ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ: ಮತ ಯಂತ್ರಕ್ಕಿಂತಲೂ ಹೆಚ್ಚಿನ ಭದ್ರತೆ!

ಪೊಲೀಸ್‌ ಬಂದೋಬಸ್ತಿನಲ್ಲಿ ಪ್ರಶ್ನೆ ಪತ್ರಿಕೆಗಳು, ಸಿಸಿಟಿವಿ ಕಣ್ಗಾವಲು
Last Updated 28 ಫೆಬ್ರುವರಿ 2019, 20:28 IST
ಅಕ್ಷರ ಗಾತ್ರ

ಬೆಂಗಳೂರು: ಶುಕ್ರವಾರದಿಂದ ನಡೆಯುವ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆಗಳಿಗೆ ಚುನಾವಣಾ ವಿದ್ಯುನ್ಮಾನ ಮತಯಂತ್ರಗಳಿಗಿಂತಲೂ ಹೆಚ್ಚಿನ ಭದ್ರತೆ ನೀಡಲಾಗಿದೆ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮತ ಯಂತ್ರಗಳನ್ನು ಟ್ರಜರಿಗಳ ಸ್ಟ್ರಾಂಗ್‌ರೂಮ್‌ಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಪೊಲೀಸ್‌ ಬಂದೋಬಸ್ತಿನಲ್ಲಿ ಇಡಲಾಗುತ್ತದೆ. ಪ್ರಶ್ನೆ ಪತ್ರಿಕೆಗಳಿಗೆ ಅದಕ್ಕಿಂತಲೂ ಹೆಚ್ಚಿನ ಭದ್ರತೆ ನೀಡಲಾಗಿದೆ.

ಪ್ರಶ್ನೆ ಪತ್ರಿಕೆಗಳ ಸಾಗಣೆ ಮತ್ತು ಭದ್ರವಾಗಿ ಇರಿಸುವ ವ್ಯವಸ್ಥೆಯನ್ನು ಚುನಾವಣಾ ಆಯೋಗದ ಮಾದರಿಯನ್ನೇ ಅನುಸರಿಸಲಾಗಿದೆ. ಆದರೆ, ಸ್ಟ್ರಾಂಗ್‌ ರೂಮ್‌ನಲ್ಲಿ ಚುನಾವಣಾ ಆಯೋಗಕ್ಕಿಂತ ಭಿನ್ನವಾದ ಭದ್ರತೆ ನೀಡಲಾಗಿದೆ. ಅಲ್ಲದೆ, ದ್ವಿತೀಯ ಪಿಯುಸಿ ಪರೀಕ್ಷಾ ಕಣ್ಗಾವಲು ನಿಯಂತ್ರಣ ಕೊಠಡಿಯಲ್ಲಿ ಇಲಾಖಾ ಸಿಬ್ಬಂದಿ ಕಳೆದ ಕೆಲ ದಿನಗಳಿಂದ ಹಗಲು ರಾತ್ರಿ ಎನ್ನದೇ ನಿಗಾ ಇರಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಸಿ.ಜಾಫರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಶ್ನೆ ಪತ್ರಿಕೆಗಳನ್ನು ಇರಿಸಿದ ಸ್ಟ್ರಾಂಗ್‌ ರೂಮ್‌ ಕೊಠಡಿಯ ಸಿ.ಸಿ ಟಿ.ವಿ ಕ್ಯಾಮೆರಾಗಳು, ಸೆನ್ಸರ್‌ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಸಂಪರ್ಕಗಳಲ್ಲಿ ವ್ಯತ್ಯಾಸ ಆದರೂ ನಮಗೆ ಆಲರ್ಟ್‌ ಸಂದೇಶಗಳು ಬರುತ್ತವೆ ಎಂದು ಅವರು ವಿವರಿಸಿದರು.

ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಅಕ್ರಮಗಳನ್ನು ತಡೆಗಟ್ಟಲು ಸಿ.ಸಿ ಟಿ.ವಿ ಕ್ಯಾಮೆರಾ, ಬಯೋಮೆಟ್ರಿಕ್ ಮತ್ತು ಸೆನ್ಸರ್‌ಗಳನ್ನು ಬಳಸಲಾಗುತ್ತಿದೆ. ಕಳೆದ ವರ್ಷವೇ ಈ ವ್ಯವಸ್ಥೆ ಜಾರಿಗೆ ತಂದಿದ್ದರೂ ಈ ವರ್ಷ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಕೆಲವು ಭದ್ರತಾ ಅಂಶಗಳನ್ನು(ಸೆಕ್ಯುರಿಟಿ ಫೀಚರ್‌) ಬಹಿರಂಗ ಮಾಡಲು ಆಗುವುದಿಲ್ಲ ಎಂದು ಜಾಫರ್‌ ಹೇಳಿದರು.

ಎಲ್ಲ ಜಿಲ್ಲೆಗಳಲ್ಲಿ ಇರುವ ಪರೀಕ್ಷಾ ಕೇಂದ್ರಗಳು ಮತ್ತು ಖಜಾನೆಗಳಿಗೆ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳು ಪ್ರತಿಯೊಂದು ಚಟುವಟಿಕೆಗಳ ದೃಶ್ಯಗಳನ್ನು ಸೆರೆ ಹಿಡಿದು ನೇರ ಪ್ರಸಾರ ಮಾಡುತ್ತವೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿಯಂತ್ರಣ ಕೊಠಡಿಯಲ್ಲಿರುವ ಸಿಬ್ಬಂದಿ ನಿಗಾ ಇಡುತ್ತಾರೆ. ಪರೀಕ್ಷೆ ಮುಗಿಯುವರೆಗೆ 24x7 ಕಣ್ಣಿಡಲಾಗುತ್ತದೆ ಎಂದು ತಿಳಿಸಿದರು.

ಖಜಾನೆಗಳಲ್ಲಿರುವ ಸ್ಟ್ರಾಂಗ್‌ ರೂಮ್‌ಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇರಿಸಲಾಗುತ್ತದೆ. ಇಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲದೆ ‘ಮೋಷನ್‌ ಸೆನ್ಸರ್’ ಅಳವಡಿಸಿರಲಾಗುತ್ತದೆ. ಸ್ಟ್ರಾಂಗ್ ರೂಮ್‌ಗಳ ಪ್ರವೇಶಕ್ಕೆ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಇವರಿಗೆ ಬಯೊ ಮೆಟ್ರಿಕ್‌ ನೀಡಲಾಗಿರುತ್ತದೆ. ಇದನ್ನು ಬಳಸಿಯೇ ಒಳಗೆ ಪ್ರವೇಶಿಸಲು ಸಾಧ್ಯ. ಬಯೊ ಮೆಟ್ರಿಕ್‌ ಇಲ್ಲದ ಯಾವುದೇ ವ್ಯಕ್ತಿ ಪ್ರವೇಶಿಸುವ ಪ್ರಯತ್ನ ನಡೆಸಿದರೂ ಕ್ಷಣ ಮಾತ್ರದಲ್ಲಿ ಸೆನ್ಸರ್‌ಗಳ ಮೂಲಕ ಮೇಲಧಿಕಾರಿಗಳಿಗೆ ಸಂದೇಶ ತಲುಪುತ್ತದೆ ಎಂದರು.

ಈ ಸಂದೇಶ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಲಾಗುತ್ತದೆ. ಅವರು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಪ್ರಶ್ನೆ ಪತ್ರಿಕೆ ಮುದ್ರಣ ಹಂತ ಮತ್ತು ಅಲ್ಲಿಂದ ಅದನ್ನು ಸಾಗಿಸಿ, ಸ್ಟ್ರಾಂಗ್‌ ರೂಮ್‌ಗೆ ತಲುಪಿಸುವರೆಗೆ ಪ್ರಶ್ನೆ ಪತ್ರಿಕೆಗಳನ್ನು ಹೊತ್ತ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿರುತ್ತದೆ. ಸಾಗಣೆಯೂ ರಹಸ್ಯವಾಗಿರುತ್ತದೆ. ವಾಹನ ಹೋಗುವ ದಾರಿಯಲ್ಲಿ ಸಂದೇಹಾಸ್ಪದ ಸ್ಥಳಗಳಿದ್ದರೆ ಅಲ್ಲಿ ವಿಶೇಷ ನಿಗಾಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

* ಪ್ರಶ್ನೆ ಪತ್ರಿಕೆ ಸೋರಿಕೆಗೆ ಅವಕಾಶವಿಲ್ಲ. ವಿದ್ಯಾರ್ಥಿಗಳು ನಿಶ್ಚಿಂತೆಯಿಂದ ಉತ್ತರ ಬರೆಯಲಿ

-ಪಿ.ಸಿ.ಜಾಫರ್‌,ನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT