ಬುಧವಾರ, ಡಿಸೆಂಬರ್ 2, 2020
23 °C

ಇಂದು ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ, ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್ ಘೋಷಣೆಯಾದ ಪರಿಣಾಮ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್‌ ವಿಷಯದ ಪರೀಕ್ಷೆ ಗುರುವಾರ ಬೆಳಿಗ್ಗೆ 10.15ರಿಂದ 1.30ರವರೆಗೆ ರಾಜ್ಯದ 1,016 ಕೇಂದ್ರಗಳಲ್ಲಿ ನಡೆಯಲಿದೆ.

‘ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಖಗವಸು ಹಾಕಿಕೊಂಡೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಜ್ವರದ ಲಕ್ಷಣ ಇಲ್ಲದವರು ಮಾತ್ರ ಪರೀಕ್ಷಾ ಕೊಠಡಿಗೆ ತೆರಳಬಹುದು. ಜ್ವರದ ಲಕ್ಷಣ ಕಂಡು ಬಂದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಗುವುದು‌’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ಪರೀಕ್ಷಾ ಕೇಂದ್ರ ಬದಲಾವಣೆ ಬಯಸಿದ್ದ ವಿದ್ಯಾರ್ಥಿಗಳು ತಾಂತ್ರಿಕ ಕಾರಣಕ್ಕೆ ಕೇಂದ್ರ ಬದಲಾವಣೆ ಆಗದಿದ್ದಲ್ಲಿ ಅಥವಾ ಅಲ್ಲಿಗೆ ಹೋಗಲು ಅಸಾಧ್ಯವಾಗಿದ್ದಲ್ಲಿ ತಮ್ಮ ಹಿಂದಿನ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಜ್ವರದಿಂದ ಪರೀಕ್ಷೆ ಬರೆಯಲು ಅಸಾಧ್ಯವಾದವರಿಗೆ ಪೂರಕ ಪರೀಕ್ಷೆ ವೇಳೆ ಅವರನ್ನು ಹೊಸದಾಗಿ ಬರೆಯುವ ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತದೆ.

ಒಂದು ಕೊಠಡಿಯಲ್ಲಿ ಗರಿಷ್ಠ 24 ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಮಾರ್ಚ್‌ನಲ್ಲಿ ಇದ್ದ ಪರೀಕ್ಷಾ ಕೊಠಡಿಗಳಿಗೆ ಹೋಲಿಸಿದರೆ ಈ ಬಾರಿ 13,528 ಕೊಠಡಿಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ.

ಸಿಬಿಎಸ್‌ಇ ಪರೀಕ್ಷೆ: ಶೀಘ್ರ ನಿರ್ಧಾರ
ನವದೆಹಲಿ (ಪಿಟಿಐ):
ಸಿಬಿಎಸ್‌ಇ 12ನೇ ತರಗತಿಯ ಬಾಕಿ ಉಳಿದಿರುವ ವಿಷಯಗಳ ಪರೀಕ್ಷೆಗಳನ್ನು ನಡೆಸಬೇಕೇ, ಬೇಡವೇ ಎನ್ನುವುದರ ಕುರಿತು ಶೀಘ್ರದಲ್ಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಹಿಂದೆ ಜುಲೈ 1ರಿಂದ ಜುಲೈ 15ರವರೆಗೆ ಪರೀಕ್ಷೆ ನಡೆಸುವುದಾಗಿ ಸಿಬಿಎಸ್‌ಇ ಘೋಷಿಸಿತ್ತು. ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದ ಪರೀಕ್ಷೆಗಳನ್ನು ರದ್ದುಗೊಳಿಸಲು ಕೋರಿ ಪೋಷಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಂ.ಖಾನ್‌ವಿಲ್ಕರ್‌ ಅವರಿದ್ದ ನ್ಯಾಯಪೀಠವು ವಿಡಿಯೊ ಕಾನ್ಫರೆನ್ಸ್‌ ಮೂಲಕ ಬುಧವಾರ ಕೈಗೆತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶ ನೀಡುವಂತೆ ಸಿಬಿಎಸ್‌ಇ ಪರ ವಕೀಲ ರೂಪೇಶ್‌ ಕುಮಾರ್‌ ಕೋರಿದರು. ಸಿಬಿಎಸ್‌ಇ ಮನವಿ ಪರಿಗಣಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಜೂನ್‌ 23ಕ್ಕೆ ಮುಂದೂಡಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು