ವಾಣಿಜ್ಯ ವಿಭಾಗದಲ್ಲಿ 596 ಅಂಕ; ಕಡಪ್ಪು ಕೃಷಿಕನ ಪುತ್ರ ರಾಜ್ಯಕ್ಕೆ ಪ್ರಥಮ

ಶುಕ್ರವಾರ, ಏಪ್ರಿಲ್ 19, 2019
23 °C
ದ್ವಿತೀಯ ಪಿಯುಸಿ

ವಾಣಿಜ್ಯ ವಿಭಾಗದಲ್ಲಿ 596 ಅಂಕ; ಕಡಪ್ಪು ಕೃಷಿಕನ ಪುತ್ರ ರಾಜ್ಯಕ್ಕೆ ಪ್ರಥಮ

Published:
Updated:
Prajavani

ವಿಟ್ಲ: ಸಮೀಪದ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ವಾಣಿಜ್ಯ ವಿಭಾಗದ ವಿದ್ಯಾರ್ಥಿ, ಕೃಷಿಕನ ಪುತ್ರ ಶ್ರೀಕೃಷ್ಣ ಶರ್ಮ ಅವರು ಪಿಯುಸಿ ಪರೀಕ್ಷೆಯಲ್ಲಿ 596 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇವರು ಕಾಸರಗೋಡು ತಾಲ್ಲೂಕಿನ ಕಡಪ್ಪು ನಿವಾಸಿ ಸುಬ್ರಹ್ಮಣ್ಯ ಭಟ್ ಹಾಗೂ ಶಾರದಾ ದಂಪತಿಯ ಪುತ್ರ. ಇಂಗ್ಲಿಷ್ ವಿಷಯದಲ್ಲಿ 96 ಅಂಕ ಪಡೆದಿದ್ದು, ವಾಣಿಜ್ಯ ವಿಭಾಗದ ಇನ್ನುಳಿದ ಎಲ್ಲಾ ವಿಷಯದಲ್ಲಿ ತಲಾ 100 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ.

ಶ್ರೀಕೃಷ್ಣ ಶರ್ಮ ಅವರ ತಂದೆ ತಾಯಿ ಹೆಚ್ಚು ಕಲಿತವರಲ್ಲ. ಆದರೂ ಪುತ್ರನಿಗೆ ನಿರಂತರ ಮಾರ್ಗದರ್ಶನ ನೀಡುತ್ತಿದ್ದರು. ತಂದೆ ಹಾಗೂ ತಾಯಿ ಪಿಯುಸಿ ಓದಿದ್ದಾರೆ. ತಂದೆ ಪ್ರಸ್ತುತ ಮನೆ ತೋಟದಲ್ಲಿ ಕೃಷಿಕರಾಗಿ ದುಡಿಯುತ್ತಿದ್ದಾರೆ. ತಾಯಿ ಗೃಹಿಣಿ. ಶ್ರೀಕೃಷ್ಣ ಅವರು ಕೇರಳದ ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದು, ಪಬ್ಲಿಕ್ ಪರೀಕ್ಷೆಯಲ್ಲಿ ಶೇ 95 ಅಂಕ ಪಡೆದಿದ್ದರು. 

‘ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕರ ಸಹಕಾರ, ಇಲ್ಲಿ ಪ್ರತಿದಿನ ಮಾಡುತ್ತಿದ್ದ ಭಜನೆ ಹಾಗೂ ಮಾರ್ಗದರ್ಶನದಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರತಿದಿನ ಒಂದೂವರೆ ಗಂಟೆ ಮಾತ್ರ ಓದುತ್ತಿದ್ದೆ. ಇಲ್ಲಿಯ ಶಿಕ್ಷಕರು ನನ್ನ ಮೇಲೆ ಭರವಸೆ ಇಟ್ಟುಕೊಂಡಿದ್ದರು. ಅದರಂತೆ ಇಂದು ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಮುಂದೆ ನಾನು ಚಾರ್ಟೆಡ್‌ ಅಕೌಟೆಂಟ್ ಆಗುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಶ್ರೀಕೃಷ್ಣ ಶರ್ಮ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !