತರ ಶಿಫಾರಸು: ಗಣಿತ–1ರ 66ನೇ ಪ್ರಶ್ನೆಗೆ ಎಲ್ಲರಿಗೂ ಪರಿಹಾರ ಅಂಕ ಕೊಡಬೇಕು, ಇತಿಹಾಸ–2ರ 44ನೇ ಪ್ರಶ್ನೆಗೆ ‘ಬಿ’ ಮತ್ತು ‘ಡಿ’ ಎಂದು ಉತ್ತರ ಬರೆದಿದ್ದರೂ ಅಂಕ ನೀಡಬೇಕು, ಕನ್ನಡ–2ರ ಪ್ರಶ್ನೆ 38ಕ್ಕೆ ‘ಸಿ’ ಎಂದು ಉತ್ತರಿಸಿದ್ದರೆ ಅಂಕ ನೀಡಬೇಕು, ಪ್ರಶ್ನೆ 33ಕ್ಕೆ ‘ಎ’ಗೆ ಮಾತ್ರ ಅಂಕ ನೀಡಬೇಕು, 8ನೇ ಪ್ರಶ್ನೆಗೆ ಎಲ್ಲರಿಗೂ ಪರಿಹಾರ ಅಂಕ ನೀಡಬೇಕು, ಪ್ರಶ್ನೆ 41ಕ್ಕೆ ‘ಡಿ’ ಉತ್ತರಕ್ಕೆ ಮಾತ್ರ ಅಂಕ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. 

ಮರುಪರೀಕ್ಷೆಗೆ ಅಭ್ಯರ್ಥಿಗಳ ಆಕ್ಷೇಪ
ರಾಜ್ಯಶಾಸ್ತ್ರ–2 ವಿಷಯದಲ್ಲಿ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರದಿಂದ ಆತಂಕಗೊಂಡಿರುವ ಕೆಲವು ಅಭ್ಯರ್ಥಿಗಳು, ಇದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.

‘ಕೀ ಉತ್ತರದಲ್ಲಿ ದೋಷ ಇದೆ ಎಂಬ ಆಕ್ಷೇಪಣೆ ಬಾರದೆ ಇದ್ದರೂ ಮರು ಪರೀಕ್ಷೆಗೆ ಸಲಹೆ ನೀಡಿದ್ದು ತಪ್ಪು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)