ಪಿಯು ಮೌಲ್ಯಮಾಪನಕ್ಕೆ ಸಾಮೂಹಿಕ ಗೈರು?

ಬುಧವಾರ, ಮಾರ್ಚ್ 20, 2019
31 °C
ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಉಪನ್ಯಾಸಕರ ಸಂಘರ್ಷ ತಾರಕಕ್ಕೆ

ಪಿಯು ಮೌಲ್ಯಮಾಪನಕ್ಕೆ ಸಾಮೂಹಿಕ ಗೈರು?

Published:
Updated:

ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇದರ ಪರಿಣಾಮ ಉಪನ್ಯಾಸಕರು ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಾಮೂಹಿಕ ಗೈರಾಗುವ ಸಾಧ್ಯತೆ ಇದೆ.

ಈ ಸಂಬಂಧ ಇದೇ 12 ರಂದು ಉಪನ್ಯಾಸಕರ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕಾರ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸುಮಾರು 6 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಒಗ್ಗಟ್ಟು ಒಡೆಯಲು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೆಲವು ಲೆಟರ್‌ ಹೆಡ್‌ ಸಂಘಟನೆಗಳನ್ನು ಹುಟ್ಟು ಹಾಕಿದ್ದಾರೆ ಮತ್ತು ನೈಜ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಬದಲು ಹೊಸ ಸಮಸ್ಯೆಗಳ ಮೂಲಕ ಬಿಕ್ಕಟ್ಟು ಸೃಷ್ಟಿಸಿ, ಉಪನ್ಯಾಸಕರ ಗಮನ ಬೇರೆಡೆ ಸೆಳೆಯಲಾಗಿದೆ’ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಆರೋಪಿಸಿದ್ದಾರೆ.

‘ಇದೇ 8 ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಉಪನ್ಯಾಸಕರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸಭೆ ಕರೆದಿದ್ದರು. ಈ ಸಭೆಯನ್ನು ತರಾತುರಿಯಿಂದ ಕರೆಯಲಾಗಿತ್ತು. ಕೆಲವು ನಾಮಕಾವಸ್ಥೆ ಸಂಘಟನೆಗಳಿಗೂ ಆಹ್ವಾನ ನೀಡಿದ್ದರು. ನಮ್ಮ ನೈಜ ಬೇಡಿಕೆಗಳನ್ನು ಮೂಲೆಗುಂಪು ಮಾಡುವ ಉದ್ದೇಶ ಹೊಂದಿದ್ದ ಕಾರಣ ನಮ್ಮ ಸಂಘ ಮತ್ತು ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳು ಭಾಗವಹಿಸಿರಲಿಲ್ಲ’ ಎಂದು ಅವರು ಹೇಳಿದರು.

‘ಲೆಟರ್ ಹೆಡ್ ಸಂಘಟನೆಗಳಿಗೆ ಆಹ್ವಾನ ನೀಡಿ ಸಭೆಯಲ್ಲಿ ನಮ್ಮ ವಿರುದ್ಧ ಮಾತನಾಡಲು ಅಧಿಕಾರಿಗಳು ಕುತಂತ್ರ ನಡೆಸಿದ್ದಾರೆ. ನಮ್ಮ ಸಂಘಕ್ಕೆ ಸರ್ಕಾರ ಮಾನ್ಯತೆ ನೀಡಿದೆ. ಇಲಾಖೆ ಮಾತುಕತೆ ನಡೆಸುವುದಿದ್ದರೆ, ನಮ್ಮ ಸಂಘದ ಜತೆಗೇ ನಡೆಸಬೇಕೇ ಹೊರತು, ಇತರ ಸಂಘಟನೆಗಳ ಜತೆ ನಡೆಸುವಂತಿಲ್ಲ. ಆದರೆ, ನಮ್ಮನ್ನು ಉದ್ದೇಶಪೂರ್ವಕವಾಗಿಯೇ ದೂರ ಇಟ್ಟು ಸಭೆ ನಡೆಸುವುದು ಅವರ ಉದ್ದೇಶವಾಗಿತ್ತು. ಆದ ಕಾರಣ ಸಭೆ ಬಹಿಷ್ಕರಿಸಿದೆವು’ ಎಂದು ಹೇಳಿದ್ದಾರೆ.

ಉಪನ್ಯಾಸಕರ ಸಂಘದ ಷರತ್ತುಗಳು:
* 971 ರಿಂದ ಇದ್ದಂತೆ ಪ್ರತಿ ಶೈಕ್ಷಣಿಕ ವರ್ಷವೂ ಏಪ್ರಿಲ್‌ ಮತ್ತು ಮೇ ತಿಂಗಳುಗಳ ಬೇಸಿಗೆ ರಜೆಯ ಸೌಲಭ್ಯವನ್ನು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ನೀಡಬೇಕು.

* ಮೇ ಮೊದಲ ವಾರದಿಂದಲೇ ಪಿಯು ತರಗತಿ ಆರಂಭಿಸುವುದಾದರೆ, ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ತಕ್ಷಣವೇ ರಜೆ ರಹಿತ ಎಂದು ಆದೇಶ ಹೊರಡಿಸಬೇಕು.

* ಪ್ರತಿ ವರ್ಷ ಉಪನ್ಯಾಸಕರಿಗೆ 30 ಗಳಿಕೆ ರಜೆ, 20 ಅರ್ಧ ವೇತನ ರಜೆ ಹಾಗೂ ತಿಂಗಳಿನ ಎರಡನೇ ಶನಿವಾರದ ರಜೆ ಮತ್ತು ಇತರ ರಜಾ ಸೌಲಭ್ಯಗಳನ್ನು ಒದಗಿಸಿಕೊಡಬೇಕು.

* 2019 ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಐಚ್ಛಿಕವಾದುದು ಎಂದು ಆದೇಶ ಹೊರಡಿಸಬೇಕು. 

* ಮೌಲ್ಯಮಾಪನಕ್ಕೆ ಗೈರಾಗುವುದರಿಂದ ಎದುರಾಗುವ ಸಮಸ್ಯೆಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯೇ ಹೊಣೆಗಾರಿಕೆ ಹೊರಬೇಕು.

ಬಹಿಷ್ಕರಿಸಿದರೆ ಕಠಿಣ ಕ್ರಮ: ಜಾಫರ್
ಮೌಲ್ಯಮಾಪನ ಬಹಿಷ್ಕರಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಪಿ.ಸಿ.ಜಾಫರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಉಪನ್ಯಾಸಕರ ಸಂಘಟನೆಗಳು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ನಡೆಸಬಾರದು. ಬೇಡಿಕೆಗಳು ಮತ್ತು ಮೌಲ್ಯಮಾಪನ ಜತೆ ತಳುಕು ಹಾಕಿ ಬೆದರಿಕೆ ತಂತ್ರ ಅನುಸರಿಸಬಾರದು ಎಂದು ಅವರು ಹೇಳಿದರು.

ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯು ತರಗತಿ ಆರಂಭಿಸಬೇಕು ಎಂಬುದು ಸರ್ಕಾರದ ನಿರ್ಧಾರ. ಮುಖ್ಯಮಂತ್ರಿಯವರ ಸೂಚನೆಯ ಇದೆ. ಸರ್ಕಾರಿ ಪರವಿಪೂರ್ವ ಕಾಲೇಜುಗಳಲ್ಲಿ ಓದುವ ಬಡ ಮಕ್ಕಳ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !