ಭಾನುವಾರ, ಫೆಬ್ರವರಿ 23, 2020
19 °C
ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಸಿದ್ಧತೆ

ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗಿದೆ. ಡಿ. 7ರಂದು ಕರಡು ಪಟ್ಟಿ ಪ್ರಕಟಿಸಲಾಗಿದೆ’ ಎಂದು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಲೇಮುಗಳು ಹಾಗೂ ಆಕ್ಷೇಪಣೆ ಸಲ್ಲಿಸುವುದಕ್ಕೆ ಡಿ. 23ರವರೆಗೆ ಅವಕಾಶವಿದೆ. ಜ. 10ರಂದು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. ಜ. 16ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಹಿಂದೆ ಈ ಚುನಾವಣೆಯನ್ನು ಹಳೆಯ ಮತದಾರರ ಪಟ್ಟಿ ಬಳಸಿ ನಡೆಸಲಾಗಿದೆ. ಆದರೆ, ಇನ್ಮುಂದೆ ಪದವೀಧರರ ಕ್ಷೇತ್ರದ ಪ್ರತಿ ಚುನಾವಣೆಯಲ್ಲೂ ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಹೀಗಾಗಿ, ಮತದಾರರು ನಮೂನೆ–18ನ್ನು ಸಲ್ಲಿಸಿ ಹೆಸರು ನೋಂದಾಯಿಸಬೇಕು. ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಪದವೀಧರರು ಮತದಾರರಾಗಲು ಅರ್ಹರಿದ್ದಾರೆ. 2016ರ ನ.1ರ ಒಳಗೆ ಪದವಿ ಪಡೆದಿರಬೇಕು’ ಎಂದು ತಿಳಿಸಿದರು.

‘ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ವ್ಯಾಪ್ತಿಯ ವಿಶ್ವವಿದ್ಯಾಲಯಗಳ ಮೂಲಕ ಪದವೀಧರರ ವಿವರ ಸಂಗ್ರಹಿಸುತ್ತಿದ್ದೇವೆ. ಹೆಸರು ಸೇರ್ಪಡೆ, ಪರಿಷ್ಕರಣೆಗೆ ಇನ್ನೂ ಸಮಯಾವಕಾಶವಿದೆ. ಪದವೀಧರರು ಈಗ ಪ್ರಕಟಿಸಲಾಗಿರುವ ಕರಡು ಪಟ್ಟಿಯನ್ನು ಪರಿಶೀಲಿಸಿ, ತಮ್ಮ ಹೆಸರು ಹಾಗೂ ವಿಳಾಸ ಸರಿಯಾಗಿದೆಯೇ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಈವರೆಗೆ 47,898 ಮಂದಿ ನೋಂದಾಯಿಸಿದ್ದಾರೆ’ ಎಂದು ಹೇಳಿದರು.

‌‘ಚುನಾವಣೆಯು ಜೂನ್‌ನಲ್ಲಿ ನಡೆಯಲಿದೆ. ದಿನಾಂಕ ನಿಗದಿಯಾಗಿಲ್ಲ. ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ನಾಮಪತ್ರಗಳ ಸ್ವೀಕಾರ, ಪರಿಶೀಲನೆ, ಮತ ಎಣಿಕೆ ಪ್ರಕ್ರಿಯೆ ಬೆಳಗಾವಿಯಲ್ಲೇ ನಡೆದಿತ್ತು. ಈ ಬಾರಿ, ಧಾರವಾಡದಲ್ಲಿ ನಡೆಸುವುದು ಸೂಕ್ತ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಅದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು. ಬಳಿಕ ಸ್ಥಳದ ಬಗ್ಗೆ ನಿರ್ಧಾರವಾಗಲಿದೆ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದರು. ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)