ಗುರುವಾರ , ಡಿಸೆಂಬರ್ 3, 2020
20 °C
ಗ್ರಾಮೀಣ ಪ್ರದೇಶದ ಅವಳಿ ಮಕ್ಕಳ ಅಪೂರ್ವ ಸಾಧನೆ

ಪಿಯು: ವಾಣಿಜ್ಯ ವಿಭಾಗದಲ್ಲಿ ಪುತ್ತೂರಿನ ಸ್ವಸ್ತಿಕ್‌ಗೆ 3ನೇ ರ‍್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಇಲ್ಲಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸ್ವಸ್ತಿಕ್ ಪಿ. ಅವರು 594 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ 3ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಪಲ್ಲತ್ತಡ್ಕ ನಿವಾಸಿ ಕೃಷ್ಣಮೂರ್ತಿ ಪಿ. ಮತ್ತು ವಿದ್ಯಾ ದಂಪತಿ ಪುತ್ರನಾದ ಸ್ವಸ್ತಿಕ್ ಅವರು ಸಂಸ್ಕೃತ, ಅರ್ಥಶಾಸ್ತ್ರ, ಅಕೌಂಟ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್‌ನಲ್ಲಿ ತಲಾ 100 ಅಂಕ ಹಾಗೂ ಇಂಗ್ಲಿಷ್‌ನಲ್ಲಿ 95 ಮತ್ತು ವ್ಯವಹಾರ ಅಧ್ಯಯನದಲ್ಲಿ 99 ಅಂಕಗಳೊಂದಿಗೆ ಈ ಸಾಧನೆ ಮಾಡಿದ್ದಾರೆ.

‘ನನಗೆ ಪರೀಕ್ಷೆಯಲ್ಲಿ 590+ ಫಲಿತಾಂಶ ಬರಬಹುದೆನ್ನುವ ನಿರೀಕ್ಷೆಯಿತ್ತು. ರ‍್ಯಾಂಕ್‌ ಸಿಗಬಹುದು ಎನ್ನುವ ನಿರೀಕ್ಷೆ ಇರಲಿಲ್ಲ. ಆದರೆ ರ‍್ಯಾಂಕ್‌ ಬಂದಿರುವುದು ಬಹಳಷ್ಟು ಖುಷಿ ನೀಡಿದೆ’ ಎಂದು ತಿಳಿಸಿರುವ ಸ್ವಸ್ತಿಕ್, ಮುಂದೆ ಸಿಎ ಆಗಬೇಕೆಂಬ ಬಯಕೆ ಹೊಂದಿದ್ದಾರೆ.

‘ಕಠಿಣ ಶ್ರಮದೊಂದಿಗೆ ಚೆನ್ನಾಗಿ ಓದಿದರೆ ಯಾವುದೂ ಅಸಾಧ್ಯವಿಲ್ಲ. ಪರೀಕ್ಷೆಯಲ್ಲಿ ಅಂಕವೇ ಮಾನದಂಡವಲ್ಲ ಎಂದು ಹೆಚ್ಚಿನವರು ಹೇಳುತ್ತಾರೆ. ಆದರೆ, ಅಂಕ ಇಲ್ಲದಿದ್ದರೆ ಏನನ್ನೂ ಸಾಧಿಸಲು ಅಸಾಧ್ಯ ಎಂಬುವುದು ನನ್ನ ಭಾವನೆ’ ಎಂದು ಸ್ವಸ್ತಿಕ್ ಅಭಿಪ್ರಾಯಪಡುತ್ತಾರೆ.

‘ಪ್ರತಿ ದಿನ 5 ಗಂಟೆ ಕಾಲವನ್ನು ಓದಿಗಾಗಿ ಮೀಸಲಿಡುತ್ತಿದ್ದೆ. ಯಾವುದೇ ಪಾಠ ವಿಷಯವನ್ನು ಕಂಠಪಾಠ ಮಾಡದೆ, ಅರ್ಥ ಮಾಡಿಕೊಂಡು ಓದುತ್ತಿದ್ದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಆಶೀರ್ವಾದದಿಂದಾಗಿ ನನ್ನ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಹೆತ್ತವರು ಹಾಗೂ ಉಪನ್ಯಾಸಕ ವರ್ಗದ ಪ್ರೋತ್ಸಾಹ ನನ್ನ ಸಾಧನೆಗೆ ಪ್ರೇರಣೆ ಆಗಿದೆ’ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಅವಳಿ ಮಕ್ಕಳ ಅಪೂರ್ವ ಸಾಧನೆ:

‌ಸ್ವಸ್ತಿಕ್ ಅವರ ತಂದೆ ಬಿಕಾಂ ಪದವೀಧರರಾದ ಕೃಷ್ಣಮೂರ್ತಿ ಅವರು ಬಂಟ್ವಾಳ ತಾಲ್ಲೂಕಿನ ಕನ್ಯಾನ ಸಮೀಪದ ಪದ್ಯಾಣದವರು. ಪದ್ಯಾಣ ಕುಟುಂಬದ ಅವರು ಗ್ರಾಮೀಣ ಪ್ರದೇಶವಾದ ಕೆಯ್ಯೂರಿನ ಪಲ್ಲತ್ತಡ್ಕದಲ್ಲಿ ಜಾಗ ಖರೀದಿಸಿ ಕಳೆದ 35 ವರ್ಷಗಳಿಂದ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಮನೆವಾರ್ತೆ ಜವಾಬ್ದಾರಿ ಹೊತ್ತಿರುವ ತಾಯಿ ವಿದ್ಯಾ ಅವರು ಬಿಎಸ್ಸಿ ಪದವೀಧರೆಯಾಗಿದ್ದಾರೆ. ಇವರ ಅವಳಿ ಮಕ್ಕಳಲ್ಲಿ ಸ್ವಸ್ತಿಕ್ ಮೊದಲನೆಯರಾಗಿದ್ದರೆ, ಸಾತ್ವಿಕಾ ಎರಡನೆಯವರು. ಈ ಅವಳಿ ಮಕ್ಕಳು ಪರೀಕ್ಷೆಯಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲೇ ಕಲಿಯುತ್ತಿದ್ದ ಸಾತ್ವಿಕಾ ಅವರು ಕೂಡ 589 ಅಂಕಗಳನ್ನು ಗಳಿಸಿದ್ದಾರೆ. ಸಂಸ್ಕೃತ, ಅಕೌಂಟ್ಸ್, ಸ್ಟ್ಯಾಟಿಸ್ಟಿಕ್‌ನಲ್ಲಿ ತಲಾ 100 ಅಂಕ ಪಡೆದಿರುವ ಸಾತ್ವಿಕಾ ಅವರು ಇಂಗ್ಲಿಷ್‌ನಲ್ಲಿ ಅಣ್ಣ ಸ್ವಸ್ತಿಕ್ ಅವರು ಪಡೆದಷ್ಟೇ (95) ಅಂಕ ಗಳಿಸಿದ್ದಾರೆ. ಅರ್ಥಶಾಸ್ತ್ರದಲ್ಲಿ 96 ಮತ್ತು ವ್ಯವಹಾರ ಅಧ್ಯಯನದಲ್ಲಿ 98 ಅಂಕಗಳು ಸಾತ್ವಿಕಾ ಅವರಿಗೆ ಬಂದಿದೆ.

ರ‍್ಯಾಂಕ್‌ ಪಡೆಯದಿದ್ದರೂ ಉತ್ತಮ ಅಂಕ ಗಳಿಸುವ ಮೂಲಕ ಅಣ್ಣನ ಸಾಧನೆಯ ಹಾದಿಯಲ್ಲೇ ಸಾತ್ವಿಕಾ ಅವರು ಸಾಗಿ ಬಂದಿದ್ದಾರೆ.

ಅವಳಿ ಮಕ್ಕಳಾದ ಸ್ವಸ್ತಿಕ್ ಮತ್ತು ಸಾತ್ವಿಕಾ ಅವರು ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಬೆಥನಿ ವಿದ್ಯಾಸಂಸ್ಥೆಯಲ್ಲಿ, ಪ್ರೌಢ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನಾ ಪ್ರೌಢ ಶಾಲೆಯಲ್ಲಿ ಪೂರೈಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು