ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ನೇಮಕಾತಿ: ಬದಲಾದ ಅಂತಿಮ ಪಟ್ಟಿ

ಪಿಯು ಉಪನ್ಯಾಸಕರು: ಉದ್ಯೋಗಾಕಾಂಕ್ಷಿಗಳಲ್ಲಿ ಮೂಡಿದ ಗೊಂದಲ
Last Updated 13 ಜುಲೈ 2019, 18:40 IST
ಅಕ್ಷರ ಗಾತ್ರ

ದಾವಣಗೆರೆ: ಪಿ.ಯು. ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ದಾಖಲೆ ಪರಿಶೀಲನೆಗಾಗಿ 1:2 ಪಟ್ಟಿಯನ್ನು ಎರಡು ಬಾರಿ ಭಿನ್ನ ರೀತಿಯಲ್ಲಿ ಪ್ರಕಟಿಸಲಾಗಿದೆ. ಇದು ಪರೀಕ್ಷೆ ಬರೆದವರಲ್ಲಿ ಗೊಂದಲ ಉಂಟುಮಾಡಿದೆ. ಮೊದಲ ಪಟ್ಟಿಯಲ್ಲಿ ಅರ್ಹತೆ ಪಡೆದಿದ್ದ ಹೆಸರುಗಳು ಎರಡನೇ ಪಟ್ಟಿಯಲ್ಲಿ ಕೆಳಗೆ ಹೋಗಿರುವುದು ಕೆಲವರಿಗೆ ಆತಂಕ ಮೂಡಿಸಿದೆ.

1069 ಹುದ್ದೆಗಳನ್ನು ಭರ್ತಿ ಮಾಡಲು 2015ರಲ್ಲಿ ಮೊದಲ ಬಾರಿ ಅರ್ಜಿ ಆಹ್ವಾನಿಸಲಾಗಿತ್ತು. ಬಳಿಕ 2016 ಮತ್ತು 2017ರಲ್ಲಿ ಮತ್ತೆರಡು ಬಾರಿ ಮಾರ್ಪಾಡು ಮಾಡಿ ಅಧಿಸೂಚನೆ ಹೊರಡಿಸಲಾಗಿತ್ತು. 2018ರ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆದಿತ್ತು. 2019ರ ಮಾರ್ಚ್‌ನಲ್ಲಿ ಉತ್ತರ ಪ್ರಕಟಿಸಲಾಗಿತ್ತು. ಮೇ ತಿಂಗಳಲ್ಲಿ ಅಂತಿಮ ಅರ್ಹತಾ ಪಟ್ಟಿ ಪ್ರಕಟಗೊಂಡಿತ್ತು.

ಹೈದರಾಬಾದ್‌–ಕರ್ನಾಟಕ (ಸ್ಥಳೀಯ ವೃಂದ) ಮತ್ತು ಇತರ ಜಿಲ್ಲೆಗಳು (ಮೂಲವೃಂದ) ಎಂಬ ಎರಡು ವಿಭಾಗ ಮಾಡಲಾಗಿದೆ. ಜೂನ್‌ 1ರಂದು ಪ್ರಕಟಿಸಲಾದ 1:2 ಪಟ್ಟಿಯಲ್ಲಿ ಇವೆರಡು ವಿಭಾಗಗಳನ್ನು ಪ್ರತ್ಯೇಕವಾಗಿ ನೀಡಲಾಗಿತ್ತು. ಜುಲೈ 6ರಂದು ಮತ್ತೊಮ್ಮೆ 1:2 ಪಟ್ಟಿ ಪ್ರಕಟಿಸಲಾಗಿದ್ದು, ಅದರಲ್ಲಿ ಹೈದರಾಬಾದ್‌ ಕರ್ನಾಟಕದ ಮೀಸಲು ಪಟ್ಟಿ ಹಾಗೇ ಇದೆ. ಆದರೆ ‘ನಾನ್‌ ಹೈದರಾಬಾದ್‌–ಕರ್ನಾಟಕ’ ಪಟ್ಟಿಯಲ್ಲಿ ಹೈದರಾಬಾದ್‌ ಕರ್ನಾಟಕದ ಅಭ್ಯರ್ಥಿಗಳ ಹೆಸರು ಸೇರ್ಪಡೆಗೊಂಡಿದೆ. ಇದರಿಂದ ಇತರ ಜಿಲ್ಲೆಗಳ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ ಎಂದು ಉದ್ಯೋಗಾಕಾಂಕ್ಷಿ ಅನ್ಸರ್‌ ರೆಹಮಾನ್‌ ತಿಳಿಸಿದ್ದಾರೆ.

‘ಎರಡೂ ಪಟ್ಟಿಗಳಲ್ಲಿ ನನ್ನ ಹೆಸರಿದೆ. ಆದರೆ ಮೊದಲ ಪಟ್ಟಿಯ ಪ್ರಕಾರ ಉದ್ಯೋಗ ಖಾತ್ರಿ ಇತ್ತು. ಆದರೆ ಎರಡನೇ ಪಟ್ಟಿಯಲ್ಲಿ ನನ್ನ ಹೆಸರು ಕೆಳಗೆ ಹೋಗುವುದರಿಂದ ಉದ್ಯೋಗ ಖಾತ್ರಿ ಇಲ್ಲ. ಎರಡನೇ ಪಟ್ಟಿಯಿಂದಾಗಿ ನನ್ನ ಹಾಗೆ 150 ಅಭ್ಯರ್ಥಿಗಳು ತೊಂದರೆಗೆ ಸಿಲುಕಿದ್ದಾರೆ’ ಎನ್ನುತ್ತಾರೆ ಅವರು.

‘ನಿಯಮದ ಪ್ರಕಾರ ಸ್ಥಳೀಯ ವೃಂದದಲ್ಲಿ ಶೇ 75 ಹೈದರಾಬಾದ್‌–ಕರ್ನಾಟಕಕ್ಕೆ ಮೀಸಲಿಡಬೇಕು. ‌ಶೇ 25 ಮೆರಿಟ್‌ ಆಧಾರದಲ್ಲಿ ಭರ್ತಿ ಮಾಡಬೇಕು. ಸ್ಥಳೀಯ ವೃಂದದಲ್ಲಿ ಮೆರಿಟ್‌ ಆಧಾರದಲ್ಲಿ ಇತರರಿಗೆ ಅವಕಾಶ ನೀಡದೆ ನಿಯಮ ಉಲ್ಲಂಘಿಸಲಾಗಿದೆ. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಡಳಿತಾಧಿಕಾರಿಗಳಿಗೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಟ್ಟಿಯನ್ನು ನಿಯಮ ಪ್ರಕಾರ ಪರಿಷ್ಕರಿಸಿ ಪ್ರಕಟಿಸದಿದ್ದರೆ ನ್ಯಾಯಾಲಯದ ಮೆಟ್ಟಿಲು ಏರುವುದು ಅನಿವಾರ್ಯ’ ಎಂದು ಎಚ್ಚರಿಸಿದ್ದಾರೆ.

**

2016ರ ಅಧಿಸೂಚನೆಯನ್ನು ಮುಚ್ಚಿಟ್ಟಿದ್ದೇ ಸಮಸ್ಯೆಗೆ ಕಾರಣ. ಮೊದಲ ಪಟ್ಟಿಯನ್ನೇ ಅಂತಿಮಗೊಳಿಸಬೇಕು. ಇಲ್ಲವೇ ಎರಡನೇ ಪಟ್ಟಿಯನ್ನು ನಿಯಮದ ಪ್ರಕಾರ ಪರಿಷ್ಕರಿಸಬೇಕು.
-ಅನ್ಸರ್‌ ರೆಹಮಾನ್‌, ಉದ್ಯೋಗಾಕಾಂಕ್ಷಿ

*

ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಅಧಿಸೂಚನೆ ಪ್ರಕಟಿಸಲಾಗಿದೆ. ಇಲಾಖೆಯಿಂದ ಲೋಪವಾಗಿಲ್ಲ. ಹುದ್ದೆ ಸಿಗದೇ ಇದ್ದಾಗ ದೂರು ಸಹಜ.
-ಉಷಾದೇವಿ, ಪ್ರಭಾರ ಉಪನಿರ್ದೇಶಕಿ, ಪಿಯು ಶಿಕ್ಷಣ ಇಲಾಖೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT